Advertisement

ಗಾರ್ಡನ್‌ ಸಿಟಿ ಬೆಂಗಳೂರಿಗೆ ಗಾರ್ಬೇಜ್‌ ಸಿಟಿ ಹಣೆಪಟ್ಟಿ ತಪ್ಪಿದ್ದಲ್ಲ

12:29 PM Apr 30, 2018 | |

ಬೆಂಗಳೂರು: ರಾಜ್ಯದಲ್ಲಿ ಯಾವುದೇ ಸರ್ಕಾರ ಬರಲಿ, ಬಿಬಿಎಂಪಿಯಲ್ಲಿ ಯಾರದೇ ಆಡಳಿತ ಇರಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜಧಾನಿ ಬೆಂಗಳೂರು “ಗಾರ್ಬೇಜ್‌ ಸಿಟಿ’ ಎಂಬ ಅಪಖ್ಯಾತಿಗೆ ಒಳಗಾಗುವುದು ತಿಪ್ಪಿಲ್ಲ. ತ್ಯಾಜ್ಯ ಸಮಸ್ಯೆಗೆ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳಲು ಮಾತ್ರ ಸಾಧ್ಯವಾಗಿಲ್ಲ. ಹೀಗಾಗಿ, ತ್ಯಾಜ್ಯ ವಿಲೇವಾರಿ ಸಮಸ್ಯೆ ಶಾಶ್ವತ ಸಮಸ್ಯೆಯಂತಾಗಿದೆ.

Advertisement

ವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡದ ಹಿನ್ನೆಲೆಯಲ್ಲಿ ಮಂಡೂರು, ಬಿಂಗೀಪುರ ಹಾಗೂ ಮಾವಳ್ಳಿಪುರಗಳಲ್ಲಿ ಉಗ್ರ ಪ್ರತಿಭಟನೆಗಳು ನಡೆದವು. ಆ ನಂತರವೂ ಭವಿಷ್ಯದಲ್ಲಿ ಉದ್ಭವಿಸಬಹುದಾದ ತ್ಯಾಜ್ಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರ ವಿಫ‌ಲವಾಗಿದ್ದು, ತಾತ್ಕಾಲಿಕ ಪರಿಹಾರಗಳ ಮೊರೆ ಹೋದ ಪರಿಣಾಮ ಸಮಸ್ಯೆಗಳು ಮತ್ತಷ್ಟು ವೃದ್ಧಿಸಿವೆ.

ನಾಗರಿಕರ ಹೋರಾಟಕ್ಕೆ ಮಣಿದ ಸರ್ಕಾರ ಮಂಡೂರು, ಬಿಂಗೀಪುರ ಹಾಗೂ ಮಾವಳ್ಳಿಪುರದಲ್ಲಿ ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಿ, ತ್ಯಾಜ್ಯ ನೆಲದ ಮೇಲೆ ಬೀಳದಂತೆ ಸಂಸ್ಕರಣೆ ಮಾಡಬೇಕೆಂಬ ಉದ್ದೇಶದಿಂದ 250 ಕೋಟಿ ರೂ. ವೆಚ್ಚದಲ್ಲಿ ನಗರದ 6 ಕಡೆ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪಿಸಿದೆ. ಆದರೆ, ಪಾಲಿಕೆ ಅಧಿಕಾರಿಗಳು ಹಾಗೂ ಗುತ್ತಿಗೆ ಪಡೆದೆ ಸಂಸ್ಥೆಗಳು ಘಟಕಗಳನ್ನು ಸಮಪರ್ಕವಾಗಿ ನಿರ್ವಹಿಸಿದ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮಸ್ಥರು ಘಟಕಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರಿಂದ ಈಗ ಘಟಕಗಳು ಸ್ಥಗಿತಗೊಂಡಿವೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ನಿತ್ಯ 4 ಸಾವಿರ ಟನ್‌ ತ್ಯಾಜ್ಯ ಸೃಷ್ಟಿಯಾಗುತ್ತಿದ್ದು, ಆ ಪೈಕಿ 2,300 ಟನ್‌ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಸಾಮಥ್ಯ ಘಟಕಗಳಿಗಿದೆ. ಆದರೆ, ಅಸಮರ್ಪಕ ನಿರ್ವಹಣೆ, ತಾಂತ್ರಿಕ ದೋಷ ಹಾಗೂ ಸ್ಥಳೀಯರ ಪ್ರತಿಭಟನೆಗಳ ಪರಿಣಾಮ ದಿನಕ್ಕೆ 500 ಟನ್‌ ತ್ಯಾಜ್ಯವೂ ಸಂಸ್ಕರಣೆಯಾಗುತ್ತಿಲ್ಲ.

ಕಸ ಸಂಗ್ರಹಿಸುವವರಿಗೆ ನೀಡುವಾಗ ನಾಗರಿಕರು ತ್ಯಾಜ್ಯ ವಿಂಗಡಿಸದಿರುವುದು ಸಹ ತ್ಯಾಜ್ಯ ಸಂಸ್ಕರಣೆಗೆ ತೊಂದರೆಯಾಗುತ್ತಿದೆ. ತ್ಯಾಜ್ಯ ವಿಂಗಡಣೆ ಕುರಿತು ಹಲವಾರು ಬಾರಿ ಅಭಿಯಾನ ನಡೆಸಿ ದಂಡ ವಿಧಿಸುವ ಎಚ್ಚರಿಕೆ ನೀಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಇನ್ನೊಂದೆಡೆ ಜನ ತ್ಯಾಜ್ಯ ವಿಂಗಡಿಸಿ ನೀಡಿದರೂ ಸಂಗ್ರಹಿಸುವವರಿ ಹಸಿ ಮತ್ತು ಒಣ ಕಸವನ್ನು ಒಂದೇ ಕಡೆ ಸುರಿಯುತ್ತಿದ್ದಾರೆ.

Advertisement

ಹೀಗಾಗಿ ಸಾರ್ವಜನಿಕರು ತ್ಯಾಜ್ಯ ವಿಂಗಡಿಸುವುದನ್ನು ನಿಲ್ಲಿಸಿದ್ದಾರೆ. ಜತೆಗೆ, ನಗರದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುವುದನ್ನು ತಡೆಯಲು ಪಾಲಿಕೆಯಿಂದ ಹಲವಾರು ಜಾಗೃತಿ ಅಭಿಯಾನಗಳನ್ನು ಕೈಗೊಂಡರೂ ನಗರದಲ್ಲಿನ ಬ್ಲಾಕ್‌ಸ್ಪಾಟ್‌ಗಳ ಸಂಖ್ಯೆ ಕಡಿಮೆಯಾಗದಿರುವುದು ಅಧಿಕಾರಿಗಳಿಗೆ ತಲೆನೋವಾಗಿ ಪರಿಗಣಿಸಿದೆ. 

ನಗರದಲ್ಲಿ ಸೃಷ್ಟಿಯಾಗುತ್ತಿರುವ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರಗಳಿಗೆ ಆದ್ಯತೆ ನೀಡುತ್ತಿರುವ ಪಾಲಿಕೆ ಅಧಿಕಾರಿಗಳ ಕ್ರಮದಿಂದ ಕಸದ ಸಮಸ್ಯೆ ಮುಂದುವರಿದಿದ್ದು, ನಗರದಲ್ಲಿ ತ್ಯಾಜ್ಯ ಸಮಸ್ಯೆ ಜೀವಂತವಾಗಿರಲು ಕಸದ ಮಾಫಿಯಾ ಕೆಲಸ ಮಾಡುತ್ತಿದ್ದೆ ಎಂಬ ಆರೋಪವಿದೆ. ಇತ್ತೀಚೆಗೆ ಹೈಕೋರ್ಟ್‌ ಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ವೈಜ್ಞಾನಿಕ ವಿಲೇವಾರಿಗೆ ಸಮಿತಿ ರಚಿಸುವಂತೆ ನೀಡಿರುವ ಆದೇಶದ ಮೇರೆಗೆ ನಾಲ್ಕು ಸದಸ್ಯರನ್ನೊಳಗೊಂಡ ಸಮಿತಿ ರಚಿಸಿರುವ ಪಾಲಿಕೆ, ಸಮಿತಿಯ ಸಲಹೆಗಳನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ.

ಕ್ವಾರಿಗಳ ಹುಡುಕಾಟ: ನೂರಾರು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ವಹಿಸುವಲ್ಲಿ ವಿಫ‌ಲವಾಗಿರುವ ಪಾಲಿಕೆ ಅಧಿಕಾರಿಗಳು, ನಗರದ ತ್ಯಾಜ್ಯವನ್ನು ಹೊರವಲಯಗಳಲ್ಲಿನ ಕ್ವಾರಿಗಳಲ್ಲಿ ಸುರಿಯುತ್ತಿದ್ದಾರೆ. ಈಗಾಗಲೇ ಕೆಲ ಕ್ವಾರಿಗಳು ಭರ್ತಿಯಾಗಿರುವ ಬೆನ್ನಲ್ಲೇ ಅಧಿಕಾರಿಗಳು ಮತ್ತೆ ಕ್ವಾರಿಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಪಾಲಿಕೆಯಿಂದ ವೈಜ್ಞಾನಿಕವಾಗಿ ಕ್ವಾರಿಗಳಿಗೆ ತ್ಯಾಜ್ಯ ಸುರಿಯದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಕೊಳವೆಬಾವಿಗಳು ಕಲುಷಿತಗೊಳ್ಳುತ್ತಿವೆ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆಗಿಳಿದಿರುವುದು ಪಾಲಿಕೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

* ವೆಂ.ಸುನಿಲ್‌ಕುಮಾರ್‌  

Advertisement

Udayavani is now on Telegram. Click here to join our channel and stay updated with the latest news.

Next