ಮಹಾನಗರ: ತ್ಯಾಜ್ಯ ಸಂಗ್ರಹದ ವಾಹನ ಚಾಲಕರು, ಕಾರ್ಮಿಕರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯವ್ಯಾಪಿ ನಡೆಸುತ್ತಿರುವ ಮುಷ್ಕರ ರವಿವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಮಂಗಳೂರು ನಗರಾದ್ಯಂತ ತ್ಯಾಜ್ಯ ಸಾಗಾಟ, ನಿರ್ವಹಣೆ ಮೂರೂ ದಿನಗಳಿಂದ ಸಂಪೂರ್ಣ ಸ್ಥಗಿತವಾಗಿದ್ದು, ಸೋಮವಾರವೂ ಇದೇ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ.
ನಗರದ ಮನೆ, ಫ್ಲ್ಯಾಟ್‌ಗಳೆದುರು ಹಸಿ ಹಾಗೂ ಒಣ ತ್ಯಾಜ್ಯ ರಾಶಿಯೇ ಸಂಗ್ರಹವಾಗಿದ್ದು, ಮಳೆ ನೀರು ಹಸಿ ಕಸದ ಜತೆ ಸೇರಿ ನಗರದ ಕೆಲವು ಭಾಗದಲ್ಲಿ ಗಬ್ಬು ನಾರುತ್ತಿದೆ. ಮಳೆಯೂ ಬರುತ್ತಿರುವುದರಿಂದ ಕಸದ ರಾಶಿ ಮನೆಗಳು, ಫ್ಲ್ಯಾಟ್‌ಗಳ ಎದುರಿನ ಕಸದ ತೊಟ್ಟಿಯಲ್ಲಿ ತುಂಬಿ ತುಳುಕುತ್ತಿದ್ದು, ನೀರು ಸೇರಿ ನೊಣಗಳ ತಾಣವಾಗುತ್ತಿದೆ.
ಹಸಿಕಸದ ಜತೆಗೆ ಒಣ ಕಸವೂ ರಾಶಿಯಾಗಿ ಮನೆ, ಫ್ಲ್ಯಾಟ್‌ಗಳೆದುರು, ಮತ್ತೆ ಕೆಲವೆಡೆ ರಸ್ತೆಗಳಲ್ಲಿಯೇ ಕಸದ ರಾಶಿ ಕಂಡು ಬರುತ್ತಿದೆ. ಕೆಲವರು ರಸ್ತೆ ಬದಿ ನಿಲ್ಲಿಸಿರುವ ತ್ಯಾಜ್ಯದ ಲಾರಿಗೆ ತ್ಯಾಜ್ಯ ಎಸೆಯುತ್ತಿದ್ದಾರೆ. ಇನ್ನೂ ಕೆಲವರು ರಸ್ತೆ ಬದಿಯಲ್ಲೇ ತ್ಯಾಜ್ಯ ಎಸೆದು ಹೋಗುತ್ತಿದ್ದು, ನಗರದಲ್ಲಿ ದುರುವಾಸನೆ ತುಂಬಿದೆ.
ಒಳಚರಂಡಿ (ಯು.ಜಿ.ಡಿ.) ನೇರ ಪಾವತಿ ಪೌರ ಕಾರ್ಮಿಕರು, ಹೆಚ್ಚುವರಿ ಪೌರ ಕಾರ್ಮಿಕರು ಮತ್ತು ಮನೆ ಕಸ ಸಂಗ್ರಹ, ಕಸ ಸಾಗಾಣಿಕೆ ಮಾಡುವ ವಾಹನ ಚಾಲಕರು, ಲೋಡರ್, ಸಹಾಯಕರು ಹಾಗೂ ಪೌರಕಾರ್ಮಿಕರ ಮೇಲ್ವಿಚಾರಕರು ಮತ್ತು ಎಲ್ಲ ಸ್ವತ್ಛತ ಕಾರ್ಮಿಕರನ್ನು ಏಕಕಾಲಕ್ಕೆ ಖಾಯಂಗೊಳಿಸಲು ಇದರ ಜತೆಯಲ್ಲಿ ವಿವಿಧ ಸ್ಥಳೀಯ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅನಿರ್ದಿಷ್ಟ ಕಾಲ ರಾಜ್ಯಾದ್ಯಂತ ಮುಷ್ಕರ ಹಮ್ಮಿ ಕೊಂಡಿದ್ದಾರೆ. ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕಾರ್ಮಿಕರು ರವಿವಾರವೂ ಪ್ರತಿಭಟನೆ ನಡೆಸಿದರು.
“ಸರಕಾರದಿಂದ ಲಿಖೀತ ಭರವಸೆ ದೊರೆತ ಬಳಿಕ ಮುಷ್ಕರ ಕೈಬಿಡಲಾಗುವುದು. ಸೋಮವಾರ ಮಧ್ಯಾಹ್ನ ವೇಳೆಗೆ ಲಿಖೀತ ಪತ್ರ ದೊರೆಯುವ ನಿರೀಕ್ಷೆ ಇದೆ. ಸಿಕ್ಕಿದ ಬಳಿಕ ತ್ಯಾಜ್ಯ ಸಾಗಾಟ ಮರು ಆರಂಭಿಸಲಾಗುವುದು’ ಎಂದು ಮಂಗಳೂರು ಸಫಾಯಿ ಕರ್ಮಚಾರಿ ಸಂಘದ ಅಧ್ಯಕ್ಷ ನಾರಾಯಣ ಶೆಟ್ಟಿ “ಸುದಿನ’ಕ್ಕೆ ತಿಳಿಸಿದ್ದಾರೆ.
ಫಲಪ್ರದವಾಗದ ತ್ಯಾಜ್ಯ ಸಾಗಾಟ ಪ್ರಯತ್ನ ತ್ಯಾಜ್ಯ ಸಾಗಾಟ ಮಾಡುವ ಕಾರ್ಮಿಕರು ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಪಾಲಿಕೆ ವತಿಯಿಂದಲೇ ಕೆಲವು ಕಡೆ ತ್ಯಾಜ್ಯ ಸಾಗಾಟದ ಪ್ರಯತ್ನ ನಡೆಯಿತಾದರೂ ಅದು ಫಲಪ್ರದವಾಗಿಲ್ಲ. ಒಂದೆರಡು ಕಡೆಯಲ್ಲಿ ತ್ಯಾಜ್ಯ ಸಾಗಾಟ ಮಾಡುವ ವಾಹನಗಳನ್ನು ಕಾರ್ಮಿಕರು ತಡೆದು ಪ್ರತಿಭಟನೆ ನಡೆಸಿದ ಘಟನೆಯೂ ರವಿವಾರ ನಡೆಯಿತು.