Advertisement

ಗೌರಿ ಹತ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು

11:24 AM Sep 08, 2017 | Team Udayavani |

ಮೈಸೂರು: ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ ಕಾನೂನು ಪ್ರಕಾರ ದಂಡಿಸಬೇಕು ಎಂದು ವಿಚಾರವಾದಿ ಪ್ರೊ.ಕೆ.ಎಸ್‌.ಭಗವಾನ್‌ ಆಗ್ರಹಿಸಿದರು.

Advertisement

ಮೈಸೂರು ನಗರ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸಂಯುಕ್ತಾಶ್ರಯದಲ್ಲಿ ನಗರ ಕಸಾಪ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಹಿರಿಯ ಪತ್ರಕರ್ತೆ ದಿ. ಗೌರಿ ಲಂಕೇಶ್‌ ನುಡಿ ನಮನದಲ್ಲಿ ಮಾತನಾಡಿದರು.

ಬೆದರಿಕೆ ಕರೆಗಳನ್ನು ಗಂಭೀರವಾಗಿ ಪರಿಗಣಿಸಿದ್ದರೆ, ಗೌರಿ ಇಷ್ಟು ಬೇಗ ನಮ್ಮನ್ನು ಅಗಲುತ್ತಿರಲಿಲ್ಲ ಎಂದ ಅವರು, ತನಗೆ ಬೆದರಿಕೆ ಕರೆ ಬಂದ ಪೊಲೀಸರಿಗೆ ಮಾಹಿತಿ ರವಾನಿಸುತ್ತಿರುತ್ತೇನೆ. ಗೌರಿ ಕೂಡ ಈ ರೀತಿ ಎಚ್ಚರಿಕೆ ವಹಿಸಬೇಕಿತ್ತು ಎಂದರು.

ವರದಿ ಕೇಳಿರುವುದು ಸ್ವಾಗತಾರ್ಹ: ಗೌರಿ ಹತ್ಯೆಯಿಂದ ರಾಜ್ಯದಲ್ಲಿ ಭಯಾನಕ ವಾತಾವರಣ ಸೃಷ್ಟಿಯಾಗಿದೆ. 2 ವರ್ಷಗಳ ಹಿಂದೆ ಕಲುºರ್ಗಿಯವರ ಹತ್ಯೆಯಾದಾಗ ಇಡೀ ರಾಜ್ಯ ತಲ್ಲಣಗೊಂಡಿತ್ತು. ಗೌರಿ ಹತ್ಯೆ ಇಡೀ ರಾಷ್ಟ್ರವನ್ನು ತಲ್ಲಣಗೊಳಿಸಿದೆ. ಸ್ವತಃ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ಗೌರಿ ಹತ್ಯೆ ಕುರಿತು ವರದಿ ಕೇಳಿರುವುದು ಸ್ವಾಗತಾರ್ಹ ಎಂದು ಹೇಳಿದರು.

ಆಲೋಚನೆ, ಬರವಣಿಗೆ, ಹೋರಾಟಗಳಲ್ಲಿ ಗೌರಿ, ತನ್ನ ತಂದೆ ಲಂಕೇಶ್‌ಗಿಂತಲೂ ಮುಂದಿದ್ದರು, ಮಡೆಸ್ನಾನ ವಿರೋಧಿ ಹೋರಾಟ, ನಕ್ಸಲ್‌, ರೈತ, ದಲಿತ ಹೋರಾಟಗಳನ್ನು ಬೆಂಬಲಿಸಿ ದೊಡ್ಡಪಡೆಯನ್ನೇ ಕಟ್ಟಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ಗೌರಿ ವಿಚಾರಕ್ಕೆ ಜಾಗತಿಕ ಮನ್ನಣೆ: ಗೌರಿಯನ್ನು ಕೊಂದ ಕೊಲೆಗಾರರ ಬಗ್ಗೆ ತಮಗೆ ದ್ವೇಷವಿದ್ದರೂ ಗೌರಿಯನ್ನು ಜಾಗತಿಕ ವ್ಯಕ್ತಿಯಾಗಿಸಿದ್ದಕ್ಕೆ ಸಮಾಧಾನವಿದೆ. ಹಂತಕರು ಕೊಲೆ ಮಾಡದಿದ್ದರೆ ಗೌರಿಯವರ ವಿಚಾರಗಳಿಗೆ ಜಾಗತಿಕವಾಗಿ ಇಷ್ಟು ಮನ್ನಣೆ ಸಿಗುತ್ತಿರಲಿಲ್ಲ ಎಂದರು. ಸಾಹಿತಿ ಪ್ರೊ.ಸಿಪಿಕೆ ಮಾತನಾಡಿ, ಗೌರಿ ಕಗ್ಗೊಲೆ ನಾಡಿನ ಧಾರುಣ ದುರಂತ. ಈ ದುರಂತದಲ್ಲೂ ಸಂಭ್ರಮಿಸುವ ಕೊಳಕು ಮನಸ್ಸುಗಳಿರುವುದು ಇನ್ನೂ ದುರಂತ ಎಂದರು.

ಅಸಹಿಷ್ಣುತೆ: ಗೌರಿ ಹತ್ಯೆ ಹಿಂದಿನ ಕಾರಣಗಳನ್ನು ಸರ್ಕಾರ ಪತ್ತೆಹಚ್ಚಿ, ನಿಗೂಢತೆ ಬೇಧಿಸಬೇಕು. ಆದರೆ, ಸರ್ಕಾರದ ಕ್ರಮ ಗಂಭೀರತೆಯಿಂದ ಕೂಡಿಲ್ಲ. ಔಪಚಾರಿಕತೆಯನ್ನಷ್ಟೇ ಮಾಡುತ್ತಿರುವಂತೆ ಕಾಣುತ್ತಿದೆ. ಸಮಾಜದಲ್ಲಿ  ಅಸಹಿಷ್ಣುತೆ ತಾಂಡವವಾಡುತ್ತಿದೆ ಎಂದ ಅವರು, ಅಭಿಪ್ರಾಯ ಇಷ್ಟವಾಗದಿದ್ದರೆ ಅದನ್ನು ವೈಚಾರಿಕೆಯಿಂದಲೇ ಎದುರಿಸಬೇಕು, ಕೊಲೆಯಿಂದಲ್ಲ ಎಂದರು.

ಮಾನವೀಯ ಮೌಲ್ಯ ಅವಶ್ಯ: ವೇದಿಕೆ ಅಧ್ಯಕ್ಷ ಕೆ.ಎಸ್‌.ಶಿವರಾಂ, ಹಿಂದೂ ಯುವಕರ ಹತ್ಯೆಯಾದ ಕೂಡಲೇ ಖಂಡಿಸುವ ಶೋಭಾ ಕರಂದ್ಲಾಜೆ ಹಾಗೂ ಸ್ವತಃ ಪತ್ರಕರ್ತರಾಗಿರುವ ಸಂಸದ ಪ್ರತಾಪ್‌ಸಿಂಹ ಅವರು ಗೌರಿ ಲಂಕೇಶ್‌ ಹತ್ಯೆಯನ್ನು ಖಂಡಿಸದಿರುವುದು, ಅವರ ಮನಸ್ಥಿತಿ ಎಂತದ್ದು ಎಂಬುದನ್ನು ತೋರಿಸುತ್ತದೆ. ಹಿಂದೂ ಕಾರ್ಯಕರ್ತರ ಹತ್ಯೆಯನ್ನು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗುವವರು ಇನ್ನಾದರೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್‌, ಕೋಶಾಧ್ಯಕ್ಷ ರಾಜಶೇಖರ ಕದಂಬ, ಮೂಗೂರು ನಂಜುಂಡಸ್ವಾಮಿ, ಎಚ್‌.ಬೀರಪ್ಪ ಮತ್ತಿತರರಿದ್ದರು.

ತಮ್ಮ ಗೌರಿ ಲಂಕೇಶ್‌ ಪತ್ರಿಕೆಗೆ ತನ್ನಿಂದ ಪ್ರತಿ ವಾರ ಒತ್ತಾಯ ಪೂರ್ವಕವಾಗಿ ವೈಚಾರಿಕ ಲೇಖನಗಳನ್ನು ಬರೆಸುತ್ತಿದ್ದರು. ಗೌರಿ ಯಾವ ಸಿದ್ಧಾಂತಕ್ಕಾಗಿ ಹೋರಾಟ ಮಾಡಿದ್ದರೋ ಆ ಹೋರಾಟವನ್ನು ಮುಂದುವರಿಸಿದಾಗ ಮಾತ್ರ ಗೌರಿಗೆ ನಿಜವಾಗಿ ಗೌರವ ಸಲ್ಲಿಸಿದಂತಾಗುತ್ತದೆ. ಇಲ್ಲವಾದಲ್ಲಿ ಇದೆಲ್ಲ ಬೂಟಾಟಿಕೆಯಾಗುತ್ತದೆ.
-ಪ್ರೊ.ಕೆ.ಎಸ್‌.ಭಗವಾನ್‌, ವಿಚಾರವಾದಿ

Advertisement

Udayavani is now on Telegram. Click here to join our channel and stay updated with the latest news.

Next