Advertisement

ತ್ಯಾಜ್ಯ ವ್ಯಾಜ್ಯ ಮುಕ್ತಿಗೆ ಕಸ ಮಂಡಳಿ?

12:47 AM Mar 05, 2020 | Lakshmi GovindaRaj |

ಬೆಂಗಳೂರು: ನಗರದ ಕಸ ವಿಲೇವಾರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮಧ್ಯ ಪ್ರವೇಶಿಸಿದ್ದು, ಪ್ರತ್ಯೇಕ “ಕಸ ಮಂಡಳಿ’ ರಚಿಸುವ ಚಿಂತನೆ ನಡೆಸಿದೆ. ಪ್ರತ್ಯೇಕ ಮಂಡಳಿ ರಚನೆ ಚಿಂತನೆ ಇರುವ ಬಗ್ಗೆ ಪಾಲಿಕೆ ಮತ್ತು ನಗರಾಭಿವೃದ್ಧಿ ಇಲಾಖೆಯ ಉನ್ನತ ಮೂಲಗಳು “ಉದಯವಾಣಿ’ಗೆ ಖಚಿತಪಡಿಸಿವೆ.

Advertisement

ಕಸ ಲೇವಾರಿ ಹಾಗೂ ಸರ್ಮಪಕ ನಿರ್ವಹಣೆ ಮಾಡುವಲ್ಲಿ ನಿರಂತರವಾಗಿ ವಿಫ‌ಲವಾಗುತ್ತಿರುವ ಪಾಲಿಕೆ ಬಗ್ಗೆ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಾಲಿಕೆಯನ್ನು “ಸೂಪರ್‌ ಸೀಡ್‌’ ಮಾಡುವಂತೆಯೂ ನಿರ್ದೇಶಿಸಿತ್ತು. ಅಲ್ಲದೆ, ರಾಜ್ಯದ ಉಳಿದ ಎಲ್ಲ ಮಹಾನಗರ ಪಾಲಿಕೆಗಳಿಗಿಂತ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರತಿ ವರ್ಷವೂ ಪಾಲಿಕೆ ಹೊಸ ಕ್ವಾರಿಗಳನ್ನು ಅನ್ವೇಷಣೆ ಮಾಡುವುದನ್ನು ಬಿಟ್ಟರೆ, ಕಸ ವಿಂಗಡಣೆ ಪ್ರಮಾಣದಲ್ಲಿ ಏರಿಕೆಯಾಗುತ್ತಿಲ್ಲ. ಹೀಗಾಗಿ, ಸರ್ಕಾರ ಪ್ರತ್ಯೇಕ ಮಂಡಳಿ ರಚನೆಗೆ ಮುಂದಾಗಿದೆ.

ಕಗ್ಗಂಟ್ಟಾಗುತ್ತಲ್ಲೇ ಇದೆ ಕಸದ ಸಮಸ್ಯೆ: ಕಸದ ಸಮಸ್ಯೆಗೆ ಪರಿಹಾರಕ್ಕೆ ಪಾಲಿಕೆ ಇಲ್ಲಿಯವರೆಗೆ ರೂಪಿಸಿರುವ ಯಾವ ನಿಯಮವೂ ಯಶಸ್ವಿಯಾಗಿಲ್ಲ. ಇನ್ನು ಕೆಲವು ಯೋಜನೆಗಳು ಉದ್ದೇಶಪೂರ್ವಕವಾಗಿ ತಡೆಹಿಡಿಯ ಲಾಗಿದೆ. ಹೊಸ ಯೋಜನೆಗಳು ಅನುಷ್ಠಾನ ಮಾಡು ವಲ್ಲಿ ಪಾಲಿಕೆ ಎಡವಿದೆ. ಹೊಸ ಯೋಜನೆಗಳಿಗೆ ಪಾಲಿಕೆಯ ಸದಸ್ಯರು, ಸಮಿತಿಗಳು, ಮೇಯರ್‌ ಹಾಗೂ ಆಯುಕ್ತರು ಎಲ್ಲರೂ ಒಂದು ನಿರ್ಧಾರಕ್ಕೆ ಬರುತ್ತಿಲ್ಲ. ಕಸದ ವಿಚಾರದಲ್ಲಿ ಯ ಥಾ  ಸ್ಥಿತಿ, ಅಧೋಗತಿ ಎಂಬ ಪರಿಸ್ಥಿತಿಗೆ ಪಾಲಿಕೆ ಬಂ ದು ತಲುಪಿದೆ! ಹೀಗಾಗಿ,”ಕಸದ ಸಮಸ್ಯೆ’ಗೆ ಪ್ರತ್ಯೇಕ ಮಂಡಳಿ ರಚನೆ ಮಾಡುವುದೇ ಸದ್ಯಕ್ಕೆ ಇರುವ ಮದ್ದು ಎಂದು ಅಧಿಕಾರಿಗಳು ಸರ್ಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.

ಮಂಡಳಿ ಪ್ರಸ್ತಾವನೆ ಏಕೆ?: ನಗರದಲ್ಲಿ ಈಗಾಗಲೇ ಜಲಮಂಡಳಿ,ಬಿಡಿಎ, ಬಿಎಂಟಿಸಿ ಸೇರಿದಂತೆ ವಿವಿಧ ಮಂಡಳಿಗಳು ಯಾವುದೇ ತೊಡಕಿಲ್ಲದೆ ಕಾರ್ಯನಿರ್ವಹಿಸುತ್ತಿವೆ. ಆಯಾ ಮಂಡಳಿಯಲ್ಲಿ ಆಡಳಿತಾತ್ಮಕ ಸಮಸ್ಯೆಗಳು ಇವೆಯಾದರೂ,ಪರಿಹಾರಕ್ಕೆ ಮಂಡಳಿಗಳು ತಮ್ಮದೇ ಆದ ಯೋಜನೆಗಳನ್ನು ರೂಪಿಸಿಕೊಂಡಿವೆ. ಕಸ ವಿಲೇವಾರಿ ಸಮಸ್ಯೆಯನ್ನು ಈ ರೀತಿ ಪ್ರತ್ಯೇಕ ಮಂಡಳಿ ಮಾಡುವ ಮೂಲಕ ಚೌಕಟ್ಟಿಗೆ ತರುವ ಚಿಂತನೆಯಲ್ಲಿ ಸರ್ಕಾರವಿದೆ.

ಸಮನ್ವಯ ಕೊರತೆಯಾಗುವ ಸಾಧ್ಯತೆ: ಜಲಮಂಡಳಿ ಸೇರಿದಂತೆ ವಿವಿಧ ಇಲಾಖೆಗಳು ಪಾಲಿಕೆಯೊಂದಿಗೆ ಸಮನ್ವಯತೆ ಸಾಧಿಸುತ್ತಿಲ್ಲ ಎಂಬ ಆರೋಪವಿದೆ. ಈ ಮಧ್ಯೆ ಕಸಕ್ಕೂ ಒಂದು ಮಂಡಳಿ ರಚನೆಯಾದರೆ ಅದರ ನಿರ್ವಹಣೆ ಯಾರು ಮಾಡುತ್ತಾರೆ ಎನ್ನುವ ಪ್ರಶ್ನೆಯೂ ಉದ್ಭವವಾಗುತ್ತದೆ. ಒಂದೊಮ್ಮೆ ಈ ಮಂಡಳಿಯ ಜತೆಯೂ ಪಾಲಿಕೆಗೆ ಸಮನ್ವಯತೆ ಸಾಧ್ಯವಾಗದೆ ಇದ್ದರೆ, ಮಂಡಳಿ ಪರಿಹಾರ ಸೂತ್ರವಾಗುವ ಬದಲು ಮತ್ತೂಂದು ಸಮಸ್ಯೆಯಾಗಿ ಬದಲಾಗಲಿದೆ.

Advertisement

ವರ್ಷಗಳಿಂದ ಚರ್ಚೆ ನಡೆಯುತ್ತಿದೆ!: ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು “ಪ್ರತ್ಯೇಕ ಮಂಡಳಿ’ ರಚನೆ ಮಾಡುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕಳೆದ ಒಂದು ವರ್ಷದಿಂದಲೂ ನಿರಂತರವಾಗಿ ಚರ್ಚೆ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕರಡುಗಳ ಪರಿಷ್ಕರಣೆಯೂ ನಡೆದಿವೆ ಎಂದು ಮೂಲಗಳು ತಿಳಿಸಿವೆ.

ಕಸ ನಿರ್ವಹಣೆಯಲ್ಲಿ ಆಗಿರುವ ಲೋಪಗಳು
-ಕಸದ ವಿಷಯದ ಬಗ್ಗೆ ಪರಿಣಿತರ ಕೊರತೆ ಇದೆ.

-ಮೂಲದಲ್ಲೇ ಕಸ ವಿಂಗಡಣೆ ಮಾಡುವುದಕ್ಕೆ ಆದ್ಯತೆ ನೀಡುತ್ತಿಲ್ಲ.

-ಹಸಿಕಸ ಸಂಸ್ಕರಣಾ ಘಟಕಗಳ ಸಾರ್ಮಥ್ಯಕ್ಕೆ ಅನುಗುಣವಾಗಿ ಹಸಿಕಸ ಪೂರೈಕೆಯಾಗುತ್ತಿಲ್ಲ.

“ಕಸ’ಯೋಜನೆ ಅನುಷ್ಠಾನದಲ್ಲಿ ಆಗುತ್ತಿರುವ ಸಮಸ್ಯೆ ಏನು?
-ಗುತ್ತಿಗೆದಾರರು ಅಧಿಕಾರಿಗಳ ಮಾತು ಕೇಳುತ್ತಿಲ್ಲ. ವಾರ್ಡ್‌ ಮಟ್ಟದಲ್ಲಿನ ಗುತ್ತಿಗೆದಾರರು ಕಸ ನಿರ್ವಹಣೆ ಮಾಡುತ್ತಿದ್ದು, ಪಾಲಿಕೆ ಸದಸ್ಯರ ಮಾತು ಕೇಳುತ್ತಾರೆ!

-ಮೇಯರ್‌ ಬದಲಾದಂತೆ ಮಾದರಿ ಯೋಜನೆಗಳು ಬದಲಾಗುತ್ತಿವೆ. ಮಾದರಿ ಯೋಜನೆಗಳಿಂದ ಸಮಸ್ಯೆಗೆ ಪರಿಹಾರವಾಗುತ್ತಿಲ್ಲ.

-ಸಾರ್ವಜನಿಕರ ಹಣ ದುಂದು ವೆಚ್ಚವಾಗುತ್ತಿದೆ. ವಿವಿಧ ವಿಭಾಗಗಳಿಗೆ ಕಡತ ಹೋದ ಮೇಲೆ ಯೋಜನೆ ಅಂತಿಮವಾಗುತ್ತಿದೆ. ಇದು ದೀರ್ಘ‌ಪ್ರಕ್ರಿಯೆ.

ನಗರದ ಕಸ ಸಮಸ್ಯೆ ಸರ್ಕಾರದ ಚಿಂತನೆ ನಡೆಸಲಿ, ಅದು ದೀರ್ಘಾವಧಿಯಲ್ಲಿ ಅನುಷ್ಠಾನ ವಾಗಬಹುದು. ಸದ್ಯ ಇರುವ ಸಮಸ್ಯೆಗೆ ಏನು ಯೋಜನೆ ರೂಪಿಸಿಕೊಳ್ಳಲಾಗಿದೆ?, ಮಿಶ್ರಕಸ ತಡೆಗೆ ಏನು ಮಾಡುತ್ತಿದ್ದಾರೆ?
-ಅಬ್ದುಲ್‌ವಾಜಿದ್‌, ಪ್ರತಿಪಕ್ಷದ ನಾಯಕ

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next