Advertisement

ಗೌರಿ ಹಂತಕರು ಇನ್ನೂ ಸಿಕ್ಕಿಲ್ಲ

11:50 AM May 31, 2018 | |

ಬೆಂಗಳೂರು: “ಟಿವಿ ನೋಡಿಲ್ವಾ, ಗೌರಿ ಕೊಂದಿದ್ದು ನಾವೇ. ಮುಂದೆ ಇನ್ನೊಂದು ದೊಡ್ಡ ಟಾಸ್ಕ್ ಇದೆ. ಮೈಸೂರಿನ ಸಾಹಿತಿ ಕೆ.ಎಸ್‌.ಭಗವಾನ್‌ ಕೊಲ್ಲಬೇಕಿದೆ’ ಎಂಬ ನವೀನ್‌ ಕುಮಾರ್‌ ಅಲಿಯಾಸ್‌ ಹೊಟ್ಟೆ ಮಂಜನ ಸ್ನೇಹಿತರ ಹೇಳಿಕೆಯೇ ಗೌರಿ ಲಂಕೇಶ್‌ ಹತ್ಯೆಗೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ಬುಧವಾರ 3ನೇ ಎಸಿಎಂಎಂ
ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯ ಮೂಲ ಸಾರ.

Advertisement

ಪ್ರಸ್ತುತ ಬಂಧನಕ್ಕೊಳಗಾಗಿರುವ ಹೊಟ್ಟೆ ಮಂಜ ಮತ್ತು ಇತ್ತೀಚೆಗೆ ಸೆರೆಸಿಕ್ಕ ಪ್ರವೀಣ್‌, ಕೊಲೆ ಆರೋಪಿಗಳಲ್ಲ. ಪ್ರಮುಖ ಆರೋಪಿಗಳು ಇನ್ನೂ ಸಿಕ್ಕಿಲ್ಲ. ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಎಂಬ ಅಂಶವನ್ನೂ ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ. 

ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ಆರಂಭಿಕ ತನಿಖೆ ಪೂರ್ಣಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಬುಧವಾರ 3ನೇ ಎಸಿಎಂಎಂ ನ್ಯಾಯಾಲಯಕ್ಕೆ 651 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿದೆ. ಇದರಲ್ಲಿ ಹಂತಕರಿಗೆ ಸಹಾಯ ಮಾಡಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಿದೆ.

ವಿಶೇಷ ತನಿಖಾ ತಂಡದ ಮುಖ್ಯಸ್ಥ ಬಿ.ಕೆ. ಸಿಂಗ್‌ ಮತ್ತು ಪ್ರಕರಣದ ತನಿಖಾಧಿಕಾರಿ ಎಂ.ಎನ್‌.ಅನುಚೇತ್‌ ನೇತೃತ್ವದ ಅಧಿಕಾರಿಗಳ ತಂಡ, ದೋಷಾರೋಪ ಪಟ್ಟಿ ಸಲ್ಲಿಸಿದೆ. ಇದರಲ್ಲಿ 131 ಸಾಕ್ಷಿಗಳ ಹೇಳಿಕೆ, ಗೌರಿ ಮನೆ ಬಳಿಯ ಸಾರ್ವಜನಿಕರು, ಸಿಸಿಟಿವಿ ತಜ್ಞರು, ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು, ಶಂಕಿತ ಆರೋಪಿಗಳ ಹೇಳಿಕೆ ಮತ್ತು ಆರೋಪಿಗಳ ಸ್ನೇಹಿತರ ಹೇಳಿಕೆ, ತಾಂತ್ರಿಕ ಸಾಕ್ಷ್ಯಗಳು ಸೇರಿ ಹಲವು ಮಹತ್ವದ ಅಂಶಗಳನ್ನು
ಆರೋಪಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ಮೂಲ ಹಂತಕರು ಇನ್ನೂ ಸಿಗಬೇಕಿದೆ. ಪ್ರಾಥಮಿಕವಾಗಿ ಹಂತಕರಿಗೆ ಸಹಾಯ ಮಾಡಿದ ಇಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.

ಆರೋಪ ಪಟ್ಟಿಯಲ್ಲಿನ ಪ್ರಮುಖ ಅಂಶಗಳು: ಮೈಸೂರಿನ ಸಾಹಿತಿ ಕೆ.ಎಸ್‌. ಭಗವಾನ್‌ ಹತ್ಯೆಗೆ ಸಂಚು ಹಾಗೂ ಅಕ್ರಮ ಶಸ್ತ್ರಾಸ್ತ್ರ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮಂಡ್ಯ ಮೂಲದ ನವೀನ್‌ಹಾಗೂ ಶಿಕಾರಿಪುರ ತಾಲೂಕಿನ ಸುಜಿತ್‌ ಕುಮಾರ್‌ ಅಲಿಯಾಸ್‌ ಪ್ರವೀಣ್‌ ಅವರನ್ನು ಗೌರಿ ಲಂಕೇಶ್‌ ಹಂತಕರಿಗೆ ಸಹಕರಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.
 
ಈ ಇಬ್ಬರು ಗೌರಿ ಹತ್ಯೆಗೈದ ಆರೋಪಿಗಳಿಗೆ ಸಹಾಯ ಮಾಡಿದ್ದಾರೆ. ಹಂತಕರು ರಾಜ್ಯಕ್ಕೆ ಬಂದಾಗ ಉಳಿದುಕೊಳ್ಳಲು ಸ್ಥಳ ಹಾಗೂ ಹತ್ಯೆಗೈಯಲು ಶಸ್ತ್ರಾಸ್ತ್ರ ಪೂರೈಕೆ ಮಾಡಿರುವುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ಆದರೆ, ಹಂತಕರ ಬಗ್ಗೆ ಮಾಹಿತಿಯಿಲ್ಲ. ಪ್ರಮುಖವಾಗಿ ಪ್ರವೀಣ್‌ ವಿರುದ್ಧ ಸಾಕ್ಷಾಧಾರ ಲಭ್ಯವಾದ ಹಿನ್ನೆಲೆಯಲ್ಲಿ ಈತನನ್ನು ಎರಡನೇ ಆರೋಪಿಯನ್ನಾಗಿ ಮಾಡಲಾಗಿದೆ.

Advertisement

ಇಬ್ಬರೂ ಹಿಂದುತ್ವದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದರು. ಸಂಘಟನೆಯೊಂದರಲ್ಲಿ ಸಕ್ರಿಯ ಕಾರ್ಯಕರ್ತರಾಗಿದ್ದರು. ಗೌರಿ ಹತ್ಯೆಗೂ ಮೊದಲು ನವೀನ್‌ ಊರು ಬಿಟ್ಟಿದ್ದ. ವಾಪಸಾದ ನಂತರ ಸ್ನೇಹಿತರು “ಎಲ್ಲಿ ಹೋಗಿದ್ದೆ’ ಎಂದು
ಕೇಳಿದಾಗ, “ಟಿವಿ ನೋಡಿಲ್ವಾ, ಗೌರಿ ಕೊಂದಿದ್ದು ನಾವೇ…’ ಎಂದು ಹೇಳಿಕೊಂಡಿದ್ದ. ಹೀಗಾಗಿ ಹೊಟ್ಟೆ ಮಂಜನ
ಸ್ನೇಹಿತರ ಹೇಳಿಕೆಯನ್ನು ಸಾಕ್ಷ್ಯ ಎಂದು ಪರಿಗಣಿಸಲಾಗಿದೆ.

ಪ್ರವೀಣ್‌ ಬಳಿ ಸಿಕ್ಕಿರುವ ಡೈರಿಯಲ್ಲಿ ಕೋಡ್‌ವರ್ಡ್‌ಗಳು ಪತ್ತೆಯಾಗಿದ್ದು, ಕಿಂಗ್‌ಪಿನ್‌ ಸೂಚನೆಯಂತೆ ಗೌರಿ ಹತ್ಯೆ ಹೇಗೆ ಮಾಡಬೇಕು? ಎಲ್ಲಿಂದ ಹಿಂಬಾಲಿಸಬೇಕು? ಮನೆ ಬಳಿ ಹತ್ಯೆ ಮಾಡುವುದು ಹೇಗೆ? ಸಿಸಿಟಿವಿಗಳನ್ನು ನಿಷ್ಕ್ರಿಯಗೊಳಿಸುವುದು ಹೇಗೆ? ಮುಂತಾದ ಅಂಶವನ್ನು ಕೋಡ್‌ ವರ್ಡ್‌ಗಳ ಮೂಲಕ ಬರೆದಿಡಲಾಗಿದೆ.

ಗೌರಿ ಲಂಕೇಶ್‌ ಮನೆ ಬಳಿ ರಕ್ತಸಿಕ್ತ ಬುಲೆಟ್‌ ಪತ್ತೆಯಾಗಿತ್ತು. ಇದು ಗೌರಿ ದೇಹವನ್ನು ಛೇದಿಸಿ ಹೊರಬಂದಿದ್ದ ಬುಲೆಟ್‌. ಮೆಟಲ್‌ ಡಿಟೆಕ್ಟರ್‌ ಮೂಲಕ ತನಿಖಾ ತಂಡಕ್ಕೆ ಸಿಕ್ಕಿತ್ತು. ದೇಹ ಹೊಕ್ಕಿದ್ದ ಗುಂಡು ಮತ್ತು ಮನೆ ಬಳಿ ಪತ್ತೆಯಾದ ರಕ್ತಸಿಕ್ತ ಗುಂಡು ಒಂದೇ ಪಿಸ್ತೂಲ್‌ನಿಂದ ಬಂದಿದ್ದು. 

ನವೀನ್‌ ಕುಮಾರ್‌ ಮತ್ತು ಪ್ರವೀಣ್‌ ಹಂತಕರಲ್ಲ. ಹಂತಕರಿಗೆ ಸಹಾಯ ಮಾಡಿದವರು. ಮೂಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಹಿಂದುತ್ವ ಹಾಗೂ ಹಣದಾಸೆಗೆ ಸೂತ್ರಧಾರಿಗಳ ಸೂಚನೆಯನ್ನು ಪಾಲಿಸಿದ್ದಾರೆ. ಬಂಧಿತರು ವಿಚಾರಣೆಗೆ ಸರಿಯಾಗಿ ಸಹಕಾರ ನೀಡುತ್ತಿಲ್ಲ. ಹೊಟ್ಟೆ ಮಂಜ ಮಂಪರು ಪರೀಕ್ಷೆಗೆ ನಿರಾಕರಿಸಿದ್ದರಿಂದ ಹಂತಕರ ಮಾಹಿತಿ ಸಿಕ್ಕಿಲ್ಲ. ಗೌರಿ ಹತ್ಯೆಗೈದ ಆಯುಧ ಕೂಡ ಪತ್ತೆಯಾಗಿಲ್ಲ. ಅದು ಎಲ್ಲಿದೆ ಎಂಬುದು ನಿಗೂಢವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next