Advertisement

ಬೆಳ್ಳಾರೆ-ಕೊಡಿಯಾಲ ಸಂಚಾರವಿನ್ನು ನಿರಾಳ 

04:39 AM Mar 03, 2019 | Team Udayavani |

ಬೆಳ್ಳಾರೆ: ಕೆಲ ದಶಕಗಳಿಂದ ಶಿಥಿಲ ಕಾಲುಸಂಕದಲ್ಲಿ ಜೀವ ಭಯದಲ್ಲೇ ಹೊಳೆ ದಾಟಬೇಕಿದ್ದ ಬೆಳ್ಳಾರೆ-ಕೊಡಿಯಾಲ ಗ್ರಾಮದ ನಿವಾಸಿಗಳು ನಿಟ್ಟುಸಿರು ಬಿಡಬಹುದು. ಗೌರಿ ಹೊಳೆಗೆ ಗಟ್ಟಿಗಾರು ಬಳಿ ನಿರ್ಮಾಣಗೊಳ್ಳುತ್ತಿರುವ ಸೇತುವೆ ಕಾಮಗಾರಿ ಅಂತಿಮ ಹಂತಕ್ಕೆ ತಲುಪಿದೆ. ಸದ್ಯದಲ್ಲೇ ಸಂಚಾರ ಮುಕ್ತಗೊಳ್ಳಲು ಸಿದ್ಧವಾಗಿದೆ.

Advertisement

ಕಾಲು ಸಂಕದ ಗೋಳು
ಉಭಯ ಗ್ರಾಮಸ್ಥರ ಪಾದಚಾರಿ ನಡಿಗೆಗೆ ಅನುಕೂಲಕ್ಕಾಗಿ ಹಲವು ದಶಕಗಳ ಹಿಂದೆ ಗಟ್ಟಿಗಾರು ಬಳಿ ಕಾಲು ಸಂಕ ನಿರ್ಮಿಸಲಾಗಿತ್ತು. ವಾಹನ ಸಂಚಾರ ಅಸಾಧ್ಯವಾದ ಕಾರಣ ತಡಗಜೆ, ಕೊಡಿಯಾಲ ಗ್ರಾಮಸ್ಥರು ಸುಳ್ಯ, ಪುತ್ತೂರು ಭಾಗಕ್ಕೆ ತೆರಳಲು ಬೆಳ್ಳಾರೆ ಬಸ್‌ ನಿಲ್ದಾಣಕ್ಕೆ ಬರಲು ಹತ್ತಾರು ಕಿ.ಮೀ. ದೂರ ಸುತ್ತಾಡಬೇಕಿದೆ. ಕಲ್ಪಣೆ, ಪಂಜಿಗಾರು ಮೂಲಕ ಬೆಳ್ಳಾರೆಗೆ ತಲುಪಬೇಕಿತ್ತು. ಬೇಸಗೆ ಕಾಲದಲ್ಲಿ ಸ್ಥಳೀಯರು ಹೊಳೆಯಲ್ಲಿ ರಸ್ತೆ ನಿರ್ಮಿಸಿ ತಡಗಜೆ ತನಕ ಸಂಚರಿಸುತ್ತಿದ್ದರು. ಅಲ್ಲಿಂದ ಆಚೆಗೆ ಕಾಲು ದಾರಿ ಇರುವ ಕಾರಣ, ಸಂಚಾರ ಅಸಾಧ್ಯವಾಗಿತ್ತು.

ಕಾಲುಸಂಕದ ಬದಲು ಹೊಸ ಸೇತುವೆ ಮತ್ತು ರಸ್ತೆ ನಿರ್ಮಾಣಕ್ಕೆ ಸ್ಥಳೀಯರು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದಾರೆ. ಹತ್ತಾರು ವರ್ಷಗಳಿಂದ ಕಾಲು ಸಂಕ ಶಿಥಿಲಗೊಂಡು ಪಿಲ್ಲರ್‌ ಒಂದು ಬದಿಗೆ ವಾಲಿ, ಅಪಾಯ ಎದುರಾಗಿದ್ದರೂ ಅದರಲ್ಲೇ ಸಂಚರಿಸಬೇಕಿತ್ತು. ನೂರಾರು ವಿದ್ಯಾರ್ಥಿಗಳು ಈ ಶಿಥಿಲ ಕಾಲುಸಂಕ ದಾಟಿ ಶಾಲೆಗೆ ತೆರಳುತ್ತಿದ್ದರು. ಎರಡು ದಿಕ್ಕಿನಲ್ಲಿ ಸುರಕ್ಷಾ ಬೇಲಿ ಇಲ್ಲದ ಕಾರಣ, ಮಕ್ಕಳು ಮನೆ ಸೇರುವ ತನಕ ಆತಂಕದ ಸ್ಥಿತಿ ಇತ್ತು.

70 ಲಕ್ಷ ರೂ. ವೆಚ್ಚ
ಪಂಚಾಯತ್‌ರಾಜ್‌ ಇಲಾಖೆ ವತಿಯಿಂದ 2017-18ನೇ ಸಾಲಿನ ಮುಖ್ಯಮಂತ್ರಿ ಗ್ರಾಮೀಣಾಭಿವೃದ್ಧಿ ಯೋಜನೆಯಡಿ 70 ಲಕ್ಷ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ 2018ರ ಮಾರ್ಚ್‌ ನಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು. 26 ಮೀ. ಉದ್ದ, 5.5 ಮೀ. ಅಗಲದ ಸೇತುವೆ ಇದು. ತಲಾ ಎರಡು ಪಿಯರ್‌ ಮತ್ತು ಅಬೆಟ್‌ಮೆಂಟ್‌ ಇದೆ. ಸೇತುವೆಗೆ ಸಂಬಂಧಿಸಿದ ಎಲ್ಲ ಕಾಮಗಾರಿ ಪೂರ್ಣಗೊಂಡು ತಡೆಗೋಡೆ ನಿರ್ಮಾಣ ಪ್ರಗತಿಯಲ್ಲಿದೆ.

ಉಪ ಲೋಕಾಯುಕ್ತರ ಭೇಟಿ
ಕಾಲು ಸಂಕ ದುಃಸ್ಥಿತಿ ಬಗ್ಗೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಉಪ ಲೋಕಾಯುಕ್ತ ಬಿ. ಸುಭಾಷ್‌ ಅಡಿ ಅವರು 2015 ಜೂ. 26ರಂದು ಸ್ಥಳಕ್ಕೆ ಭೇಟಿ ನೀಡಿದ್ದರು. ಪರಿಸ್ಥಿತಿಯನ್ನು ಕಂಡು ಸ್ಥಳೀಯ ಜಿ.ಪಂ. ಸದಸ್ಯರನ್ನು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಸಂದರ್ಭ ವರ್ಷದೊಳಗೆ ಸೇತುವೆ ನಿರ್ಮಿಸುವುದಾಗಿ ಅಧಿಕಾರಿಗಳು ಭರವಸೆ ಕೊಟ್ಟಿದ್ದರು. ಆದರೆ ಆ ಭರವಸೆ ಈಡೇರಲಿಲ್ಲ. ಕೊನೆಗೂ ಮೂರು ವರ್ಷದ ಬಳಿಕ ಸೇತುವೆ ನಿರ್ಮಾಣದ ಕಾಮಗಾರಿ ಆರಂಭಗೊಂಡಿದೆ. ಸ್ಥಳೀಯರಿಗೆ ಅನುಕೂಲಬೆಳ್ಳಾರೆಯಿಂದ ಗಟ್ಟಿಗಾರು ಸೇತುವೆ ತನಕ ಹಾಗೂ ಸೇತುವೆಯಿಂದ ತಡೆಗಜೆ ತನಕ ರಸ್ತೆ ಇದೆ. ಅಲ್ಲಿಂದಾಚೆಗೆ ಖಾಸಗಿ ಸ್ಥಳ ಭೂಸ್ವಾಧೀನಗೊಳಿಸಿ ಕೊಡಿಯಾಲ ಸಂಪರ್ಕಕ್ಕೆ ರಸ್ತೆ ನಿರ್ಮಿಸಬೇಕಿದೆ. ಹೊಸ ಸೇತುವೆ ಸಂಚಾರಕ್ಕೆ ಮುಕ್ತವಾದರೆ ತಡಗಜೆ ಪರಿಸರದ ಮನೆಗಳಿಗೆ ಸುತ್ತಾಟ ತಪ್ಪುತ್ತದೆ. ಮೂರು ಕಿ.ಮೀ.ನಲ್ಲಿ ಬೆಳ್ಳಾರೆ ತಲುಪಲು ಸಾಧ್ಯವಿದೆ. ಕೊಡಿಯಾಲ ಭಾಗದಿಂದ ಶಾಲೆಗೆ ತೆರಳುವ ವಿದ್ಯಾರ್ಥಿಗಳು ಶಿಥಿಲ ಕಾಲು ಸಂಕದ ಪ್ರಯಾಣದಿಂದ ಮುಕ್ತರಾಗಿ ಹೊಸ ಸೇತುವೆಯಲ್ಲಿ ಸಂಚರಿಸಲು ಅನುಕೂಲವಾಗಲಿದೆ.

Advertisement

ಶೇ. 99ರಷ್ಟು ಪೂರ್ಣ
ಕಳೆದ ಮಾರ್ಚ್‌ನಲ್ಲಿ ಸೇತುವೆ ಕಾಮಗಾರಿ ಆರಂಭಗೊಂಡಿದೆ. ಶೇ. 99ರಷ್ಟು ಕಾಮಗಾರಿ ಮುಕ್ತಾಯವಾಗಿದ್ದು, ಸದ್ಯದಲ್ಲೇ ಸಂಚಾರ ಮುಕ್ತವಾಗಲಿದೆ.
 – ಎಸ್‌.ಎಚ್‌.ಹುಕ್ಕೇರಿ
ಎಂಜಿನಿಯರ್‌, ಪಂಚಾಯತ್‌ ರಾಜ್‌ ಇಲಾಖೆ, ಸುಳ್ಯ

ಕಿರಣ್‌ ಪ್ರಸಾದ್‌ ಕುಂಡಡ್ಕ

Advertisement

Udayavani is now on Telegram. Click here to join our channel and stay updated with the latest news.

Next