Advertisement

ಜವಾಬ್ದಾರಿಯಿಂದ ಕೆಲಸ ಮಾಡದಿದ್ರೆ ಗೇಟ್‌ಪಾಸ್‌

10:04 AM Sep 01, 2017 | |

ಬೆಂಗಳೂರು: “ಚುನಾವಣೆ ವರ್ಷವಾಗಿರುವುದರಿಂದ ಪಕ್ಷ ವಹಿಸಿದ ಕೆಲಸ ಮಾಡಬೇಕು. ಇಲ್ಲದಿದ್ದರೆ ಹುದ್ದೆ ಬಿಟ್ಟು ಹೋಗಬೇಕು.’ – ಹೀಗೆಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ ಜಿಲ್ಲಾ ಉಸ್ತುವಾರಿ  ಕಾರ್ಯದರ್ಶಿಗಳಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಗುರುವಾರ ದಿನಪೂರ್ತಿ ನಡೆದ ವಿಭಾಗವಾರು ಸಭೆಯಲ್ಲಿ ಅವರು ಜಿಲ್ಲಾವಾರು ಪಕ್ಷದ ಸಂಘಟನೆ, ಬೂತ್‌ ಮಟ್ಟದ ಸಮಿತಿ ರಚನೆ ಸೇರಿದಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ವಹಿಸಿದ್ದ ಜವಾಬ್ದಾರಿಯ ಪ್ರಗತಿ ಕುರಿತು ಕೂಲಂಕಶವಾಗಿ ಮಾಹಿತಿ ಪಡೆದುಕೊಂಡರು. ಅನೇಕ ಕಾರ್ಯದರ್ಶಿಗಳು ಜಿಲ್ಲೆಗಳಿಗೆ ತೆರಳದೆ ಬೂತ್‌ ಮಟ್ಟದ ಸಮಿತಿ ರಚನೆ ಕಾರ್ಯವನ್ನು ಪೂರ್ಣಗೊಳಿಸದಿರುವುದಕ್ಕೆ ವೇಣುಗೋಪಾಲ ಕೆಂಡಾಮಂಡಲರಾಗಿದ್ದಾರೆ. ಆ.31ರೊಳಗೆ ಎಲ್ಲ ಬೂತ್‌ ಮಟ್ಟದ ಸಮಿತಿಗಳ ರಚನೆ ಮಾಡುವಂತೆ ಸೂಚನೆ ನೀಡಿದ್ದರೂ, ಸಮರ್ಪಕವಾಗಿ ಸ್ಪಂದಿಸಿಲ್ಲ ಎಂದು ತಿಳಿದು ಬಂದಿದೆ.

ಇದೇ ಸಂದರ್ಭದಲ್ಲಿ ಶಾಸಕರಿಗೂ ಎಚ್ಚರಿಕೆ ನೀಡಿರುವ ವೇಣುಗೋಪಾಲ, ಬೂತ್‌ ಮಟ್ಟದ ಸಮಿತಿ ರಚನೆ  ವಿಷಯದಲ್ಲಿ ಯಾರು ನಿರ್ಲಕ್ಷ ತೋರುತ್ತಾರೋ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಈಗಾಗಲೇ ಶೇ.80ರಷ್ಟು ಬೂತ್‌ ಮಟ್ಟದ ಸಮಿತಿ ರಚನೆ ಮಾಡಲಾಗಿದ್ದು, ಉಳಿದ ಶೇ.20 ರಷ್ಟು ಸಮಿತಿಗಳನ್ನು ವಾರದಲ್ಲಿ ಪೂರ್ಣಗೊಳಿಸದಿದ್ದರೆ, ಅಂತವರನ್ನು ಹುದ್ದೆಯಿಂದ ಕಿತ್ತು ಹಾಕುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ತಿಂಗಳಲ್ಲಿ 20 ದಿನ ಕ್ಷೇತ್ರದಲ್ಲಿ: ಉಸ್ತುವಾರಿ ಸಚಿವರು, ಶಾಸಕರು ಹಾಗೂ ಕಾರ್ಯದರ್ಶಿಗಳು ಇನ್ನು ಮುಂದೆ ತಿಂಗಳಲ್ಲಿ 20 ದಿನ ಕ್ಷೇತ್ರದಲ್ಲಿ ಕೆಲಸ ಮಾಡಬೇಕು. ಉಳಿದ ಹತ್ತು ದಿನ ಮಾತ್ರ ಮನೆಗಳಿಗೆ ತೆರಳುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸಭೆ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇಣುಗೋಪಾಲ, “ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದ್ದು, ರಾಜ್ಯ ಸರ್ಕಾರ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ನೀಡಿದೆ. ಅಲ್ಲದೇ ಪಕ್ಷದ ಸಂಘಟನೆ ಸದೃಢವಾಗಿದೆ. ಇನ್ನು ಮುಂದೆ  ಕೇಡರ್‌ಬೇಸ್‌ ಪಕ್ಷವಾಗಿ ಸಂಘಟನೆ ಮಾಡಲಿದ್ದು, ರಾಜ್ಯಾದ್ಯಂತ ಬೂತ್‌ ಮಟ್ಟದ ಸಮಿತಿಗಳನ್ನು ರಚಿಸಲಾಗಿದೆ. ಈಗಾಗಲೇ ಶೇ.80ರಷ್ಟು ಬೂತ್‌ ಮಟ್ಟದ ಸಮಿತಿ ರಚಿಸಲಾಗಿದ್ದು, ವಾರದಲ್ಲಿ ಉಳಿದ ಸಮಿತಿಗಳ ರಚನೆಗೆ ಸೂಚನೆ ನೀಡಲಾಗಿದೆ ಎಂದರು.

ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲಿ ಜಿಲ್ಲಾ ಹಾಗೂ ವಿಧಾನಸಭಾವಾರು ಸಮಾವೇಶಗಳನ್ನು ನಡೆಸಲಾಗುವುದು. ನ. 19ರಂದು ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಜನ್ಮ ಶತಮಾನೋತ್ಸವ ಆಚರಣೆ ಹಾಗೂ ಡಿಸೆಂಬರ್‌ನಲ್ಲಿ “ಕಾಂಗ್ರೆಸ್‌ ನಡಿಗೆ ಮರಳಿ ಜನರ ಬಳಿಗೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ರಾಜ್ಯ ಸರ್ಕಾರದ ಸಾಧನೆ ಹಾಗೂ ಕೇಂದ್ರ ಸರ್ಕಾರದ ವೈಫ‌ಲ್ಯದ ಕುರಿತು ಬಿಜೆಪಿಯೊಂದಿಗೆ ಮುಕ್ತ ಚರ್ಚೆಗೆ ಸಿದ್ದವಿದ್ದು, ಬಿಜೆಪಿಯವರ ಯಾವುದೇ ಹೋರಾಟಕ್ಕೂ ತಿರುಗೇಟು ನೀಡಲು ಪಕ್ಷ ಸದೃಢವಾಗಿದೆ ಎಂದರು.

Advertisement

ಪ್ರಧಾನಿ ಜನತೆಯ ಕ್ಷಮೆಯಾಚಿಸಲಿ: ಪ್ರಧಾನಿ ಮೋದಿ ನೋಟ್‌ ಬ್ಯಾನ್‌ ಮಾಡಿದ್ದರಿಂದ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ದೇಶದ ಜನತೆಗೆ ತೊಂದರೆ ಕೊಟ್ಟಿದ್ದಕ್ಕಾಗಿ ಕ್ಷಮೆಯಾಚಿಸಬೇಕು. ಅಪನಗದೀಕರಣ ಸಂದರ್ಭದಲ್ಲಿ ಪ್ರಧಾನಿ ಮೋದಿ, ಗಡಿಯಾಚೆಗಿನ ಭಯೋತ್ಪಾದನೆ ನಿಯಂತ್ರಣ, ಕಪ್ಪು ಹಣ ತಡೆಯುವುದು, ಡಿಜಿಟಲ್‌ ವ್ಯವಹಾರಕ್ಕೆ ಉತ್ತೇಜನ ಹಾಗೂ ನಕಲಿ ನೋಟುಗಳ ಹಾವಳಿಗೆ ಬ್ರೇಕ್‌ ಬೀಳುತ್ತದೆ ಎಂದು ಹೇಳಿದ್ದರು. ಆದರೆ, ರಿಸರ್ವ್‌ ಬ್ಯಾಂಕ್‌ ನೀಡಿರುವ ಅಧಿಕೃತ ಮಾಹಿತಿ ಪ್ರಕಾರ ದೇಶದಲ್ಲಿ ನಿಷೇಧ ಮಾಡಿರುವ ಎಲ್ಲ ಹಣ ಬ್ಯಾಂಕ್‌ಗೆ
ಜಮೆಯಾಗಿರುವುದರಿಂದ ಕಪ್ಪು ಹಣ ಪತ್ತೆಯಾಗಿಲ್ಲ ಎಂದು ವೇಣುಗೋಪಾಲ ಹೇಳಿದರು.

“ದರ್ಶನ್‌ ಸೇರ್ಪಡೆ ಬಗ್ಗೆ ಚರ್ಚೆಯಾಗಿಲ್ಲ’
ಬೆಂಗಳೂರು: “ಚಿತ್ರ ನಟ ದರ್ಶನ್‌ ಕಾಂಗ್ರೆಸ್‌ ಪಕ್ಷ ಸೇರುವ ಕುರಿತು ಇದುವರೆಗೂ ಯಾವುದೇ ರೀತಿಯ ಚರ್ಚೆ ನಡೆದಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ದರ್ಶನ್‌ ತಾಯಿ ಮೀನಾ ತೂಗುದೀಪ್‌ ನಮ್ಮ ಪಕ್ಷದ ಸದಸ್ಯರಾಗಿದ್ದು, ಪದಾಧಿಕಾರಿಯೂ ಆಗಿದ್ದಾರೆ. ಆದರೆ, ದರ್ಶನ್‌ ಪಕ್ಷ ಸೇರುವ ಬಗ್ಗೆ ಯಾರೊಂದಿಗೂ ಚರ್ಚೆ ನಡೆಸಿಲ್ಲ’ ಎಂದು ಹೇಳಿದ್ದಾರೆ.
ಇದೇ ವಿಷಯಕ್ಕೆ ಪ್ರತಿಕ್ರಿಯೆ ನೀಡಿರುವ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ದರ್ಶನ್‌ ಬಗ್ಗೆ ಪಕ್ಷದ ವೇದಿಕೆಯಲ್ಲಿ ಕೆಲವರು ಚರ್ಚೆ ನಡೆಸಿದ್ದಾರೆ. ಅವರು, ಅನೇಕ ಜನಪರ ಹೋರಾಟಗಳಲ್ಲಿ ಪಾಲ್ಗೊಂಡು ರಾಜ್ಯದ ಪರವಾಗಿ ಧ್ವನಿ ಎತ್ತಿದ್ದಾರೆ. ಅವರು ಜನಪ್ರಿಯ ನಟರೂ ಹೌದು. ಅವರು ಪಕ್ಷಕ್ಕೆ ಬಂದರೆ ಸ್ವಾಗತ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next