ಬೆಂಗಳೂರು: ಗ್ಯಾರೇಜ್‌ವೊಂದರಲ್ಲಿ ವೆಲ್ಡಿಂಗ್ ಟ್ಯಾಂಕ್ ಸ್ಫೋಟಗೊಂಡು ಗ್ಯಾರೇಜ್ ಮಾಲೀಕ ಸೇರಿ ನಾಲ್ವರು ಗಾಯಗೊಂಡಿರುವ ಘಟನೆ ಬಸವೇಶ್ವರನಗರದಲ್ಲಿ ಶನಿವಾರ ನಡೆದಿದೆ.
ಬಸವೇಶ್ವರನಗರದ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಪೈ ಶೋ ರೂಮ್ ಬಳಿಯ ಗ್ಯಾರೇಜ್‌ನಲ್ಲಿ ಸಂಜೆ 6 ಗಂಟೆಗೆ ಘಟನೆ ನಡೆದಿದೆ. ಗ್ಯಾರೇಜ್ ಮಾಲೀಕ ಜಾರ್ಜ್, ಕೆಲಸಗಾರ ಶಿವು, ಇಬ್ಬರು ಪಾದಚಾರಿ ಸೇರಿ ನಾಲ್ವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರೊಂದನ್ನು ವೆಲ್ಡಿಂಗ್ ಮಾಡುತ್ತಿದ್ದಾಗ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಕೆಲ ಕ್ಷಣಗಳಲ್ಲೇ ಬೆಂಕಿ ಕಿನ್ನಾಲಿಗೆ ಗ್ಯಾಸ್ ವೆಲ್ಡಿಂಗ್ ಟ್ಯಾಂಕ್‌ಗೆ ತಗುಲಿ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಗ್ಯಾರೇಜ್ ಸೇರಿ ಸುತ್ತ-ಮುತ್ತಲ ಹಲವು ಮನೆಗಳು, ನಿರ್ಮಾಣ ಹಂತದ ಕಟ್ಟಡಕ್ಕೆ ಹಾನಿಯಾಗಿದೆ.
ಗ್ಯಾರೇಜ್‌ನಲ್ಲಿ ದಟ್ಟ ಹೊಗೆ ಸಹಿತ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಎರಡು ವಾಹನಗಳೊಂದಿಗೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿ : ಕೆಲ ದಿನಗಳ ಹಿಂದಷ್ಟೇ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿತ್ತು. ಈ ಘಟನೆ ಜನಮಾನಸದಲ್ಲಿ ಆಂತಕ ಮೂಡಿಸಿತ್ತು. ಇದೇ ಮಾದರಿಯಲ್ಲಿ ಗ್ಯಾರೇಜ್ ವೆಲ್ಡಿಂಗ್ ಟ್ಯಾಂಕ್ ದೊಡ್ಡ ಮಟ್ಟದಲ್ಲಿ ಸ್ಫೋಟಗೊಳ್ಳುತ್ತಿದ್ದಂತೆ ಸ್ಥಳದಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ಪ್ರತ್ಯಕ್ಷದರ್ಶಿ ಮಹಿಳೆಯೊಬ್ಬರು ಹೇಳುವ ಪ್ರಕಾರ, ಸಂಜೆ 6 ಗಂಟೆಗೆ ಗ್ಯಾರೇಜ್‌ನಲ್ಲಿ ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕೆಲ ಕ್ಷಣಗಳ ಬಳಿಕ ಬೆಂಕಿ ಜೋರಾಗಿತ್ತು. ಆ ನಂತರ ದೊಡ್ಡ ಮಟ್ಟದಲ್ಲಿ ಸ್ಫೋಟಗೊಂಡಿತ್ತು. ಅದರಿಂದ ಅಕ್ಕ-ಪಕ್ಕದ ಮನೆಗಳ ಕಿಟಕಿ ಗಾಜುಗಳು ಹಾನಿಯಾಯಿತು. ಆರಂಭದಲ್ಲಿ ಗ್ಯಾರೇಜ್‌ನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿತ್ತು ಎಂದು ಕೊಂಡೆವು. ಆದರೆ, ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ ವೆಲ್ಡಿಂಗ್ ಟ್ಯಾಂಕ್ ಸ್ಫೋಟಗೊಂಡಿದೆ ಎಂದು ಹೇಳಿದಾಗ ನಿರಾಳವಾಯಿತು. ಗ್ಯಾ
ರೇಜ್‌ನಲ್ಲಿ ಗ್ಯಾಸ್ ವೆಲ್ಡಿಂಗ್ ಟ್ಯಾಂಕ್ ಸ್ಫೋಟಗೊಂಡು ಗ್ಯಾರೇಜ್ ಮಾಲೀಕ, ಕೆಲಸಗಾರ ಸೇರಿ ನಾಲ್ವರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ಮಾಗಡಿ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
–ಗಿರೀಶ್, ಪಶ್ಚಿಮ ವಿಭಾಗದ ಡಿಸಿಪಿ.