ಬೆಳ್ಮಣ್: ನಂದಳಿಕೆ ಗ್ರಾ.ಪಂ.ನ ಎಸ್‌ಎಲ್‌ಆರ್‌ಎಂ ಘಟಕದ ಟೆಂಪೋ ಚಾಲಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಯಶೋದಾ ಕಾರ್ಕಳ ತಾಲೂಕಿನಲ್ಲಿಯೇ ಏಕೈಕ ಮಹಿಳಾ ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನಂದಳಿಕೆ ಗ್ರಾ.ಪಂ. ವ್ಯಾಪ್ತಿಯಲ್ಲಿ 1276 ಮನೆಗಳಿದ್ದು ಈ ಪೈಕಿ 1265 ಮನೆಗಳ ಕಸ ನಿರ್ವಹಣೆ ಇಲ್ಲಿನ ಎಸ್ ಎಲ್‌ಆರ್‌ಎಂ ಘಟಕದಿಂದ ಕಳೆದ 5 ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದೆ. ನಂದಳಿಕೆಯ ಬಳಿ ಸಂಗ್ರಹಿಸಿ ಬಳಿಕ ನಿಟ್ಟೆಯ ಘಟಕ್ಕೆ ಕಳುಹಿಸಲಾಗುತ್ತಿದೆ. ಸ್ವತ್ಛ ಭಾರತ ಪರಿಕಲ್ಪನೆ ಉತ್ತಮವಾಗಿ ಅಳವಡಿಕೆಯಾಗುತ್ತಿದೆ. ಇಲ್ಲಿನ ಕಸ ನಿರ್ವಹಣೆಯ ಸ್ವತ್ಛ ವಾಹಿನಿ ಟೆಂಪೋ ಚಾಲಿಕಯಾಗಿ ಪ್ರತಿಮಾ ಕಳೆದ 6 ತಿಂಗಳುಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮಹಿಳಾ ಚಾಲಕರೇ ಈ ಘಟಕದಲ್ಲಿ ಕರ್ತವ್ಯ ನಿರ್ವಹಿಸಬೇಕು ಎನ್ನುವ ಆದೇಶ ಇಲಾಖೆಯಿಂದ ಈ ಹಿಂದಿನಿಂದಲೇ ಜಾರಿಯಾಗಿದ್ದು ಈಗ ಉಳಿದ ಪಂಚಾಯತ್‌ಗಳ ಘಟಕಗಳಲ್ಲಿ ಇತರ ಮಹಿಳೆಯರು ಚಾಲನಾ ತರಬೇತಿ ಪಡೆಯುತ್ತಿದ್ದಾರೆ. ಸ್ವಸಹಾಯ ಗುಂಪುಗಳ ಮೂಲಕ ಈ ಕಸ ನಿರ್ವಹಣೆಯ ಸಿಬಂದಿ ವ್ಯವಸ್ಥೆ ನಡೆಯುತ್ತಿದ್ದು ಯಶೋದಾ ಈ ಹಿಂದೆಯೇ ಚಾಲನಾ ತರಬೇತಿ ಹೊಂದಿದ್ದರು. ಒಣ ಕಸ ಮಾತ್ರ ಈಗಾಗಲೇ ನಂದಳಿಕೆ ಪಂ.ವ್ಯಾಪ್ತಿಯಲ್ಲಿ ಒಣ ಕಸ ಮಾತ್ರ ನಿರ್ವಹಣೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಪಂಚಾಯತ್ ಸ್ವಂತ ತ್ಯಾಜ್ಯ ವಿಲೇವಾರಿ ಘಟಕ ಪ್ರಾರಂಭಗೊಂಡರೆ ಹಸಿ ಕಸ ನಿರ್ವಹಣೆಯೂ ಸಾಧ್ಯ ಎಂದು ನಂದಳಿಕೆಯ ಘಟಕದ ಮೇಲ್ವಿಚಾರಕಿ ಪ್ರತಿಮಾ ತಿಳಿಸಿದ್ದಾರೆ.
ಜಿ.ಪಂ. ಈ ಯೋಜನೆಯ ಕಾರಣದಿಂದ ಈ ಕಸ ಸಂಗ್ರಹದಿಂದ ಸುಮಾರು 13,000 ರೂ. ಸಂಗ್ರಹವಾಗುತ್ತಿದ್ದು ಸಿಬಂದಿ ವೇತನ ಪಂಚಾಯತ್ ವತಿಯಿಂದ ಪಾವತಿಯಾಗುತ್ತಿದೆ ಎಂದು ಯಶೋದಾ ಹೇಳುತ್ತಾರೆ. ಪ್ರಸ್ತುತ ವಾರದ ಮೂರು ದಿನಗಳಲ್ಲಿ ಸಾವಿರಕ್ಕೂ ಮಿಕ್ಕಿ ಮನೆ ಮನೆಗಳಿಂದ ಹಾಗೂ 125 ಅಂಗಡಿಗಳಿಂದ ಕಸ ಸಂಗ್ರಹವಾಗುತ್ತಿದ್ದು ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಸಹಾಯಕಿ ಅಶ್ವಿತಾ ತಿಳಿಸುತ್ತಾರೆ.
ಯಾವುದೆ ಅಳುಕಿಲ್ಲದೆ ನಂದಳಿಕೆಯ ಮುಖ್ಯ ರಾಜ್ಯ ಹೆದ್ದಾರಿ ಸಹಿತ ವಿವಿಧೆಡೆ ಚಾಲನೆ ನಡೆಸುವ ಯಶೋದಾ ಹಾಗೂ ಇತರ ಮಹಿಳೆಯದ ಈ ಸಾಧನೆ ಸಾರ್ವಜನಿಕರ ಶ್ಲಾಘನೆಗೆ ಪಾತ್ರವಾಗಿದೆ.
ಪವಿತ್ರ ಕೆಲಸ
ಕಳೆದ 6 ತಿಂಗಳ ಹಿಂದೆ ಚಾಲನಾ ತರಬೇತಿ ಪಡೆದಿದ್ದೆ. ಈ ಕೆಲಸಕ್ಕೆ ಪೂರಕವಾಯಿತು. ಕಸ ನಿರ್ವಹಣೆ ಅತ್ಯಂತ ಪವಿತ್ರ ಕೆಲಸ ಹಾಗೂ ಕರ್ತವ್ಯ ಎಂದು ನಂಬಿದ್ದೇನೆ.
– ಯಶೋದಾ , ಚಾಲಕಿ
ಗುರಿ ಮೀರಿದ ಸಾಧನೆ
ನಂದಳಿಕೆ ಗ್ರಾ.ಪಂ. ಸ್ವತ್ಛತೆಗೆ ಪ್ರಮುಖ ಆದ್ಯತೆ ನೀಡಿದೆ. ಅದರಲ್ಲೂ ಕಸ ನಿರ್ವಹಣೆ ಗುರಿ ಮೀರಿದ ಸಾಧನೆ ತೋರುತ್ತಿದೆ.
– ನಿತ್ಯಾನಂದ ಅಮೀನ್, ನಂದಳಿಕೆ ಗ್ರಾ.ಪಂ. ಅಧ್ಯಕ್ಷ