ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮೂವರು ಆರೋಪಿಗಳಿಗೆ 3ನೇ ಎಸಿಎಂಎಂ ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಎಸ್‌ಐಟಿ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ ಆರೋಪಿಗಳಾದ ಗಣೇಶ್ ಮಸ್ಕಿನ್ ಮತ್ತು ಅಮಿತ್ ಬುದ್ದಿ ಹಾಗೂ ಕೊಡಗು ಮೂಲದ ರಾಜೇಶ್ ಬಂಗೇರನನ್ನು ಸೋಮವಾರ ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು. ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ. ಇದೇ ವೇಳೆ ಮೂವರು ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಿದೆ.
ಇದಕ್ಕೂ ಮೊದಲು ಆರೋಪಿಗಳ ಪರ ವಕೀಲ ಅಮೃತೇಶ್, ವಿಚಾರಣೆ ನೆಪದಲ್ಲಿ ಎಸ್‌ಐಟಿ ಅಧಿಕಾರಿಗಳು ನಮ್ಮ ಕಕ್ಷಿದಾರರ ಮೇಲೆ ಹಲ್ಲೆ ನಡೆಸಿದ್ದಾರೆ.ಹೀಗಾಗಿ ನಮ್ಮ ಸಮ್ಮುಖದಲ್ಲೇ ವೈದ್ಯಕೀಯ ಪರೀಕ್ಷೆ ನಡೆಸಬೇಕು ಎಂದು ಮನವಿ ಮಾಡಿದರು. ಇದೇ ವೇಳೆ ಆರೋಪಿಗಳ ಪೈಕಿ ಗಣೇಶ್ ಮತ್ತು ಬುದ್ದಿ ತಮ್ಮ ಮೇಲೆ ಅಧಿಕಾರಿಗಳು ಹಲ್ಲೆ ನಡೆಸಿದ್ದಾರೆ. ಖಾಲಿ ಪೇಪರ್ ಮೇಲೆ ಸಹಿ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ.
ಇದಕ್ಕೆ ನಿರಾಕರಿಸಿದಾಗ ಮತ್ತಷ್ಟು ಹಲ್ಲೆ ನಡೆಸುತ್ತಾರೆ ಎಂದು ದೂರಿದರು. ಒಂದು ಹಂತದಲ್ಲಿ ಅಮಿತ್ ಬುದ್ದಿ ಕುಸಿದು ಬಿದ್ದು, ಹೈಡ್ರಾಮಾ ಸೃಷ್ಠಿಸಿದ. ಇದಕ್ಕೆ ಆಕ್ಷೇಪಿಸಿದ ತನಿಖಾಧಿಕಾರಿಗಳು ತಮ್ಮ ವಕೀಲರ ಪ್ರಚೋದನೆಯಿಂದ ಆರೋಪಿಗಳು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ನಾವು ಯಾವುದೇ ರೀತಿಯ ಹಿಂಸೆ ಮಾಡಿಲ್ಲ ಎಂದು ಮಾಹಿತಿ ನೀಡಿದರು.
ಆರೋಪಿಗಳು ಹಾಗೂ ಇವರ ಪರ ವಕೀಲರ ಆರೋಪನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು, ಆರೋಪಿಗಳನ್ನು ಕೂಡಲೇ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು. ಬಳಿಕ ಮೂವರು ಆರೋಪಿಗಳಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು.
ವಿಚಾರಣೆಗೆ ಗೈರು: ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಅಧಿಕಾರಿಗಳು ಆರೋಪಿ ಗಣೇಶ್ ಮಿಸ್ಕಿನ್ ಸಹೋದರ ರವಿ ಎಂಬುವವರಿಗೆ ನೋಟಿಸ್ ನೀಡಿದ್ದರು. ಆದರೆ, ಆತ ಗೈರಾಗಿದ್ದಾನೆ. ಹೀಗಾಗಿ ಈತನ ವಿರುದ್ಧ ಕಾನೂನು ರೀತಿಯ ಕ್ರಮಕೈಗೊಳ್ಳಲಾಗುವುದು ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದರು.