ಮಹಾರಾಜರ ಕಾಲದಲ್ಲಿ ಮೈಸೂರಿನಲ್ಲಿ ಜಟ್ಟಿಗಳ ಹಿಂಡೇ ಇತ್ತಂತೆ. ಅಂಥ ಜಟ್ಟಿಗಳನ್ನು ತಯಾರು ಮಾಡುತ್ತಿದ್ದ ಸ್ಥಳವೇ ಗರಡಿ ಮನೆ. ಮೈಸೂರಿನಲ್ಲಿ, ಈಗಲೂ ಹಳೆಯ ವೈಭವದ ಮಧುರ ನೆನಪಿನಂತೆ ಒಂದಷ್ಟುಗರಡಿ ಮನೆಗಳಿ ವೆ…
ಇಡೀ ಭಾರತ ಅನ್ಯಾಕ್ರಮಣದಿಂದ ನಲುಗಿ ಹೋಗುತ್ತಿದ್ದಾಗ ಅಜೇಯವಾಗಿ ಇದ್ದದ್ದು ವಿಜಯನಗರ. ಅದರ ಪತನದ ನಂತರವೂ ವಿಜಯ ನಗರದ ಪರಂಪರೆಯನ್ನು ಮುಂದುವರಿಸಿ ಕೊಂಡು ಬಂದ ಕೀರ್ತಿ ಮೈಸೂರು ರಾಜ್ಯದ್ದು. ಆ ಕಾಲದಲ್ಲಿ ಹೋರಾಟದ ಕೆಚ್ಚನ್ನು ಹೆಚ್ಚಿಸುವ ಕಾರ್ಯವನ್ನು ಗರಡಿ ಮನೆಗಳು ಮಾಡುತ್ತಿದ್ದವು. ಇಂದಿಗೂ ನಾವು ಮೈಸೂರಿನಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಕುಸ್ತಿ ಪೈಲ್ವಾನರನ್ನು ತರಬೇತಿ ಮಾಡುವ ಗರಡಿ ಮನೆಗಳನ್ನು ಕಾಣಬಹುದು. ಮೈಸೂರಿನಲ್ಲಿ ನೂರಕ್ಕೂ ಹೆಚ್ಚು ವರ್ಷ ಹಳೆಯದಾದ ದೇಸಿ ಶೈಲಿಯ “ಮನೆ’ಯಲ್ಲಿ ಪಾರಂಪರಿಕ ಪರಿಕರಗಳನ್ನು ಬಳಸಿ ಗರಡಿ ಪೈಲ್ವಾನರನ್ನು ತಯಾರು ಮಾಡಲಾಗುತ್ತದೆ. ಗರಡಿ ಮನೆಯ ಒಳಾಂಗಣ, ತೆರೆದ ತೊಟ್ಟಿ ಮನೆ- ಕೋರ್ಟ್‌ಯಾರ್ಡ್ ಮಾದರಿಯಲ್ಲಿದ್ದು, ಕಸರತ್ತು ಮಾಡಲು ಸೂಕ್ತವಾಗಿದೆ.
ಸೂರಿಗೆ ಅರ್ಧ ವೃತ್ತಾಕಾರದ ನಾಟಿ ಜೇಡಿಮಣ್ಣಿನ ಬಿಲ್ಲೆಗಳನ್ನು ಅಳವಡಿಸಲಾಗಿದ್ದು, ಮಾಮೂಲಿ ಆರ್ ಸಿ ಸಿ ಸೂರಿಗೆ ಹೋಲಿಸಿದರೆ, ಹೆಚ್ಚು ತಂಪಾಗಿಯೂ ಸಾಕಷ್ಟು ಗಾಳಿ ಆಡಲು ಅನುಕೂಲಕರವಾಗಿಯೂ ಇರುತ್ತದೆ. ಮಳೆ, ಗಾಳಿ ಹೆಚ್ಚಾದಾಗ ಕಸರತ್ತು ಮಾಡಲೆಂದು ಅರೆ ತೆರೆದ ಸ್ಥಳದಂತಿರುವ ಕಡೆ ಮರದ ಪಟ್ಟಿಗಳ ಕಲಾತ್ಮಕ ಜಾಲಿ ಹಾಕಲಾಗಿದೆ. ಗೋಡೆಗಳ ಮೇಲೆ ದೊಡ್ಡಗಾತ್ರದ, ಶಕ್ತಿಯ ಪ್ರೇರಕವಾದ ಬೆಟ್ಟಹೊತ್ತ ಆಂಜನೇಯ ಹಾಗೂ ಅಮೃತ ಹೊತ್ತ ಗರುಡನ ವರ್ಣರಂಜಿತ ಸಾಂಪ್ರದಾಯಿಕ ಚಿತ್ರಗಳು ಧೈರ್ಯ ಸಾಹಸಗಳನ್ನು ಮೆರೆಸಲು ಪೂರಕವಾಗಿದೆ. ಮಲ್ಲಕಂಬ ಹಾಗೂ ಕುಸ್ತಿಗೆ ಪೂರಕವಾದ ಅಖಾಡ ವಿಶೇಷವಾಗಿ ಸಿದ್ಧಪಡಿಸಿದ ಮಣ್ಣಿನಿಂದ ಕೂಡಿದೆ. ಈಗಿನವರು ಸಾಮುಮಾಡಲು, ಕಬ್ಬಿಣದ ಡಂಬೆಲ್ಸ್ ಹಾಗೂ ಭಾರಗಳನ್ನು ಬಳಸಿದರೆ ಈ ಗರಡಿ ಮನೆಯಲ್ಲಿ ಮರದ ಗದೆ, ಕಲ್ಲಿನ ಚಕ್ರದಾಕೃತಿಯ ವಿವಿಧ ಭಾರದ ಗುಂಡುಕಲ್ಲುಗಳನ್ನು ಹಾಗೂ ಇತರೆ ಪರಿಕರಗಳನ್ನು ಬಳಸಿ ದೇಹದಾಡ್ಯì ಬೆಳೆಸಿಕೊಳ್ಳುತ್ತಾರೆ. ಮೈಸೂರಿನ ಶ್ರೀನಿವಾಸಣ್ಣನವರ ಗರಡಿಯಲ್ಲಿ ಅನೇಕ ಪ್ರಖ್ಯಾತ ಪೈಲ್ವಾನರು ತಯಾರುಗೊಂಡಿ ದ್ದಾರೆ. ಅವರಲ್ಲಿ ಕೆಲವರು ರಾಜದಾನಿ ದೆಹಲಿಯ ವರೆಗೂ ಹೋಗಿ ಅನೇಕ ಕುಸ್ತಿಪಂದ್ಯಗಳಲ್ಲಿಪ್ರಶಸ್ತಿ ಪಡೆದಿದ್ದಾರೆ. ಇವರಲ್ಲಿ ಗರಡಿ ಖಲೀಫ್ ಎಂದೇ ಪ್ರಖ್ಯಾತರಾಗಿದ್ದ ದೊಡ್ಡ ತಿಮ್ಮಯ್ಯನವರೂ ಒಬ್ಬರು. ಮಲ್ಲಕಂಬ, ದೇಸಿ “ಡಂಬೆಲ್ಸ್’ ಕುಸ್ತಿಯಲ್ಲಿ ಕೈನೊಂದಿಗೆ ಕಾಲಿಗೂ ಪ್ರಾಮುಖ್ಯತೆ ಇರುವುದರಿಂದ, ಎದುರಾಳಿಯನ್ನು ದಬ್ಬಿಹಾಕಿ ಬಿಗಿದಿಡಿಲು ಮಲ್ಲಕಂಬದ ಮೂಲಕ ಮಾಡುವ ಕಸರತ್ತುಗಳು ಪೂರಕವಾಗಿವೆ.
ಅಖಾಡದಲ್ಲಿ ಕುಸ್ತಿಗೆ ಇಳಿಯುವ ಮೊದಲು ಅದಕ್ಕೆ ಪೂರಕವಾದ ತಾಲೀಮು ಮಾಡಿ, ನಂತರ ತರಬೇತಿ ನೀಡಲಾಗುತ್ತದೆ. ಕಲ್ಲಿನ ಸಣ್ಣ ಚಕ್ರಗಳಿಗೆ ಅಡ್ಡ ಕೋಲಿದ್ದು, ಇವನ್ನು ಒಂದು ಕೈಯಲ್ಲಿ ಎತ್ತಿ ಕಸರತ್ತು ಮಾಡಬೇಕಾಗಿದ್ದರೆ, ದೊಡ್ಡ ಗಾತ್ರದ ಚಕ್ರಗಳನ್ನು ಕುತ್ತಿಗೆ -ಭುಜದ ಮೇಲೆ ಕೂರುವಂತೆ ಹಾಕಿಕೊಂಡು ಬಸ್ಕಿ ಹೊಡೆಯುವುದು ಇತ್ಯಾದಿ ಮಾಡಲಾಗುತ್ತದೆ. ದೇಹದ ಪ್ರತಿಯೊಂದು ಅಂಗವೂ ತನ್ನದೇ ಆದ ರೀತಿಯಲ್ಲಿ ಕೈ-ಕಾಲಿಗೆ ಶಕ್ತಿ ಒದಗಿಸುವ ಕಾರಣ ಇಡೀ ದೇಹದ ಸದೃಢತೆಯನ್ನು ವೃದ್ಧಿಸುವಲ್ಲಿ ವಿವಿಧ ಕಸರತ್ತುಗಳ ಮೂಲಕ ಗಟ್ಟಿಮುಟ್ಟಾದ ಅಂಗಸೌಷ್ಟವ ಹೊಂದಲು ಒತ್ತು ನೀಡಲಾಗುತ್ತದೆ.
ಕೆ. ಜಯರಾಮ್