ಬೆಂಗಳೂರು: ಪತ್ರಕರ್ತೆ, ವಿಚಾರವಾದಿ ಚಿಂತಕಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕೊಟ್ಟವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ರಾಜ್ಯ ಸರ್ಕಾರ ಶುಕ್ರವಾರ ಘೋಷಿಸಿದೆ.
ಗೌರಿ ಲಂಕೇಶ್ ಹತ್ಯೆ ಬಗ್ಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಮತ್ತೊಂದೆಡೆ ಎಸ್ಐಟಿ ತಂಡ ಎಲ್ಲಾ ಕೋನಗಳಿಂದಲೂ ತನಿಖೆಯನ್ನು ತೀವ್ರಗೊಳಿಸಿದೆ.
ಏತನ್ಮಧ್ಯೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಕುರಿತಂತೆ ಮಾಹಿತಿ ಕೊಟ್ಟವರಿಗೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. ಪ್ರಕರಣದ ಕುರಿತು ಸಾರ್ವಜನಿಕರು ಯಾರೇ ಆಗಿರಲಿ ಮಾಹಿತಿಯನ್ನು ಹಂಚಿಕೊಳ್ಳಬಹುದಾಗಿದೆ ಎಂದರು.
ಆದಷ್ಟು ಶೀಘ್ರದಲ್ಲಿ ಹಂತಕರನ್ನು ಪತ್ತೆ ಹಚ್ಚಲಾಗುವುದು ಎಂದು ವಿಶ್ವಾಸವ್ಯಕ್ತಪಡಿಸಿದ ಅವರು, ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಬಿಕೆ ಸಿಂಗ್ ನೇತೃತ್ವದಲ್ಲಿ 21 ಸದಸ್ಯರ ಎಸ್ಐಟಿ ತಂಡವನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್ಐಟಿ ಅಧಿಕಾರಿಗಳ ಜತೆ ಪ್ರಕರಣದ ಪ್ರಗತಿಯ ಬಗ್ಗೆ ವಿವರ ಪಡೆದರು, ಈ ಸಂದರ್ಭದಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹಾಜರಿದ್ದರು.