ವಿಜಯಪುರ: ನಗರದ ಜಿ.ಪಂ. ಬಳಿಯ ಬೀದಿ ಬದಿ ಹೋಟೆಲ್ ನಲ್ಲಿ ಗ್ಯಾಸ್ ಸಿಲಿಂಡರ್ ಪೈಪ್ ಗೆ ಬೆಂಕಿ ಹೊತ್ತಿಕೊಂಡಿದ್ದು, ಸ್ಥಳದಲ್ಲಿದ್ದ ವ್ಯಕ್ತಿಯ ಸಮಯ ಪ್ರಜ್ಞೆಯಿಂದ ಆಗಬಹುದಾಗಿದ್ದ ಭಾರಿ ಅಪಾಯ ತಪ್ಪಿದೆ.
ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ ನಡೆಯುತ್ತಿತ್ತು. ಹೀಗಾಗಿ ಸಹಜವಾಗಿ ಜಿ.ಪಂ. ಎದುರು ಹೆಚ್ಚಿನ ಜನ ಸೇರಿದ್ದು, ಬೀದಿಬದಿ ಹೋಟೆಲ್ ಗಳಲ್ಲಿ ಜನಜಂಗುಳಿ ಇತ್ತು.
ಇದನ್ನೂ ಓದಿ:ರಾಯಚೂರು: ಮನೆ ಮುಂದೆ ಪಟಾಕಿ ಸಿಡಿಸಿ ಬೆದರಿಸಿ ಹಣಕ್ಕಾಗಿ ಬೇಡಿಕೆ ಹಾಕಿದ ಖದೀಮರು!
ಜಿ.ಪಂ. ಎದುರಿನ ಬೀದಿಬದಿ ಒಂದು ಹೋಟೆಲ್ ನಲ್ಲಿ ಮಿರ್ಚಿ ಕರಿಯುತ್ತಿದ್ದಾಗ ಸುಡುವ ಎಣ್ಣೆ ಗ್ಯಾಸ್ ಪೈಪ್ ಮೇಲೆ ಬಿದ್ದಿದೆ. ಇದರಿಂದ ಪೈಪ್ ಕತ್ತರಿಸಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಬೀದಿ ಬದಿ ಹೋಟೆಲ್ ನಲ್ಲಿದ್ದ ಜನರು, ಜಿ.ಪಂ. ಆವರಣದಲ್ಲಿ ಇದ್ದವರು ದಿಕ್ಕಾಪಾಲಾಗಿ ಓಡಿದ್ದಾರೆ. ಆದರೆ ಸ್ಥಳದಲ್ಲಿದ್ದ ಹೋಟೆಲ್ ಮಾಲೀಕ ಮಾತ್ರ ದೃತಿಗೆಡದೆ ಕೂಡಲೇ ಗ್ಯಾಸ್ ರೆಗ್ಯುಲೇಟರಿ ಲೇಟರ್ ಬಂದ್ ಮಾಡಿದ್ದಾರೆ. ಇದರಿಂದ ಆಗಬಹುದಾಗಿದ್ದ ಭಾರಿ ಅನಾಹುತ ತಪ್ಪಿದೆ.
ಆದರೆ ಸದರಿ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಸ್ಥಳದಲ್ಲಿದ್ದ ಸಚಿವರು ಹಾಗೂ ಕೆಡಿಪಿ ಸಭೆಯ ಭದ್ರತಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸರೂ ಘಟನೆಯಿಂದ ಆತಂಕಗೊಂಡಿದ್ದರು.