Advertisement
ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಈ ನಿಯಮ ಜಾರಿಯಲ್ಲಿತ್ತಾದರೂ ಈವರೆಗೆ ಸಮರ್ಪಕವಾಗಿ ಅನುಷ್ಠಾನಕ್ಕೆ ಬಂದಿಲ್ಲ. ಪಚ್ಚನಾಡಿ ತ್ಯಾಜ್ಯ ದುರಂತದ ಬಳಿಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟು ನಿಟ್ಟಿನ ಸೂಚನೆ ನೀಡಿದ್ದು, ಈ ನಿಯಮ ಪಾಲನೆ ಮಾಡಲಾಗುತ್ತಿದೆಯೇ ಎಂಬುದರ ಬಗ್ಗೆ ನಿಗಾ ಇರಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ತ್ಯಾಜ್ಯ ವಿಂಗಡಣೆ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಪಾಲಿಕೆ ತೀರ್ಮಾನಿಸಿದೆ.
Related Articles
Advertisement
ಮಾಸ್ಕ್, ಗ್ಲೌಸ್, ಫೇಸ್‌ಶೀಲ್ಡ್, ಪಿಪಿಇ ಕಿಟ್ ಇನ್ನಿತರ ಕೋವಿಡ್ ಸಂಬಂಧಿತ ಬಯೋಮೆಡಿಕಲ್ ತ್ಯಾಜ್ಯವನ್ನು ಬೇರ್ಪಡಿಸಿ ಹಳದಿ ಬಣ್ಣದ ಎರಡು ಚದರ ಇರುವ ಚೀಲದಲ್ಲಿ ತುಂಬಿಸಿ ವಿಲೇವಾರಿ ಮಾಡಬೇಕು. ಚೀಲದ ಮೇಲೆ “ಕೋವಿಡ್ ತ್ಯಾಜ್ಯ’ ಎಂದು ಕಡ್ಡಾಯವಾಗಿ ಬರೆದಿರಬೇಕು. ಕೋವಿಡ್ ತ್ಯಾಜ್ಯವನ್ನು ಬರೀ ಕೈಯಿಂದ ಮುಟ್ಟಬಾರದು. ಇತರ ಕಸದ ಜತೆ ಬೆರೆಸಬಾರದು. ಕೋವಿಡ್ ತ್ಯಾಜ್ಯವನ್ನು 48 ಗಂಟೆಗೂ ಅಧಿಕ ಕಾಲ ಸಂಗ್ರಹಿಸಿಡಬಾರದು. ವಿಲೇವಾರಿ ಮಾಡಲು ತಡವಾದಲ್ಲಿ ಚೀಲದ ಮೇಲೆ ಶೇ.1ರಷ್ಟು ಸೋಡಿಯಂ ಹೈಪೋ ಕ್ಲೋರೈಡ್ ದ್ರಾವಣವನ್ನು ಸಿಂಪಡಿಸಬೇಕು. ಕೋವಿಡ್ ಅಲ್ಲದ ವ್ಯಕ್ತಿಗಳು ಬಳಸಿದ ಮಾಸ್ಕ್ಗಳನ್ನು ಕತ್ತರಿಸಿ, ಪೇಪರ್ ಕವರ್‌ನಲ್ಲಿ ಸಂಗ್ರಹಿಸಿ 72 ಗಂಟೆಗಳ ಅನಂತರ ಪ್ರತ್ಯೇಕವಾಗಿ ವಿಲೇವಾರಿ ಮಾಡಬೇಕು.
ರಸ್ತೆ ಬದಿ ಕಸ ಎಸೆದರೆ 10,000 ರೂ. ದಂಡ ! :
“ಇತ್ತೀಚಿನ ದಿನಗಳಲ್ಲಿ ನಗರದ ರಸ್ತೆ ಬದಿಗಳಲ್ಲಿ ಕಸ ಎಸೆದಿರುವುದು ಕಾಣುವುದು ಸಾಮಾನ್ಯವಾಗಿದೆ. ಈ ನಿಟ್ಟಿನಲ್ಲಿ ಮನಪಾ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು, ದುಬಾರಿ ದಂಡ ಪ್ರಯೋಗಕ್ಕೆ ಮುಂದಾಗಿದೆ. ಒಂದು ವೇಳೆ ಸಾರ್ವಜನಿಕರು ರಸ್ತೆ ಬದಿಗಳಲ್ಲಿ ಕಸ ಎಸೆಯುವುದು/ಹಾಕುವುದು ಕಂಡುಬಂದಲ್ಲಿ ಅವರ ಮೇಲೆ 10,000 ರೂ.ಗಳ ವರೆಗೆ ಭಾರೀ ದಂಡ ವಿಧಿಸ ಲಾಗುವುದು. ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಅವರು ತಿಳಿಸಿದ್ದಾರೆ.
ಮನಪಾ ವ್ಯಾಪ್ತಿಯ ಮನೆಗಳು, ವಸತಿ ಸಮುಚ್ಚಯಗಳಿಂದ ಉತ್ಪತ್ತಿಯಾಗುವ ತಾಜ್ಯಗಳನ್ನು ಮೂಲದಲ್ಲಿಯೇ ಹಸಿ, ಒಣ ಕಸವನ್ನಾಗಿ ವಿಂಗಡಿಸಿ ವೈಜ್ಞಾನಿಕವಾಗಿ ವಿಲೇವಾರಿಗೊಳಿಸುವುದು ಕಡ್ಡಾಯ. ಈ ಕುರಿತಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೂಡ ನಿಗಾ ಇರಿಸಿದೆ. ಬೇರ್ಪಡಿಸದಿರುವ ಕಸವನ್ನು ಸಂಗ್ರಹಿಸದೆ ತಿರಸ್ಕರಿಸಲು ತೀರ್ಮಾನಿಸಲಾಗಿದೆ. ಪ್ರತೀ ಶುಕ್ರವಾರ ಒಣ, ಉಳಿದ ಎಲ್ಲ ದಿನಗಳಲ್ಲಿ ಹಸಿ ಕಸವನ್ನು ತ್ಯಾಜ್ಯ ಸಂಗ್ರಹಿಸುವ ವಾಹನಕ್ಕೆ ನೀಡಬೇಕು. ನಿಯಮ ಉಲ್ಲಂಘಿಸಿದ್ದಲ್ಲಿ ದಂಡ ವಿಧಿಸಲಾಗುವುದು. – ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್
-ನವೀನ್ ಭಟ್ ಇಳಂತಿಲ