Advertisement
ಪಾರ್ವತಿ ಸುತನ ಮರು ಹುಟ್ಟಿನ ನಂತರ ಭೂಮಿಗೆ ಬಂದು ಕೈಲಾಸಕ್ಕೆ ವಾಪಸ್ಸಾಗುತ್ತಾನೆ ಎಂಬ ನಂಬಿಕೆ ಇಟ್ಟುಕೊಂಡಿರುವ ಹಿಂದುಗಳು ಭಾದ್ರಪದ ಮಾಸದ ಚೌತಿಯ ದಿನ ತಮ್ಮ ಮನೆಯಲ್ಲಿ ಮಣ್ಣಿನ ರೂಪದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ಪೂಜಿಸಿ, ಭಕ್ಷ ನೈವೇದ್ಯ ಅರ್ಪಿಸುತ್ತಾರೆ. ಈಚತುರ್ಥಿ ಇತ್ತೀಚಿಗೆ ಹಿಂದುಗಳ ಪಾಲಿನ ಅತಿ ದೊಡ್ಡ ಹಬ್ಬ. ಈ ಬಾರಿ ಆ. 25ರಂದು ಗಣೇಶ ಚತುರ್ಥಿ. ಸತತ ಬರದ ಬವಣೆ ಮಧ್ಯೆಯೂ ಗಣೇಶೋತ್ಸವಕ್ಕೆ ಎಲ್ಲೆಡೆ ಭರದ ಸಿದ್ಧತೆ ನಡೆದಿವೆ. ಬೀದಿಗಳಲ್ಲಿ ಗಣೇಶ ಪ್ರತಿಷ್ಠಾಪನೆಗೆ ನಗರದ ಹಲವು ಕಡೆ ಈಗಾಗಲೇ ವೇದಿಕೆ ಸಿದ್ಧತಾ ಕಾರ್ಯಕ್ರಮ ಆರಂಭಗೊಂಡಿವೆ.
ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರೀಸ್) ಗಣೇಶ ಮೂರ್ತಿ ಮಾರಾಟ ಮಾಡದಂತೆ ಹಾಗೂ ಪರಿಸರ ಸ್ನೇಹಿ ಗಣಪ ಮೂರ್ತಿ ಪ್ರತಿಷ್ಠಾಪಿಸುವಂತೆ ಪ್ರತಿ ವರ್ಷವೂ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳು, ಪಾಲಿಕೆಯವರು ಪ್ರಕಟಣೆ ನೀಡಿ ಎಚ್ಚರಿಸುತ್ತಾರೆ. ಆದರೂ ಪಿಒಪಿ ಗಣಪನ ಹಾವಳಿ ನಿಲ್ಲಿಸಲಾಗಿಲ್ಲ. ಪಿಒಪಿ ಮೂರ್ತಿಗಳಿಂದ ಪರಿಸರ ಹಾನಿ ಅಧಿಕವಾಗಲಿದೆ ಎಂಬುದು ಗೊತ್ತಿದ್ದರೂ ಅವುಗಳ ಒಲವು ಮಾತ್ರ ಇನ್ನೂ ಕಡಿಮೆ ಆಗಿಲ್ಲ.
Related Articles
ದಾವಣಗೆರೆ ನಗರದಲ್ಲಿ ಗಣೇಶ ಚತುರ್ಥಿಗೆ ಸುಮಾರು 16 ಸಾವಿರ ಗಣೇಶ ಮೂರ್ತಿಗಳು ಬೇಕು ಎಂಬ ಅಂದಾಜಿದೆ. ಮನೆಗಳಲ್ಲಿ ಪ್ರತಿಷ್ಠಾಪಿಸುವ ಗಣೇಶ ಮೂರ್ತಿಗಳ ಪ್ರಮಾಣವೇ 15 ಸಾವಿರ ಇದ್ದು, ಸಾರ್ವಜನಿಕ ಗಣೇಶ ಮೂರ್ತಿಗಳು ಸೇರಿ ಇದು 16 ಸಾವಿರ ಆಗಬಹುದು ಎಂದು ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ದೇವರಮನಿ ಗಿರೀಶ್ ಅಭಿಪ್ರಾಯ ಪಡುತ್ತಾರೆ. ಇನ್ನು ಅಕ್ಕಪಕ್ಕದ ಹಳ್ಳಿಯ ಜನರು ನಗಕ್ಕೆ ಬಂದು ಖರೀದಿಸುವ ಗಣೇಶ ಮೂರ್ತಿಗಳ ಲೆಕ್ಕೆ ನೂರರಲ್ಲಿ ಮಾತ್ರ ಇದೆ ಅಂತಾರೆ. ನಮ್ಮ ನಗರದಲ್ಲಿಯೇ ಇಷ್ಟು ಮೂರ್ತಿ ತಯಾರಿಸುವ ಶಿಲ್ಪಿಗಳಿದ್ದಾರೆ. ಆದರೂ ಕೊನೆ ಕ್ಷಣದಲ್ಲಿ ನಮ್ಮ ನಗರಕ್ಕೆ ಪಿಒಪಿ ಗಣೇಶ ಮೂರ್ತಿಗಳು ಬರುವುದು ಬೇಸರದ ಸಂಗತಿ ಎಂದು ಅವರು ಹೇಳುತ್ತಾರೆ.
Advertisement
ಮೂರ್ತಿ ತಯಾರಿ ಹೀಗಿರುತ್ತೆ….ಗಣೇಶ ಚತುರ್ಥಿಗೆ ಭಕ್ತರು ತರುವ ಗಣೇಶ ಮೂರ್ತಿ ತಯಾರಿಕೆ ಹಿಂದೆ ಅಪಾರ ಪರಿಶ್ರಮ ಇದೆ. ಮಣ್ಣಿನ ಗಣೇಶ ಮೂರ್ತಿ ತಯಾರಕರು ಜನವರಿಯಿಂದಲೇ ಕಾರ್ಯೋನ್ಮುಖರಾಗುತ್ತಾರೆ. ಆಗ ಮಣ್ಣಿನ ಸಂಗ್ರಹ ಮಾಡಲಾಗುತ್ತದೆ. ದಾವಣಗೆರೆಯಲ್ಲಿನ ಶಿಲ್ಪಿಗಳು ರಾಣಿಬೆನ್ನೂರು, ಹಾವೇರಿ, ಗದಗ ಮುಂತಾದ ಭಾಗಗಳಲ್ಲಿ ಮಣ್ಣು ಸಂಗ್ರಹಿಸುತ್ತಾರೆ. ಗಣೇಶ ಮೂರ್ತಿ ತಯಾರಾಗುವುದು ಜೇಡಿ ಮಣ್ಣಿನಿಂದ. ಕೆರೆಯಲ್ಲಿನ ಜೇಡಿಮಣ್ಣು ಸಂಗ್ರಹಿಸಿ, ಅದನ್ನು ಕಾಲ ಕಾಲಕ್ಕೆ ಹದ ಮಾಡುತ್ತಾ ಇಡಲಾಗುವುದು. ಇನ್ನೇನು ಗಣೇಶ ಚತುರ್ಥಿಗೆ ಒಂದು ತಿಂಗಳು ಇದೆ ಎಂದಾಗ ಮೂರ್ತಿಗಳ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಸಂಗ್ರಹಿಸಿದ ಜೇಡಿ ಮಣ್ಣನ್ನು ಒಂದು ದಿನದ ಕಾಲ ನೆನೆಸಿ ಇಡುತ್ತಾರೆ. ಮಾರನೆಯ ದಿನ ಹರಳೆ ಸೇರಿಸಿ ಹದಮಿಶ್ರಿತ ಮಾಡಿ ಕುಟ್ಟಲಾಗುತ್ತದೆ. ಹೀಗೆ ಕುಟ್ಟಿ ಹದ ಮಾಡಿದ ಮಣ್ಣಿನಿಂದ ಮೂರ್ತಿ ತಯಾರಿಸಲಾಗುತ್ತದೆ. ಪಾಟೀಲ ವೀರನಗೌಡ