Advertisement

ಇಂಧನ ಹೂಡಿಕೆದಾರರಿಗೆ ಅವಕಾಶಗಳ ಹೆಬ್ಬಾಗಿಲು: ಪ್ರಧಾನಿ ಮೋದಿ ಮುಕ್ತ ಆಹ್ವಾನ

09:44 PM Feb 06, 2023 | Team Udayavani |

ಬೆಂಗಳೂರು: ಒಂದೆಡೆ ಗರಿಷ್ಠ ಪ್ರಮಾಣದ ಇಂಧನದ ಬಳಕೆ ಆಗುತ್ತಿದೆ. ಮತ್ತೂಂದೆಡೆ ಭವಿಷ್ಯದಲ್ಲಿ ಇದರ ಬೇಡಿಕೆ ಇನ್ನೂ ಹೆಚ್ಚುವ ಸ್ಪಷ್ಟ ಮುನ್ಸೂಚನೆಗಳಿವೆ. ಈ ಎರಡೂ ಅಂಶಗಳಿಂದ ಭಾರತದಲ್ಲಿ ಹೂಡಿಕೆದಾರರಿಗೆ ಅವಕಾಶಗಳ ಹೆಬ್ಬಾಗಿಲು ತೆರೆದುಕೊಂಡಿದ್ದು, ಅದರ ಸದುಪಯೋಗ ಪಡೆಯಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹೂಡಿಕೆದಾರರಿಗೆ ಮುಕ್ತ ಆಹ್ವಾನ ನೀಡಿದರು.

Advertisement

ನಗರದ ಹೊರವಲಯದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ (ಬಿಐಇಸಿ)ದಲ್ಲಿ ಹಮ್ಮಿಕೊಂಡ ಮೂರು ದಿನಗಳ “ಇಂಡಿಯಾ ಎನರ್ಜಿ ವೀಕ್‌’ಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕಳೆದ 9 ವರ್ಷಗಳಲ್ಲಿ ದೇಶದ ಜನರ ಜೀವನಮಟ್ಟ ಸುಧಾರಣೆಯಾಗಿದ್ದು, ಬಡ ವರ್ಗ ಇಂದು ಮಧ್ಯಮ ವರ್ಗಕ್ಕೆ “ಶಿಫ್ಟ್’ ಆಗುತ್ತಿದೆ. ಈ ಅವಧಿಯಲ್ಲಿ ಬ್ರಾಡ್‌ಬ್ಯಾಂಡ್‌ ಸಂಪರ್ಕ 13 ಪಟ್ಟು ಹೆಚ್ಚಳವಾಗಿದ್ದರೆ, ಇಂಟರ್‌ನೆಟ್‌ ಸಂಪರ್ಕ 3 ಪಟ್ಟು ಏರಿಕೆಯಾಗಿದೆ. ಗ್ರಾಮೀಣ ಭಾಗದ ಇಂಟರ್‌ನೆಟ್‌ ಬಳಕೆದಾರರ ಪ್ರಮಾಣ ನಗರ ಪ್ರದೇಶಕ್ಕಿಂತ ವೇಗವಾಗಿ ಸಾಗುತ್ತಿದೆ. ಇನ್ನೊಂದೆಡೆ ಜಾಗತಿಕ ಮಟ್ಟದಲ್ಲಿ ತೈಲ ಬೇಡಿಕೆಯಲ್ಲಿ ಭಾರತದ ಪಾಲು ಸದ್ಯ ಶೇ.5ರಷ್ಟಿದ್ದು, ಮುಂಬರುವ ವರ್ಷಗಳಲ್ಲಿ ಇದರ ಪ್ರಮಾಣ ಶೇ.11ಕ್ಕೆ ಏರಿಕೆಯಾಗಲಿದೆ. ಅದೇ ರೀತಿ, ಅನಿಲ ಬೇಡಿಕೆ ಶೇ.500ರಷ್ಟು ಹೆಚ್ಚಳ ಆಗಲಿದೆ. ನೈಸರ್ಗಿಕ ಅನಿಲ ಬಳಕೆ ಪ್ರಮಾಣ 2030ರ ವೇಳೆಗೆ ಶೇ. 6ರಿಂದ ಶೇ. 15ಕ್ಕೆ ತಲುಪಲಿದೆ. ದೇಶದ ಈ ಆಕಾಂಕ್ಷೆಗಳನ್ನು ಪೂರೈಸುವಲ್ಲಿ ಇಂಧನದ ಪಾತ್ರ ದೊಡ್ಡದು ಎಂದು ಹೇಳಿದರು.

ನೋ-ಗೋ ಝೋನ್‌ 10 ಲಕ್ಷ ಚ.ಕಿ.ಮೀ. ಇಳಿಕೆ
“ನಿರ್ಬಂಧಿತ ವಲಯ’ (ನೋ ಗೋ ಝೋನ್‌)ವನ್ನು ತಗ್ಗಿಸಲಾಗಿದ್ದು, 10 ಲಕ್ಷ ಚದರ ಕಿ.ಮೀ. ಪ್ರದೇಶವನ್ನು ನಿರ್ಬಂಧಿತ ವಲಯದಿಂದ ಮುಕ್ತಗೊಳಿಸಲಾಗಿದೆ. ಇಲ್ಲಿ ಪಳೆಯುಳಿಕೆ ಇಂಧನ ಪರಿಶೋಧನೆ ಮಾಡಬಹುದಾಗಿದೆ. ಅದೇ ರೀತಿ, ಪ್ರಸಕ್ತ ದಶಮಾನದ ಅಂತ್ಯದೊಳಗೆ ಪ್ರತಿ ವರ್ಷ 5 ಮಿಲಿಯನ್‌ ಮೆ.ಟ. ಗ್ರೀನ್‌ ಹೈಡ್ರೋಜನ್‌ ಉತ್ಪಾದನೆ ಗುರಿ ಹೊಂದಿದ್ದು, ಇದು 8 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲಿದೆ. ಇನ್ನು ಶೇ.25ರಷ್ಟು ಸಾಂಪ್ರದಾಯಿಕ ಇಂಧನವನ್ನು “ಗ್ರೀನ್‌ ಹೈಡ್ರೋಜನ್‌’ ಆಗಿ ಪರಿವರ್ತಿಸುವ ಉದ್ದೇಶ ಇದೆ. ಈ ಹಿನ್ನೆಲೆಯಲ್ಲಿ ಹೂಡಿಕೆಗೆ ಸಾಕಷ್ಟು ಅವಕಾಶವಿದೆ ಎಂದು ವಿವರಿಸುವ ಮೂಲಕ ಆಹ್ವಾನ ನೀಡಿದರು.

ಕರ್ನಾಟಕ ಮೊದಲು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ನವೀಕರಿಸಬಹುದಾದ ಇಂಧನದಲ್ಲಿ ಕರ್ನಾಟಕ ಕ್ರಾಂತಿಕಾರಿ ಹೆಜ್ಜೆ ಇಟ್ಟಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಪ್ರಸ್ತುತ ಒಟ್ಟಾರೆ ಉತ್ಪಾದನೆಯಲ್ಲಿ ಶೇ. 50ರಷ್ಟು ನವೀಕರಿಸಬಹುದಾದ ಇಂಧನ ಮೂಲದಿಂದ ಬರುತ್ತಿದ್ದು, ಅದರ ಪ್ರಮಾಣ 15 ಸಾವಿರ ಮೆ.ವಾ. ಆಗಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಈ ನವೀಕರಿಸಬಹುದಾದ ಇಂಧನವನ್ನು ಪಂಪ್‌ ಸ್ಟೋರೇಜ್‌ ಮತ್ತಿತರ ತಂತ್ರಜ್ಞಾನದಿಂದ ಸಂಗ್ರಹಿಸುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ತಿಳಿಸಿದರು.

Advertisement

ಈಚೆಗೆ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 9 ಉದ್ದಿಮೆಗಳಿಂದ ಗ್ರೀನ್‌ ಹೈಡ್ರೋಜನ್‌ ವಿದ್ಯುತ್‌ ಉತ್ಪಾದನೆಗೇ 3 ಲಕ್ಷ ಕೋಟಿ ರೂ. ಬಂಡವಾಳ ಹರಿದುಬಂದಿದ್ದು, ಇದರಲ್ಲಿ 2 ಲಕ್ಷ ಕೋಟಿ ರೂ. ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಅವಕಾಶ ಕಲ್ಪಿಸಿದೆ. ದೇಶದಲ್ಲೇ ಅತ್ಯಧಿಕ ವಿದ್ಯುತ್‌ಚಾಲಿತ ವಾಹನಗಳನ್ನು ಹೊಂದಿದ ರಾಜ್ಯ ಎಂಬ ಹೆಗ್ಗಳಿಕೆಗೂ ಕರ್ನಾಟಕ ಪಾತ್ರವಾಗಿದೆ. ವಿದ್ಯುತ್‌ಚಾಲಿತ ವಾಹನಗಳ ಉತ್ಪಾದನೆಯಲ್ಲಿ ದೇಶದಲ್ಲೇ ಮೊದಲ ಸ್ಥಾನ ಗಳಿಸುವ ಗುರಿ ಇದೆ ಎಂದರು. ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋ ಟ್‌, ಕೇಂದ್ರ ಸಚಿವ ಹರ್ದೀಪ್ ಸಿಂಗ್‌ ಪುರಿ ಇದ್ದರು.

“ಸೋಲಾರ್‌ ಕುಕ್‌ಟಾಪ್‌’ ವಿತರಿಸುವ ಗುರಿ
ಮುಂಬರುವ ವರ್ಷಗಳಲ್ಲಿ “ಕಿಚನ್‌ ಕ್ರಾಂತಿ’ (ಅಡುಗೆಮನೆ ಕ್ರಾಂತಿ) ಆಗಲಿದ್ದು, ಮುಂದಿನ 2-3 ವರ್ಷಗಳಲ್ಲಿ 3 ಕೋಟಿ ಮನೆಗಳಿಗೆ ಸೌರ ಅಡುಗೆ ವ್ಯವಸ್ಥೆ “ಸೋಲಾರ್‌ ಕುಕ್‌ಟಾಪ್‌’ಗಳನ್ನು ವಿತರಿಸುವ ಗುರಿ ಇದೆ ಎಂದು ಎಂದು ಪ್ರಧಾನಿ ಮೋದಿ ತಿಳಿಸಿದರು.

9 ವರ್ಷಗಳಲ್ಲಿ 19 ಕೋಟಿ ಕುಟುಂಬಗಳು ಸ್ವತ್ಛ ಮತ್ತು ಶುದ್ಧ ಅಡುಗೆ ಇಂಧನ ಬಳಸುತ್ತಿದ್ದಾರೆ. ಪ್ರಸ್ತುತ 22 ಸಾವಿರ ಕಿ.ಮೀ. ಅನಿಲ ಕೊಳವೆ ಮಾರ್ಗ ನಿರ್ಮಿಸಲಾಗಿದೆ. ಮುಂದಿನ ನಾಲ್ಕೈದು ವರ್ಷಗಳಲ್ಲಿ ಈ ಜಾಲವನ್ನು 35 ಸಾವಿರ ಕಿ.ಮೀ.ಗೆ ವಿಸ್ತರಿಸುವ ಗುರಿ ಇದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 2-3 ವರ್ಷಗಳಲ್ಲಿ 3 ಲಕ್ಷ ಕುಟುಂಬಗಳಿಗೆ ಸೋಲಾರ್‌ ಕುಕ್‌ಟಾಪ್‌ಗ್ಳನ್ನು ವಿತರಿಸುವ ಗುರಿ ಇದೆ. ಈ ಎಲ್ಲ ಹಿನ್ನೆಲೆಯಲ್ಲಿ ಇಂಧನ ಕ್ಷೇತ್ರದಲ್ಲಿನ ಹೂಡಿಕೆಗೆ ಭಾರತ ಪ್ರಶಸ್ತವಾಗಿದೆ ಎಂದರು.

ಪೆಟ್ರೋಲ್‌ನೊಂದಿಗೆ ಶೇ. 20ರಷ್ಟು ಎಥೆನಾಲ್‌ ಮಿಶ್ರಣ ಮಾಡಿ ಮಾರಾಟ ಮಾಡಲು 2030ರ ಗುರಿ ನಿಗದಿಪಡಿಸಲಾಗಿತ್ತು. ಆದರೆ, ಈ ಗುರಿಯನ್ನು ಐದು ವರ್ಷ ಮುಂಚಿತವಾಗಿಯೇ ಅಂದರೆ 2025ಕ್ಕೇ ತಲುಪುತ್ತಿದ್ದೇವೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next