ಹುಣಸೂರು: ಗ್ರಾಮೀಣ ಪ್ರದೇಶಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಕೆಲಸಗಳಲ್ಲಿ ತೊಡಗಿಕೊಳ್ಳಬೇಕು ಎಂದು ತಹಶೀಲ್ದಾರ್ ಬಸವರಾಜ್ ತಿಳಿಸಿದರು. ತಾಲೂಕಿನ ಗೋವಿಂದನಹಳ್ಳಿ ಗ್ರಾಪಂ ವ್ಯಾಪ್ತಿಯ ಕೊಟ್ಟಿಗೆ ಕಾವಲ್ ಗಿರಿಜನ ಹಾಡಿಯಲ್ಲಿ ಆದಿವಾಸಿ ಹಾಗೂ ಕುಟುಂಬಗಳಿಗೆ ಬೆಂಗಳೂರಿನ ಎಫ್‌ಎಸ್‌ಎಲ್ ಇಂಡಿಯಾ ಸಂಸ್ಥೆ ನೀಡಿದ ಆಹಾರದ ಕಿಟ್ ವಿತರಿಸಿ ಮಾತನಾಡಿದರು.
ಕೋವಿಡ್ 19 ಸೋಂಕು ಅಂಟದಂತೆ ನಮ್ಮನ್ನು ನಾವು ರಕ್ಷಣೆ ಮಾಡಿಕೊಳ್ಳುವ ಜೊತೆಯಲ್ಲಿ ಕೆಲಸಗಳಲ್ಲಿಯೂ ತೊಡಗಿಕೊಳ್ಳಬೇಕು. ಕೋವಿಡ್ 19ದಿಂದ ಈಗಾಗಲೇ ಸಾಕಷ್ಟು ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡು ಜನಜೀವನ ಕಷ್ಟಕರವಾಗಿದೆ. ಹಾಗಾಗಿ ಕೋವಿಡ್ 19 ನಿಯಂತ್ರಣಕ್ಕೆ ಮುಂಜಾಗ್ರತೆ ಪಾಲಿಸಿಕೊಂಡು ಕೆಲಸಗಳಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು. ತಾಪಂ ಇಒ ಗಿರೀಶ್ ಮಾತನಾಡಿದರು.
ಸಂಕಷ್ಟದ ಕುಟುಂಬಗಳಿಗೆ ಎಫ್‌ಎಸ್‌ಎಲ್ ಇಂಡಿಯಾ ಸಂಸ್ಥೆಯಿಂದ ಆಹಾರ ಕಿಟ್‌ಗಳನ್ನು ವಿತರಿಸುತ್ತಿರುವುದು ಉತ್ತಮ ಕೆಲಸ. ಕೋವಿಡ್ 19 ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಸಹಕರಿಸಿದಾಗ ಮಾತ್ರ ನಿಯಂತ್ರಣ ಸಾಧ್ಯ. ವಯಸ್ಸಾದವರು ಅನಗತ್ಯವಾಗಿ ಹೊರಗಿನ ಊರುಗಳಿಗೆ ಪ್ರಯಾಣ ಮಾಡಬೇಡಿ ಎಂದು ಸಲಹೆ ನೀಡಿದರು. ಸಮಾರಂಭಕ್ಕೂ ಮುನ್ನ ಸಿಬಿಟಿ ಕಾಲೋನಿಯ ಚಿನ್ನಣ್ಣ ನೀಡಿದ್ದ ಹೆಬ್ಬೇವಿನ ಸಸಿಗಳನ್ನು ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ ನೆಟ್ಟು, ಗ್ರಾಮಸ್ಥರಿಗೆ ಸಸಿ ವಿತರಿಸಿದರು.
ಇದೇ ವೇಳೆ ತಾಲೂಕಿನ ಸಿಬಿಟಿ ಕಾಲೋನಿ, ಬಲ್ಲೇನಹಳ್ಳಿ ಗ್ರಾಮಸ್ಥರು ನೀಡಿದ್ದ ಹಣ್ಣು, ತರಕಾರಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಸಲ್ಮಾಬಾನು, ಸದಸ್ಯರಾದ ತಮ್ಮಯ್ಯ, ಮಲ್ಲೇಶ್, ಬಿಲ್ ಕಲೆಕ್ಟರ್ ಲೋಕೇಶ್, ಮುಖ್ಯಶಿಕ್ಷಕಿ ಗೀತಾ, ಇಂಡಿಯಾ ಸಂಸ್ಥೆ ಅಧ್ಯಕ್ಷ ರಾಕೇಶ್ ಸೋನ್ಸ್, ಸಂಯೋಜಕ ಮಂಜುನಾಥ್, ದಾನಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.