Advertisement

ಗೌರೇಶ್ವರ, ಪಾರ್ವತಾಂಬೆ ಉತ್ಸವ

12:49 PM Oct 27, 2020 | Suhan S |

ಯಳಂದೂರು: ತಾಲೂಕಿನಾದ್ಯಂತ ಭಾನುವಾರ ಹಾಗೂ ಸೋಮವಾರ ಆಯುಧಪೂಜೆ ಹಾಗೂ ದಸರಾ ಹಬ್ಬಗಳನ್ನು ಸಂಭ್ರಮ ಸಡಗರಗಳಿಂದ ಆಚರಿಸಲಾಯಿತು.

Advertisement

ಪಟ್ಟಣದ ಗೌರೇಶ್ವರ ದೇಗುಲದಲ್ಲಿ ಪಟ್ಟಕ್ಕೆ ಕೂರಿಸಿದ್ದ ದೇವರಿಗೆ ಆಯುಧ ಪೂಜೆಯ ರಾತ್ರಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳೇಪೇಟೆಯಲ್ಲಿರುವ ಬನ್ನಿಮಂಟಪಕ್ಕೆ ತೆರಳಿ ಅಲ್ಲಿ ಶಮಿವೃಕ್ಷಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಬಾರಿ ಕೋವಿಡ್‌ ಹಿನ್ನೆಲೆಯಲ್ಲಿ ಗೌರೇಶ್ವರ ಹಾಗೂ ಪಾರ್ವತಾಂಬೆಯ ಉತ್ಸವಮೂರ್ತಿಗಳನ್ನು ದೇಗುಲದ ಆವರಣದಲ್ಲೇ ಮೆರವಣಿಗೆ ಮಾಡಲಾಯಿತು.

ಭಕ್ತರ ಸಂಖ್ಯೆ ಕಡಿಮೆ ಇದ್ದರೂ ಉತ್ಸವಾದಿ ದೇವತಾ ಕಾರ್ಯಗಳು ಸಾಂಗವಾಗಿ ಜರುಗಿದವು. ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಾರ್ವಜನಿಕರು ದೇವರ ದರ್ಶನ ಪಡೆದರು. ಅರ್ಚಕ ಮಹೇಶ್‌ ಚಂದ್ರಮೌಳಿ ದೀಕ್ಷಿತ್‌ ನೇತೃತ್ವದಲ್ಲಿ ಪಾರ್ವತಾಂಬೆ ಹಾಗೂ ಗೌರೇಶ್ವರಸ್ವಾಮಿಗೆ ವಿಶೇಷ ಅಲಂಕಾರ ಮಾಡಿ ಪೂಜಿಸಲಾಯಿತು.

ಆಯುಧ ಪೂಜೆ ಸಂಭ್ರಮ: ಪಟ್ಟಣದಲ್ಲಿ ಹೂವು ಹಣ್ಣಿನ ದರ ಹೆಚ್ಚಾಗಿದ್ದರೂ ಇದನ್ನು ಖರೀದಿಸಲು ಜನರು ಮುಗಿ ಬಿದ್ದರು. ತಮ್ಮ ವಾಹನಗಳಿಂದ ಕೆಲವರು ವಿಶೇಷ ಅಲಂಕಾರ ಮಾಡುವ ಮೂಲಕಗಮನ ಸೆಳೆದರು. ತಾಲೂಕಿನ ಬಿಳಿಗಿರಿರಂಗನಬೆಟ್ಟದ ರಂಗನಾಥ ಸ್ವಾಮಿ ದೇಗುಲದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಹಬ್ಬದ ನಿಮಿತ್ತ ಹಾಗೂ ಸಾಲು ಸಾಲು ರಜೆಗಳಿಂದ ಇಲ್ಲಿಗೆ ಆಗಮಿಸುವ ಭಕ್ತರ ಸಂಖ್ಯೆ ಏರುಮುಖವಾಗಿತ್ತು.

ಹಳೇ ಅಣಗಳ್ಳಿಯಲ್ಲಿ ವಿಶಿಷ್ಟ ದಸರಾ :

Advertisement

ಕೊಳ್ಳೇಗಾಲ: ಆಯುಧಪೂಜೆ ಮತ್ತು ವಿಜಯದಶಮಿ ಅಂಗವಾಗಿ ಹಳೇ ಅಣಗಳ್ಳಿ ಗ್ರಾಮದಲ್ಲಿ ಮಹಿಷಾಸುರ, ಮೈಸೂರು ಮಹಾರಾಜ ಮತ್ತು ಅಂಬೇಡ್ಕರ್‌ ಭಾವಚಿತ್ರಗಳನ್ನಿಟ್ಟು ವಿಶಿಷ್ಟ ಮೆರವಣಿಗೆ ನಡೆಸಲಾಯಿತು.

ರೈತ ಮುಖಂಡ ಅಣಗಳ್ಳಿ ಬಸವರಾಜು ನೇತೃತ್ವದಲ್ಲಿ ಗ್ರಾಮಸ್ಥರು ಸೇರಿ ಮೂರು ವಾಹನಗಳನ್ನು ಬಣ್ಣದ ಕಾಗದಗಳಿಂದ ಹಾಗೂ ಹಸಿರು ತೋರಣಗಳಿಂದ ಅಲಂಕರಿಸಿ, ನಂತರ ಮಹಿಷಾಸುರ, ಮೈಸೂರಿನ ಮಹಾರಾಜ ಮತ್ತು ಅಂಬೇಡ್ಕರ್‌ ಭಾವಚಿತ್ರಗಳನ್ನು ಅಳವಡಿಸಿ ನಂತರ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು.

ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನೂರಾರು ಮಹಿಳೆಯರಿಗೆಸೀರೆಗಳನ್ನು ವಿತರಣೆ ಮಾಡಿದ ಬಳಿಕ, ವಾಹನಗಳು ಮತ್ತು ಎತ್ತಿನಗಾಡಿಗಳ ಮೂಲಕ ಊರಿನಲ್ಲಿ ಸಂಭ್ರಮದಿಂದ ಮೆರವಣಿಗೆ ನಡೆಸಲಾಯಿತು. ದಸರಾ ಉತ್ಸವ ಅಂಗವಾಗಿ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಪಂಚವಾದ್ಯಕ್ಕೆ ಹೆಜ್ಜೆಗಳನ್ನು ಹಾಕಿ ಕುಣಿದ ಕುಪ್ಪಳಿಸಿ ಸಿಹಿ ಹಂಚಿ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next