Advertisement

Bangalore University: ಕಸ ಎಸೆಯುವ ಸ್ಥಳವಾದ ಬೆಂ.ವಿವಿ ಕ್ಯಾಂಪಸ್‌!

09:49 AM Oct 15, 2024 | Team Udayavani |

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ನ್ಯಾಕ್‌ ಎ++ ಪಡೆದಿರುವ ಬೆಂಗಳೂರು ವಿವಿಯ ಜ್ಞಾನಭಾರತಿ ಕ್ಯಾಂಪಸ್‌ನಲ್ಲಿ ಸಾರ್ವಜನಿಕರು ಬಿಸಾಡುವ ಕಸ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇದನ್ನು ತಡೆಯಲು ವಿವಿ ಎಷ್ಟೇ ಕ್ರಮಗಳನ್ನೂ ಕೈಗೊಂಡರೂ ಪ್ರಯೋಜನವಾಗುತ್ತಿಲ್ಲ.

Advertisement

ಬೆಂಗಳೂರು ವಿವಿಯು ಅತ್ಯಂತ ಹಳೆಯ ವಿವಿಯಾಗಿದ್ದು, 1 ಸಾವಿರ ಎಕರೆಗಿಂತ ಹೆಚ್ಚು ವಿಸ್ತೀರ್ಣವಿದೆ. ಕ್ಯಾಂಪಸ್‌ನ ಒಳಗಡೆಯಿಂದ ಹಾದು ಹೋಗುವ ರಸ್ತೆಗಳಲ್ಲಿ ಬೈಕ್‌, ಕಾರುಗಳಲ್ಲಿ ಸಂಚರಿಸುವ ಹಲವರು ಮತ್ತು ವಾಯು ವಿಹಾರಕ್ಕೆಂದು ಬರುವ ಅನೇಕ ಮಂದಿ ಜ್ಞಾನ ದೇಗುಲವಾಗಿರುವ ಬೆಂಗಳೂರು ವಿವಿ ಕ್ಯಾಂಪಸ್‌ ಅನ್ನು ಕಸದ ತೊಟ್ಟಿಯೆಂದು ಭಾವಿಸಿದಂತಿದೆ!

ಬೆಂಗಳೂರು ವಿವಿಯ ಜ್ಞಾನಭಾರತಿ ರೋಡ್‌ ಆರ್ಚ್‌ನಿಂದ ಉಲ್ಲಾಳು ಸಿಗ್ನಲ್‌ ತನಕದ ರಸ್ತೆ, ಮರಿಯಪ್ಪನ ಪಾಳ್ಯದಿಂದ ಜ್ಞಾನಭಾರತಿ ಮೆಟ್ರೋ ಸ್ಟೇಷನ್‌ ನಿಲ್ದಾಣದ ತನಕದ ರಸ್ತೆ, ವಿವಿ ಕೇಂದ್ರ ಕಚೇರಿಯಿಂದ ಗಾಂಧಿ ಅಧ್ಯಯನ ಕೇಂದ್ರದವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ಪ್ರತಿದಿನ ಕಸದ ರಾಶಿಯೇ ನಿರ್ಮಾಣವಾಗುತ್ತಿದೆ. ಫ‌ುಟ್‌ಪಾತ್‌ ಮೇಲೆಯೂ ಕಸದ ಚೀಲಗಳು ಬಿದ್ದಿರುತ್ತವೆ. ಈ ಕಸವನ್ನು ನಿರ್ವಹಣೆ ಮಾಡುವ ಯತ್ನದಲ್ಲಿ ವಿವಿ ಹೈರಾಣಾಗಿದೆ.

ಮನೆಯ ಕಸವನ್ನು ತೆಗೆದುಕೊಂಡು ಬರುವ ಜನರು ಕ್ಯಾಂಪಸ್‌ ಪ್ರವೇಶಿಸಿದ ಬಳಿಕ ಮೆಲ್ಲನೆ ಕಸವನ್ನು ರಸ್ತೆಯ ಬದಿಗೆ ಎಸೆದು ತಮ್ಮ ಪ್ರಯಣವನ್ನು ಮುಂದುವರಿಸುತ್ತಾರೆ. ಕಸ ಎಸೆಯುವುದನ್ನು ತಡೆಯಲು ಬೃಹತ್‌ ಬೆಂಗಳೂರ ಮಹಾನಗರ ಪಾಲಿಕೆ ಮಾರ್ಷಲ್‌ಗ‌ಳನ್ನು ಹಾಗೂ ವಿವಿ ಭದ್ರತಾ ಸಿಬ್ಬಂದಿಯನ್ನು ನೇಮಿಸಿದರೂ ಪ್ರಯೋಜನವಾಗಿಲ್ಲ. ಕಸ ಎಸೆದರೆ ದಂಡ, ಶಿಕ್ಷಾರ್ಹ ಅಪರಾಧ ಎಂದು ಬೋರ್ಡ್‌ ಹಾಕಿದ್ದರೂ ಕಸ ಎಸೆಯುತ್ತಲೇ ಇದ್ದಾರೆ.

ಬೋರ್ಡ್‌ ಹಾಕಿದರೂ ಪ್ರಯೋಜವಿಲ್ಲ: ವಿವಿ ಭದ್ರತಾ ಸಿಬ್ಬಂದಿ ಇಲ್ಲದ ಜಾಗ ಹುಡುಕಿ ರಪ್ಪನೆ ಕಸ ಎಸೆದು ಪರಾರಿ ಆಗುತ್ತಾರೆ. ಪ್ರತಿ ಕಡೆಯೂ ಕಸ ಎಸೆಯದಂತೆ ಭದ್ರತಾ ಸಿಬ್ಬಂದಿ ನೇಮಿಸಲು ಸಾಧ್ಯವಿಲ್ಲ. “ನಾವು ನಮ್ಮ ಕ್ಯಾಂಪಸ್‌ನಲ್ಲಿ ಕಸ ಎಸೆಯಬೇಡಿ ಎಂದು ಬೋರ್ಡ್‌ ಹಾಕಿದರೂ ಪ್ರಯೋಜನವಾಗಿಲ್ಲ. ಕಸ ಎಲ್ಲಿ ವಿಲೇವಾರಿ ಮಾಡಬೇಕು ಎಂಬ ಪ್ರಜ್ಞೆ ಜನರಿಗಿಲ್ಲ ಎಂದಾದರೆ ಅವರು ಎಷ್ಟು ಶಿಕ್ಷಣ ಪಡೆದರೆ ಏನು ಪ್ರಯೋಜನ’ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಜಯಕರ್‌ ಶೆಟ್ಟಿ ಬೇಸರ ವ್ಯಕ್ತಪಡಿಸುತ್ತಾರೆ.

Advertisement

ಕ್ಯಾಂಪಸ್‌ನಲ್ಲಿ ಕಸದ ವಾಸನೆ: ಕಸ ವಾಸನೆ ಬರುವ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಓಡಾಟಕ್ಕೆ ಸಮಸ್ಯೆ ಆಗುವುದನ್ನು ಮನಗಂಡು ಎನ್‌ ಎಸ್‌ಎಸ್‌ ಸ್ವಯಂಸೇವಕರು ಆಗಾಗ ಕಸ ತೆಗೆದು ಕ್ಯಾಂಪಸ್‌ ಶುಚಿಗೊಳಿಸುವ ಪ್ರಯತ್ನ ನಡೆಸುತ್ತಾರೆ. ಆದರೂ ಸಾರ್ವಜನಿಕರು ಕಸ ಎಸೆಯುವುದು ತಪ್ಪುತ್ತಿಲ್ಲ. ನಮಗೂ ಕಸ ಎಸೆ ಯುವುದನ್ನು ತಡೆಯುವ ದಾರಿ ಗೋಚರಿಸುತ್ತಿಲ್ಲ ಎಂದು ವಿವಿ ಕುಲಪತಿಗಳು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ನಮ್ಮ ವಿವಿ ಕ್ಯಾಂಪಸಿನಲ್ಲಿ ಹೊರಗಿನಿಂದ ಬಂದು ಅನಾಗರಿಕರಂತೆ ಕಸ ಬಿಸಾಡುವುದು ಕಂಡಾಗ ನಮಗೆ ಬಹಳ ಬೇಸರವಾಗುತ್ತದೆ. ಜನರು ಕನಿಷ್ಠ ನಾಗರಿಕ ಪ್ರಜ್ಞೆ ಮೈಗೂಡಿಸಿಕೊಳ್ಳದಿದ್ದರೆ ಹೇಗೆ, ಇಷ್ಟೊಂದು ದೊಡ್ಡ ಕ್ಯಾಂಪಸ್‌ನಲ್ಲಿ ಕಸ ಬಿಸಾಕುವುದನ್ನು ತಡೆಯಲು ಏನು ಕ್ರಮ ಕೈಗೊಳ್ಳಬಹುದು ಎಂಬುದೇ ನಮಗೆ ತೋಚುತ್ತಿಲ್ಲ. -ಡಾ.ಜಯಕರ್‌ ಶೆಟ್ಟಿ, ವಿವಿ ಕುಲಪತಿ

ಜ್ಞಾನಭಾರತಿ ಆವರಣದಲ್ಲಿ ಎನ್‌ಎಸ್‌ ಎಸ್‌ ವಿದ್ಯಾರ್ಥಿಗಳು ಪ್ರತಿ 15 ದಿನಗಳಿಗೊಮ್ಮೆ ವಿಶೇಷ ಸ್ವತ್ಛತಾ ಅಭಿಯಾನದ ಮೂಲಕ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದಾರೆ. ಆದರೂ ಕಸದ ಸಮಸ್ಯೆ ಬಗೆಹರಿಯುತ್ತಿಲ್ಲ. ಸಾರ್ವಜನಿಕರು ಜವಾಬ್ದಾರಿ ಮರೆತು ವಿಶ್ವವಿದ್ಯಾಲಯದ ಆವರಣದಲ್ಲಿ ಮನಬಂದಂತೆ ಕಸ ಎಸೆದು ಹೋಗುತ್ತಿರುವುದೇ ಇದಕ್ಕೆ ಕಾರಣವಾಗಿದೆ. ವಿದ್ಯಾರ್ಥಿಗಳು ಸಂಚರಿಸುವ ರಸ್ತೆ ಎಂಬ ಅರಿವನ್ನು ಸಾರ್ವಜನಿಕರು ಹೊಂದಬೇಕು. ಬಿಬಿಎಂಪಿ ಮತ್ತಷ್ಟು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು -ಪ್ರೊ.ಎಚ್‌.ಆರ್‌. ರವೀಶ್‌, ಎನ್‌ಎಸ್‌ಎಸ್‌, ಸಂಯೋಜನಾಧಿಕಾರಿ

ಬೆಂಗಳೂರಿಗೆ ಆಕ್ಸಿಜನ್‌ ನಂತಿರುವ ಜ್ಞಾನ ಭಾರತಿ ಆವರಣದಲ್ಲಿ ಕಸದ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ. ಸಾರ್ವಜನಿಕ ಬೇಜವಾಬ್ದಾರಿತನದಿಂದ ವಿದ್ಯಾರ್ಥಿಗಳ ಓಡಾಟಕ್ಕೆ ಸಮಸ್ಯೆಯಾಗಿದೆ. ವಿದ್ಯಾರ್ಥಿ ಒಕ್ಕೂಟಗಳು ಸಾಕಷ್ಟು ಹೋರಾಟ ನಡೆಸಿದ್ದರೂ ಯಾವುದೇ ಫ‌ಲ ದೊರೆತಿಲ್ಲ. ವಿದ್ಯಾರ್ಥಿಗಳು ಮೂಗುಮುಚ್ಚಿ ಓಡಾಡುವ ಪರಿಸ್ಥಿತಿ ಇದೆ. ಬಿಬಿಎಂಪಿ ಮತ್ತು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಕಠಿಣ ಕ್ರಮಗಳ ಮೂಲಕ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಬೇಕು. ಇಲ್ಲವಾದರೆ ವಿದ್ಯಾರ್ಥಿ ಒಕ್ಕೂಟ ಮತ್ತಷ್ಟು ಪ್ರತಿಭಟಿಸಲಿದೆ.-ಚಂದ್ರು ಪೆರಿಯಾರ್‌, ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟದ ಗೌರವಾಧ್ಯಕ್ಷ

ರಾಕೇಶ್‌ ಎನ್‌.ಎಸ್‌

Advertisement

Udayavani is now on Telegram. Click here to join our channel and stay updated with the latest news.

Next