ಅಜೆಕಾರು: ಹಿರ್ಗಾನ ಹಾಗೂ ಮರ್ಣೆ ಗ್ರಾ.ಪಂ. ಗಡಿಭಾಗವಾಗಿರುವ ಎಣ್ಣೆಹೊಳೆ ಸೇತುವೆಯ ಇಕ್ಕೆಲಗಳಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರು ಎಸೆಯುವ ತ್ಯಾಜ್ಯ ರಾಶಿಯಿಂದಾಗಿ ಸ್ವಚ್ಛತೆ ಕಾಪಾಡುವಲ್ಲಿ ಸವಾಲು ಎದುರಾಗಿದೆ. ಹೆಬ್ರಿ ಕಾರ್ಕಳ ರಾಜ್ಯ ಹೆದ್ದಾರಿ ಹಾದು ಹೋಗುವ ಎಣ್ಣೆಹೊಳೆ ಸೇತುವೆಯ ಎರಡೂ ಬದಿಗಳಲ್ಲಿ ತ್ಯಾಜ್ಯ ರಾಶಿ ಬೀಳುತ್ತಿದ್ದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಪಂಚಾಯತ್ ಆಡಳಿತ ಹಲವು ಕ್ರಮಗಳನ್ನು ಕೈಗೊಂಡಿದ್ದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ.
ಈ ಭಾಗವು ಎರಡೂ ಪಂಚಾಯತ್ ವ್ಯಾಪ್ತಿಗೆ ಬರುವ ಹಿನ್ನೆಲೆಯಲ್ಲಿ ಎರಡೂ ಪಂಚಾಯತ್ ಆಡಳಿತಗಳು ಈಗಾಗಲೇ ಸೂಕ್ತ ಎಚ್ಚರಿಕೆಯ ನೊಟೀಸು ಹಾಕಿದ್ದರೂ ತ್ಯಾಜ್ಯಗಳ ರಾಶಿ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎಣ್ಣೆಹೊಳೆ ಸೇತುವೆ ಪಕ್ಕದಲ್ಲಿಯೇ ಪಂಚಾಯತ್ ವತಿಯಿಂದ ಈಗಾಗಲೇ ತ್ಯಾಜ್ಯ ಎಸೆಯಬಾರದೆಂದು ಸ್ವಚ್ಛ ಭಾರತ ಸ್ವಚ್ಛ ಗ್ರಾಮ ಹೆಸರಿನಡಿ ಫಲಕ ಅಳವಡಿಸಿದ್ದರೂ ಅದರ ಅಡಿಯಲ್ಲಿಯೇ ಕಸ, ತ್ಯಾಜ್ಯ ಎಸೆದು ಪಂಚಾಯತ್ ಪ್ರಕಟನೆಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ.
ಹಿರ್ಗಾನ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಸೇತುವೆಯ ಇನ್ನೊಂದು ಪಾರ್ಶ್ವದಲ್ಲಿ ರಸ್ತೆಗೆ ತಾಗಿಕೊಂಡೆ ತ್ಯಾಜ್ಯವನ್ನು ಎಸೆಯಲಾಗುತ್ತಿದೆ. ತ್ಯಾಜ್ಯ ಎಸೆಯುವವರ ಪತ್ತೆಗಾಗಿ ಸ್ಥಳದಲ್ಲಿ ಸಿಸಿ ಕೆಮರಾ ಅಳವಡಿಸುವಂತೆ ಗ್ರಾಮಸ್ಥರು ಈಗಾಗಲೇ ಹಲವು ಬಾರಿ ಪಂಚಾಯತ್‌ಗೆ ಮನವಿ ಮಾಡಿದ್ದಾರೆ. ಈ ಪರಿಸರ ದುರ್ಗಂಧದಿಂದ ಕೂಡಿದ್ದು, ಇಲ್ಲಿಂದ ಪ್ರಾಥಮಿಕ ಶಾಲೆ ಕೆಲವೇ ಮೀಟರ್‌ಗಳಷ್ಟು ದೂರದಲ್ಲಿದೆ. ಹಾಗಾಗಿ ಮಕ್ಕಳ ಆರೋಗ್ಯದ ಮೇಲೂ ಇದು ಪರಿಣಾಮ ಬೀರಬಹುದು ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಕಾರ್ಕಳ ತಾಲೂಕಿನಾದ್ಯಂತ ಸ್ವತ್ಛತೆಯ ದೃಷ್ಟಿಯಲ್ಲಿ ಬೃಹತ್ ಆಂದೋಲನವೇ ನಡೆದು ಪ್ರತೀ ಪಂಚಾಯತ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ವಿಲೇವಾರಿ ಮಾಡಲಾಗುತ್ತಿದ್ದು ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯದಂತೆ ಜನಸಾಮಾನ್ಯರಿಗೆ ಮನವರಿಕೆ ಮಾಡಲಾಗಿದೆ. ಆದರೂ ಎಣ್ಣೆಹೊಳೆ ಸೇತುವೆಯ ಇಕ್ಕೆಲಗಳಲ್ಲಿನ ತ್ಯಾಜ್ಯರಾಶಿಗೆ ಮಾತ್ರ ಇನ್ನೂ ಮುಕ್ತಿ ಸಿಕ್ಕಿಲ್ಲ.