Advertisement
ಬಿಲ್ಲಂಪದವು ತ್ಯಾಜ್ಯಲಾರಿಗಳಲ್ಲಿ ತಂದು 50-60 ಗೋಣಿಚೀಲಗಳ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವ ಪ್ರಕ್ರಿಯೆ ನಿರಂತರವಾಗಿ ನಾಗರಿಕರನ್ನು ಕಾಡುತ್ತಿದೆ. ಇದೀಗ ಅಳಿಕೆ ಗ್ರಾಮದ ಬಿಲ್ಲಂಪದವು ಗೇರು ನಿಗಮದ ಗುಡ್ಡದಲ್ಲಿ ನೆಗಳಗುಳಿಗೆ ತೆರಳುವ ರಸ್ತೆ ಬದಿಯಲ್ಲೇ ತ್ಯಾಜ್ಯ ತುಂಬಿದ ಗೋಣಿಚೀಲಗಳ ರಾಶಿ ಮಂಗಳವಾರ ಪತ್ತೆಯಾಗಿದೆ.
ಕೇರಳಕ್ಕೆ ಕೋಳಿ ಹಾಗೂ ಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುವ ಲಾರಿಗಳು ವಾಪಸಾಗುವ ಸಂದರ್ಭ ತ್ಯಾಜ್ಯವನ್ನು ತುಂಬಿಕೊಂಡು ಬಂದು ನಿರ್ಜನ ಪ್ರದೇಶದಲ್ಲಿ ಸುರಿಯುತ್ತಿರುವುದು ಕಂಡುಬರುತ್ತದೆ. ಈ ಬಗ್ಗೆ ಗಡಿ ಭಾಗದಲ್ಲಿ ಪ್ರತಿಯೊಬ್ಬರೂ ಗಬ್ಬುನಾತವನ್ನು ಅನುಭವಿಸಿ, ಸುಸ್ತಾಗಿದ್ದಾರೆ. ಇದೀಗ ಅಳಿಕೆ ಗ್ರಾಮದ ಕುದ್ದುಪದವು – ಪೆರುವಾಯಿ ರಸ್ತೆಯ ಬಿಲ್ಲಂಪದವು ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ತ್ಯಾಜ್ಯ ತುಂಬಿದ ಗೋಣಿ ಚೀಲವನ್ನು ರಾಶಿ ಹಾಕಿ ತೆರಳಿದ್ದಾರೆ. ಈ ತ್ಯಾಜ್ಯವನ್ನು ಸುರಿದವರಿಂದಲೇ ತೆಗೆಸಬೇಕೆಂದು ಗ್ರಾಮಸ್ಥರು ಅಳಿಕೆ ಗ್ರಾ.ಪಂ. ಅನ್ನು ಆಗ್ರಹಿಸಿ, ದೂರು ನೀಡಿದ್ದಾರೆ. ತಿಂಗಳ ಅವಧಿಯಲ್ಲಿ ಮೂರು ರಾಶಿ
ಜೂನ್ ತಿಂಗಳಲ್ಲಿ ಬೆರಿಪದವು – ಬಾಳೆಕೋಡಿ -ಕನ್ಯಾನ ರಸ್ತೆಯ ಶಾಂತಿಮೂಲೆ ಎಂಬಲ್ಲಿ ರಸ್ತೆ ಬದಿಯಲ್ಲಿ ತ್ಯಾಜ್ಯ ತುಂಬಿದ ಗೋಣಿ ಚೀಲಗಳನ್ನು ಎಸೆದು ಹೋಗಿದ್ದರು. ಜು. 3ಕ್ಕೆ ತೋರಣಕಟ್ಟೆ – ಕುದ್ದುಪದವು ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಒಂದು ಲೋಡಿನಷ್ಟು ಕೋಳಿ ತ್ಯಾಜ್ಯ ಪತ್ತೆಯಾಗಿತ್ತು. ಈಗ ಮತ್ತೆ ಬಿಲ್ಲಂಪದವು ಪರಿಸರದಲ್ಲಿ ಗೋಣಿಯಲ್ಲಿ ತುಂಬಿದ ತ್ಯಾಜ್ಯ ಪತ್ತೆಯಾಗಿದೆ. ತಿಂಗಳ ಅವಧಿಯಲ್ಲಿ ಮೂರು ಕಡೆಗಳಲ್ಲಿ ಈ ರೀತಿಯ ಪ್ರಕರಣ ನಡೆಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಕೇರಳಕ್ಕೆ ಹೋಗುವ ಅಕ್ರಮ ಕೋಳಿ ಲಾರಿಗಳನ್ನು ರಸ್ತೆಯಲ್ಲೇ ನಿಲ್ಲಿಸಿ ಪ್ರತಿಭಟಿಸುವ ಎಚ್ಚರಿಕೆಯನ್ನು ಸಾರ್ವಜನಿಕರು ನೀಡಿದ್ದಾರೆ. ಇಂತಹ ಘಟನೆಗಳು ಮರುಕಳಿಸಿದಲ್ಲಿ ಸ್ಥಳೀಯ ಮಾಂಸದ ಅಂಗಡಿಗಳನ್ನೇ ಮುಚ್ಚಿಸುವ ಮೂಲಕ ತೀವ್ರ ರೀತಿಯ ಪ್ರತಿಭಟನೆಯನ್ನು ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
Related Articles
ಸ್ಥಳೀಯ ನಿವಾಸಿಗಳ ದೂರಿಗೆ ಸ್ಪಂದಿಸಿದ ಅಳಿಕೆ ಗ್ರಾ.ಪಂ., ಅಕ್ರಮವಾಗಿ ಎಲ್ಲೆಂದರಲ್ಲಿ ತ್ಯಾಜ್ಯ ಎಸೆಯುವವರನ್ನು ಪತ್ತೆ ಮಾಡಿ ಸೂಕ್ತ ರೀತಿಯಲ್ಲಿ ಶಿಕ್ಷಿಸಬೇಕೆಂದು ಆಗ್ರಹಿಸಿ ವಿಟ್ಲ ಠಾಣೆಗೆ ದೂರು ನೀಡಿದೆ.
Advertisement
ಅಲ್ಲಲ್ಲಿ ಎಚ್ಚರಿಕೆ ನಾಮಫಲಕಸುತ್ತಮುತ್ತಲ ಎಲ್ಲ ಗ್ರಾ.ಪಂ.ಗಳು ಗ್ರಾಮಸ್ಥರ ಆಗ್ರಹಕ್ಕೆ ಒಳಪಟ್ಟು ಎಲ್ಲೆಂದರಲ್ಲಿ ಸುರಿಯುವ ತ್ಯಾಜ್ಯದ ವಿರುದ್ಧ ಕ್ರಮ ಕೈಗೊಳ್ಳಲಾಗದೇ ಅಲ್ಲೆಲ್ಲ ನಾಮಫಲಕ ಅಳವಡಿಸಿ, ಕೈತೊಳೆದುಕೊಂಡಿವೆ. ಪೊಲೀಸರೂ ಈ ಬಗ್ಗೆ ಕ್ರಮ ಕೈಗೊಂಡು, ಯಾವುದೇ ಲಾರಿಗಳನ್ನಾಗಲೀ ಅಪರಾಧಿಗಳನ್ನಾಗಲೀ ಪತ್ತೆ ಹಚ್ಚಿ, ಬಂಧಿಸಿದ ಉದಾಹರಣೆಗಳೇ ಇಲ್ಲ. ಈ ಬಗ್ಗೆ ಕಠಿನ ಕ್ರಮ ಕೈಗೊಳ್ಳದೇ ಇದ್ದಲ್ಲಿ ಈ ಕಾಟ ತಪ್ಪುವ ಯಾವ ಲಕ್ಷಣಗಳೂ ಇಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ.