Advertisement

ಸುಳ್ಯ: ಹೆದ್ದಾರಿ ಬದಿಯುದ್ದಕ್ಕೂ ತ್ಯಾಜ್ಯ ರಾಶಿ

09:25 AM Apr 19, 2022 | Team Udayavani |

ಸುಳ್ಯ: ಇಲ್ಲಿನ ಹೆದ್ದಾರಿ ಬದಿಯಲ್ಲಿ ಕಣ್ಣು ಹಾಯಿಸಿದಷ್ಟು ದೂರಕ್ಕೂ ಕಾಣುವ ತ್ಯಾಜ್ಯ ರಾಶಿ, ವಾಹನದಲ್ಲಿ ಸಂಚರಿಸುತ್ತಿರುವ ಸಂದರ್ಭದಲ್ಲಿ ಮೂಗು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿಗೆ ಕಾರಣವಾಗಿದೆ.

Advertisement

ಪುತ್ತೂರು-ಸುಳ್ಯ-ಮೈಸೂರು ಹೆದ್ದಾರಿಯ ಹೆಚ್ಚಿನ ಕಡೆಗಳಲ್ಲಿ ಜನರು ತ್ಯಾಜ್ಯವನ್ನು ಚೀಲ, ಗೋಣಿಯಲ್ಲಿ ತುಂಬಿಸಿ ತಂದು ಹೆದ್ದಾರಿ ಬದಿಗೆ ಎಸೆಯುತ್ತಿರುವುದರಿಂದಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನ ಪ್ರಯಾಣಿಕರು ವಿಶ್ರಾಂತಿಗೆ ವಾಹನ ನಿಲ್ಲಿಸಿ ನೀರು ಕುಡಿದ ಬಾಟಲಿಗಳನ್ನೂ ರಸ್ತೆ ಬದಿ ಎಸೆದು ತೆರಳುವುದೂ ಇದಕ್ಕೆ ಒಂದು ಕಾರಣವಾಗಿದೆ.

ಸ್ವಚ್ಛತೆಯ ಪರಿಕಲ್ಪನೆ ಮಾಯ

ರಾಷ್ಟ್ರ ಸ್ವಚ್ಛವಾಗಿಸಲು ಸ್ವಚ್ಛ ಭಾರತ್‌ ಯೋಜನೆ ಮೂಲಕ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದ್ದರೂ ಇಲ್ಲಿ ಆ ಪರಿಕಲ್ಪನೆ ಕಂಡುಬರುತ್ತಿಲ್ಲ. ಹೆದ್ದಾರಿಯ ಇಕ್ಕೆಡೆಗಳಲ್ಲಿ ತ್ಯಾಜ್ಯ ರಾಶಿ, ಪ್ಲಾಸ್ಟಿಕ್‌, ಬಾಟಲಿ, ಕೋಳಿ ತ್ಯಾಜ್ಯ ಸೇರಿದಂತೆ ವಿವಿಧ ಬಗೆಯ ನಿರುಪಯುಕ್ತ ವಸ್ತುಗಳನ್ನು ಎಸೆಯುವ ಸ್ಥಳವಾಗಿ ಹೆದ್ದಾರಿ ಇಂದು ಮಾರ್ಪಡಾಗಿದೆ. ಜೋರಾದ ಗಾಳಿ ಬೀಸಿದಾಗ ಕಸ, ಪ್ಲಾಸ್ಟಿಕ್‌ ತ್ಯಾಜ್ಯ ಚೆಲ್ಲಾಪಿಲ್ಲಿಯಾಗಿ ಹರಡುತ್ತದೆ.

ಅಂದ ಕೆಡೆಸಿದ ತ್ಯಾಜ್ಯ

Advertisement

ಹಚ್ಚ ಹಸುರಿನಿಂದ ಕಂಗೊಳಿಸಬೇಕಾದ ಹೆದ್ದಾರಿ ಬದಿಗಳು ಕೆಲವು ಜನರ ಅನಾಗರಿಕ ವರ್ತನೆಯಿಂದಾಗಿ ಪರಿಸರದ ಅಂದವನ್ನೇ ಕೆಡಿಸಲಾಗಿದೆ. ತ್ಯಾಜ್ಯಗಳು ಜೋರು ಮಳೆಗೆ ಚರಂಡಿಯಲ್ಲಿ ಹರಿದು ನದಿ ಸೇರುವುದರ ಜತೆಗೆ ನದಿಯನ್ನೂ ಕಲುಷಿತ ಮಾಡುವಂತಾಗಿದೆ.

ಸ್ಥಳೀಯಾಡಳಿತಗಳು ತ್ಯಾಜ್ಯವನ್ನು ವಿಲೇವಾರಿ ಮಾಡುವ ಕಾರ್ಯ ನಡೆಸುತ್ತಿದ್ದರೂ ರಸ್ತೆ ಬದಿಗೆ ತ್ಯಾಜ್ಯವನ್ನು ತಂದು ಎಸೆಯುವುದನ್ನು ಕಿಡಿಗೇಡಿಗಳು ನಿಲ್ಲಿಸಿಲ್ಲ. ತ್ಯಾಜ್ಯ ಎಸೆದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಅವರಿಗೆ ದಂಡ ವಿಧಿಸುವ ಅಥವಾ ಕಾನೂನು ಕ್ರಮಕೈಗೊಳ್ಳುವ ಪ್ರಕರಣಗಳು ತಾಲೂಕು ವ್ಯಾಪ್ತಿಯಲ್ಲಿ ನಡೆಯುತ್ತಿದೆ. ಆದರೂ ಕಡಿವಾಣ ಬೀಳುತ್ತಿಲ್ಲ.

ಕಾನೂನು ಕ್ರಮ ಕೈಗೊಳ್ಳಿ

ರಾಜ್ಯ ಹೆದ್ದಾರಿ ಬದಿ ತ್ಯಾಜ್ಯ ತಂದು ಸುರಿಯುವ ಘಟನೆಗಳು ಹೆಚ್ಚುತ್ತಿದ್ದು, ಹೆದ್ದಾರಿ ಬದಿಯಲ್ಲಿ ಇರುವ ತ್ಯಾಜ್ಯಗಳೇ ಇದಕ್ಕೆ ಸಾಕ್ಷಿ. ಇಂತಹ ಕೃತ್ಯ ಎಸಗುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಸ್ಥಳೀಯಾಡಳಿತ ಗಮನ ಹರಿಸಿ ತ್ಯಾಜ್ಯ ತೆರವಿಗೆ ಮುಂದಾಗಬೇಕು. – ಜಿನ್ನಪ್ಪ ಗೌಡ ಪಂಜ, ಸಾಮಾಜಿಕ ಕಾರ್ಯಕರ್ತರು

Advertisement

Udayavani is now on Telegram. Click here to join our channel and stay updated with the latest news.

Next