ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ವಿಜಯಪುರ ಜಿಲ್ಲೆಯ ಪರಶುರಾಮ್ ವಾಗ್ಮೋರೆಯನ್ನು ಎಸ್‌ಐಟಿ ಅಧಿಕಾರಿಗಳು ಶುಕ್ರವಾರ ರಾತ್ರಿ ರಾಜರಾಜೇಶ್ವರಿ ನಗರದ ಗೌರಿ ಲಂಕೇಶ್ ಮನೆ ಬಳಿ ಕರೆದೊಯ್ದ ಪೊಲೀಸರು ಸ್ಥಳ ಮಹಜರು ನಡೆಸಿದರು.
ಹಾಗೆಯೇ ಇಡೀ ಕೃತ್ಯದ ಮಾದರಿಯನ್ನು ಆರೋಪಿಯ ಮೂಲಕವೇ ಮರು ಸೃಷ್ಟಿಸಿದ್ದು, ಕ್ಯಾಮರಾದಲ್ಲಿ ಸೆರೆಹಿಡಿದುಕೊಂಡಿದ್ದಾರೆ. ವಾಗ್ಮೋರೆಗೆ ಬೈಕ್‌ವೊಂದನ್ನು ಕೊಟ್ಟು ಹತ್ಯೆಗೂ ಮೊದಲು ಯಾವ ಮಾರ್ಗವಾಗಿ ಗೌರಿ ಲಂಕೇಶ್ ಮನೆಗೆ ಬಂದಿದ್ದು, ಗುಂಡು ಹಾರಿಸಿದ ಬಳಿಕ ಯಾವ ಮಾರ್ಗದಲ್ಲಿ ಪಾರಾರಿಯಾಗಿದ್ದು ಎಂಬ ಬಗ್ಗೆ ಇಡೀ ಕೃತ್ಯವನ್ನು ಆರೋಪಿ ಪರಶುರಾಮ್ ವಾಗ್ಮೋರೆ ಮೂಲಕವೇ ಮರು ಮತ್ತೆ ನಡೆಸಿದರು.
ಶುಕ್ರವಾರ ರಾತ್ರಿ 10 ಗಂಟೆ ಸುಮಾರಿಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ವಾಗ್ಮೋರೆಯನ್ನು ಕರೆದೊಯ್ದು ಗೌರಿ ಮನೆ ಹಾಗೂ ಸುತ್ತ ಮುತ್ತಲಿನ ರಸ್ತೆಗಳಲ್ಲಿ ಓಡಾಡಿಸಿ ಪರಿಶೀಲನೆ ನಡೆಸಿತು. ಕೊಲೆ ನಡೆದ ದಿನ ಹಾಗೂ ಕೃತ್ಯಕ್ಕೆ ಸಂಚು ಹೂಡಿದ ಬಳಿಕ ಬಂದ ಮಾರ್ಗಗಳ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ನ್ಯಾಯಾಂಗ ನಿಂದನೆ ಅರ್ಜಿ ವಜಾ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಾಲ್ವರು ಆರೋಪಿಗಳ ಭೇಟಿಗೆ ಅವಕಾಶ ನೀಡದೆ ನ್ಯಾಯಾಂಗ ನಿಂದನೆ ಮಾಡಲಾಗಿದೆ ಎಂದು ಆರೋಪಿಗಳ ಪರ ವಕೀಲ ಅಮೃತೇಶ್ ಸಲ್ಲಿಸಿದ್ದ ಅರ್ಜಿಯನ್ನು ನಗರದ 5ನೇ ಸೆಷನ್ಸ್ ನ್ಯಾಯಾಲಯ ನ್ಯಾ. ಸೋಮಶೇಖರ್ ಶನಿವಾರ ವಜಾಗೊಳಿಸಿದ್ದಾರೆ.
ಶನಿವಾರ ವಾದ ಮಂಡಿಸಿದ ವಕೀಲ ಅಮೃತೇಶ್, ತನಿಖಾಧಿಕಾರಿಗಳು ಎಲ್ಲಾ ಆರೋಪಿಗಳನ್ನು ಒಂದೇ ಸಮಯದಲ್ಲಿ ಭೇಟಿಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿದರು. ಇದಕ್ಕೆ ತನಿಖಾಧಿಕಾರಿಗಳು, ಪ್ರಕರಣದ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆ ಸೇರಿ ಎಲ್ಲ ಆರೋಪಿಗಳನ್ನು ತನಿಖೆಗಾಗಿ ಹೊರ ಜಿಲ್ಲೆಗಳಿಗೆ ಸ್ಥಳ ಮಹಜರು, ಚರ್ಚೆ ನಡೆಸಿದ ಸ್ಥಳ ಇತರೆಡೆ ಕರೆದೊಯ್ಯಲಾಗಿತ್ತು. ಹೀಗಾಗಿ ಭೇಟಿಗೆ ಅವಕಾಶ ಸಾಧ್ಯವಾಗಿಲ್ಲ ಎಂದರು. ವಾದ ಆಲಿಸಿದ ನ್ಯಾಯಾಧೀಶರು ಅರ್ಜಿ ವಜಾಗೊಳಿಸಿ ಆದೇಶಿಸಿದರು.