Advertisement

ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ತೋಟ!

12:08 PM Nov 28, 2018 | |

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದ 20 ಎಕರೆ ಜಾಗದಲ್ಲಿ ಹಣ್ಣುಹಂಪಲು ತೋಟ (ಫ್ರೂಟ್‌ ಪಾರ್ಕ್‌) ನಿರ್ಮಿಸಲು ವಿವಿಯ ಆಡಳಿತ ಮಂಡಳಿ ಸಜ್ಜಾಗುತ್ತಿದೆ. ನೂರಾರು ಎಕರೆ ವಿಸ್ತೀರ್ಣದ ಬೆಂವಿವಿ ಜ್ಞಾನಭಾರತಿ ಆವರಣದಲ್ಲೇ ಶ್ರೀಗಂಧ ಸಹಿತವಾಗಿ ಅತ್ಯಮೂಲ್ಯವಾದ ಸಾವಿರಾರು ಮರಗಳಿವೆ. ಆದರೆ, ಹಣ್ಣಿನ ಮರಗಳ ಸಂಖ್ಯೆ ತೀರಾ ಕಡಿಮೆ.

Advertisement

ಹಾಸ್ಟೆಲ್‌ ಮುಂಭಾಗ ಅಥವಾ ಆಡಳಿತ ಕಚೇರಿಯ ಸುತ್ತಲಿನ ಪ್ರದೇಶದಲ್ಲಿ ಸೀಬೆ, ಸಪೋಟ, ಮಾವು ಹೀಗೆ ಐದಾರು ಜಾತಿಯ ಹಣ್ಣಿನ ಮರಗಳು ಕಾಣಸಿಗುತ್ತದೆ. ಅದು ಕೂಡ ಬೆರಳೆಣಿಕೆಯಷ್ಟು ಮಾತ್ರ. ಇದೀಗ ವಿವಿ ಕ್ಯಾಂಪಸ್‌ನಲ್ಲೇ ಹಣ್ಣುಗಳನ್ನು ಬೆಳೆಸುವುದಕ್ಕಾಗಿ ಪ್ರತ್ಯೇಕ ತೋಟ ನಿರ್ಮಾಣಕ್ಕೆ ಆಡಳಿತ ಮಂಡಳಿ ಮುಂದಾಗಿದೆ.

ಜ್ಞಾನಭಾರತಿ ಆವರಣದ ಸಮೀಪದ ಎಚ್‌.ಎನ್‌.ಕಲಾಕ್ಷೇತ್ರದ ಹಿಂಭಾಗದಲ್ಲಿರುವ ಜಾಗದ 20 ಎಕರೆ ಪ್ರದೇಶದಲ್ಲಿ ಹಣ್ಣು ಹಂಪಲು ತೋಟ ನಿರ್ಮಾಣಕ್ಕೆ ನೀಲನಕ್ಷೆ ಸಿದ್ಧವಾಗುತ್ತಿದೆ. ಮಾವು, ದಾಳಿಂಬೆ, ಸೀಬೆ, ಬಾಳೆ, ಸಪೋಟ, ಹಲಸು, ಸೀತಾಫ‌ಲ… ಹೀಗೆ ಇಲ್ಲಿನ ಮಣ್ಣಿಗೆ ಸರಿಹೊಂದಬಲ್ಲ ನಾನಾ ಜಾತಿಯ ಹಣ್ಣಿನ ಸಸಿಗಳನ್ನು ನಡೆಲಾಗುತ್ತದೆ. ಅದರ ನಿರ್ವಹಣೆಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತದೆ ಎಂದು ವಿಶ್ವವಿದ್ಯಾಲಯದ ಉನ್ನತ ಮೂಲ ಖಚಿತಪಡಿಸಿದೆ.

ಪಠ್ಯಕ್ರಮ ಬದಲಾವಣೆಗೆ ಚಿಂತನೆ: ಆಧುನಿಕತೆಗೆ ಸರಿಹೊಂದಿರುವಂತೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಂವಿವಿಯ ಕೆಲವು ವಿಭಾಗದ ಪಠ್ಯಕ್ರಮ ಬದಲಾವಣೆಗೆ ಚಿಂತನೆ ನಡೆಯುತ್ತಿದೆ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಸ್ಥಾಪಿಸಲು ಯುಸಿಜಿಗೆ ಪತ್ರ ಬರೆಯಲಾಗಿದೆ. ಈವರೆಗೂ ಜ್ಞಾನಭಾರತಿ ಆವರಣದಲ್ಲಿ ಪತ್ರಿಕೋದ್ಯಮ ಕೋರ್ಸ್‌ ಇರಲಿಲ್ಲ.

ಸೆಂಟ್ರಲ್‌ ಕಾಲೇಜು ಈಗ ಬೆಂಗಳೂರು ಕೇಂದ್ರ ವಿವಿ ವ್ಯಾಪ್ತಿಯಲ್ಲಿ ಇರುವುದರಿಂದ ಬೆಂವಿವಿಯಲ್ಲಿ ಪತ್ರಿಕೋದ್ಯಮ ವಿಭಾಗ ಹೊಸದಾಗಿ ತೆರೆಯಬೇಕಿದೆ. ಹೀಗಾಗಿ ಯುಜಿಸಿಗೆ ಅನುಮತಿ ಕೋರಿ ಪತ್ರ ಬರೆಯಲಾಗಿದ್ದು, ಅನುಮತಿ ಪಡೆದ ನಂತರ ಪ್ರತ್ಯೇಕ ವಿಭಾಗ ತೆರೆಯಲಿದ್ದೇವೆ. ಇದಕ್ಕಾಗಿಯೂ ಜಾಗವನ್ನು ಮೀಸಲಿಡಲಿದ್ದೇವೆ ಎಂದು ಕುಲಪತಿ ಪ್ರೊ.ಕೆ.ಆರ್‌.ವೇಣುಗೋಪಾಲ್‌ ವಿವರಿಸಿದರು.

Advertisement

ಫಿಲ್ಮ ಮಿಡಿಯಾ, ಗ್ರಾಫಿಕ್ಸ್‌ ಮತ್ತು ಅನಿಮೇಷನ್‌, ಕಾರ್ಪೊರೇಟ್‌ ಕಮ್ಯೂನಿಕೇಷನ್‌ ಹಾಗೂ ಪಬ್ಲಿಕ್‌ ರಿಲೇಷನ್‌… ಹೀಗೆ ಇಂದಿನ ಪತ್ರಿಕೋದ್ಯಮಕ್ಕೆ ಅಗತ್ಯವಿರುವ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸುವ ಪ್ರಯತ್ನ ಮಾಡಲಿದ್ದೇವೆ. ಸಸ್ಯ ಶಾಸ್ತ್ರ ವಿಭಾಗದಲ್ಲಿ ಬಟಾನಿಕ್‌ ಗಾರ್ಡನ್‌ ನಿರ್ಮಾಣ ಮಾಡಲಿದ್ದೇವೆ. ಸದ್ಯ ಬೆಂವಿವಿಯಲ್ಲಿ ಬಟಾನಿಕ್‌ ಗಾರ್ಡನ್‌ ಇಲ್ಲ.

ಹೀಗಾಗಿ ಸಸ್ಯಶಾಸ್ತ್ರ ವಿಭಾಗದಲ್ಲಿ ಇದನ್ನು ನಿರ್ಮಾಣ ಮಾಡಲಿದ್ದೇವೆ. ಜತೆಗೆ ಔಷಧ ಸಸ್ಯಗಳ ಉದ್ಯಾನವನ ನಿರ್ಮಾಣ ಮಾಡಲಿದ್ದೇವೆ. ಹಾಗೆಯೇ ಏರೋಸ್ಪೇಸ್‌ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದ ಕೋರ್ಸ್‌ಗಳನ್ನು ಎಂ.ಟೆಕ್‌ ವಿಭಾಗದಲ್ಲಿ ತೆರೆಯಲಿದ್ದೇವೆ ಎಂದು ಮಾಹಿತಿ ನೀಡಿದರು.

ಜ್ಞಾನ ಭಾರತಿ ಆವರಣದ ಒಳಗೆ ರಾಜಕಾಲುವೆ ಹರಿಯುತ್ತಿದೆ. ಹಿಂದೆ ಅದೇ ವೃಷಭಾವತಿ ನದಿಯಾಗಿತ್ತು. ಕೊಳಚೆ ನೀರು ಶುದ್ಧೀಕರಿಸುವ ಮೂಲಕ ರಾಜಕಾಲುವೆಯ ನೀರನ್ನು ಉದ್ಯಾನವನ ಸೇರಿದಂತೆ ವಿವಿಧ ಉದ್ದೇಶಕ್ಕೆ ಬಳಕೆ ಮಾಡಲು ಯೋಜನೆ ರೂಪಿಸುತ್ತಿದ್ದೇವೆ. ಬೆಂವಿವಿಯ ವಿವಿಧ ಕಟ್ಟಡಕ್ಕೆ ಮಳೆ ನೀರು ಕೊಯ್ಲು ಅವಳಡಿಸುವ ಬಗ್ಗೆಯೂ ಚಿಂತನೆ ನಡೆಸುತ್ತಿದ್ದೇವೆ ಎಂದು ವಿವರಿಸಿದರು.

ಬೆಂವಿವಿ ಹಲವು ಹೊಸ ಯೋಜನೆಗಳನ್ನು ಹಮ್ಮಿಕೊಂಡಿದೆ. ಎಲ್ಲವೂ ಒಮ್ಮೆಗೆ ಸಿದ್ಧವಾಗುವುದಿಲ್ಲ. ಹಂತ ಹಂತವಾಗಿ ಎಲ್ಲ ಯೋಜನೆಗಳನ್ನು ಕಾರ್ಯರೂಪಕ್ಕೆ ತರುತ್ತೇವೆ. 20 ಎಕರೆ ಜಾಗದಲ್ಲಿ ಹಣ್ಣುಹಂಪಲು ತೋಟ, ಸಸ್ಯಶಾಸ್ತ್ರ ವಿಭಾಗದಲ್ಲಿ ಔಷಧ ಸಸ್ಯಗಳ ಉದ್ಯಾನವನ, ಪತ್ರಿಕೋದ್ಯಮ ಕೋರ್ಸ್‌ಗೆ ಪ್ರತ್ಯೇಕ ವಿಭಾಗ ಹೀಗೆ ಹಲವು ಯೋಜನೆ ಇದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಕೆಲವೊಂದನ್ನು ಆರಂಭಿಸಲಿದ್ದೇವೆ.
-ಪ್ರೊ.ಕೆ.ಆರ್‌.ವೇಣುಗೋಪಾಲ್‌, ಬೆಂವಿವಿ ಕುಲಪತಿ

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next