ಹೊಸದಿಲ್ಲಿ: ಜ.10ರಿಂದ ಬೂಸ್ಟರ್ ಡೋಸ್ ನೀಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ರಾತ್ರಿ ಘೋಷಣೆ ಮಾಡಿದ್ದಾರೆ. ಆರೋಗ್ಯಸೇವಾ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಜನವರಿ 10ರಿಂದ ಬೂಸ್ಟರ್ ಡೋಸ್ ನೀಡಲಾಗುವುದು ಎಂದಿದ್ದರು. ಕೋವಿಡ್-19 ಲಸಿಕೆಯ ಎರಡನೇ ಡೋಸ್ ಮತ್ತು ಮೂರನೇ (ಬೂಸ್ಟರ್) ಡೋಸ್ ನಡುವಿನ ಅಂತರವು ಒಂಬತ್ತರಿಂದ 12 ತಿಂಗಳುಗಳವರೆಗೆ ಇರುತ್ತದೆ ಎಂದು ಅಧಿಕೃತ ಮೂಲಗಳು ಭಾನುವಾರ ತಿಳಿಸಿವೆ.
ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ದೇಶವನ್ನು ಸುರಕ್ಷಿತವಾಗಿಡಲು ಆರೋಗ್ಯಸೇವಾ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಭಾರೀ ಕೊಡುಗೆಗಳನ್ನು ನೀಡಿದ್ದಾರೆ. ಹೀಗಾಗಿ, ಅವರಿಗೆ ಮೊದಲು ಮುನ್ನೆಚ್ಚರಿಕಾ ಡೋಸ್ ನೀಡಲು ತೀರ್ಮಾನಿಸಿದ್ದೇವೆ. ಅದರಂತೆ, ಜನವರಿ 10ರಿಂದಲೇ ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಿಗೆ ಬೂಸ್ಟರ್ ಡೋಸ್ ನೀಡಲಾಗುತ್ತದೆ. ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ, 60 ವರ್ಷ ಮೇಲ್ಪಟ್ಟವರು ಕೂಡ ವೈದ್ಯರ ಶಿಫಾರಸಿನ ಮೇರೆಗೆ ಬೂಸ್ಟರ್ ಡೋಸ್ ಪಡೆಯಲು ಅರ್ಹರಾಗುತ್ತಾರೆ ಎಂದೂ ಮೋದಿ ಘೋಷಿಸಿದ್ದರು.
ಇದನ್ನೂ ಓದಿ:ಒಮಿಕ್ರಾನ್ ನಮ್ಮ ಮನೆಬಾಗಿಲು ತಟ್ಟಿದೆ ಎಂದು ನೆನಪಿನಲ್ಲಿರಲಿ: ಪ್ರಧಾನಿ ಮೋದಿ
ಪ್ರಸ್ತುತ ಭಾರತದಲ್ಲಿ ಬಳಸಲಾಗುತ್ತಿರುವ ಕೋವಿಶೀಲ್ಡ್ ಮತ್ತು ಕೋವಾಕ್ಸಿನ್‌ನಲ್ಲಿ ಲಸಿಕೆಗಳಲ್ಲಿನ ಅಂತರಗಳ ಸೂಕ್ಷ್ಮತೆಯನ್ನು ರೂಪಿಸಲಾಗುತ್ತಿದೆ. ಈ ಕುರಿತು ಅಂತಿಮ ನಿರ್ಧಾರವನ್ನು ಶೀಘ್ರದಲ್ಲೇ ತೆಗೆದುಕೊಳ್ಳಲಾಗುವುದು ಎಂದು ವರದಿ ತಿಳಿಸಿದೆ.
“ಎರಡನೆಯ ಮತ್ತು ಕೋವಿಡ್ ಲಸಿಕೆಯ ಮುನ್ನೆಚ್ಚರಿಕೆಯ ಡೋಸ್ ನಡುವಿನ ಅಂತರವು ಒಂಬತ್ತರಿಂದ 12 ತಿಂಗಳುಗಳವರೆಗೆ ಇರುತ್ತದೆ, ರೋಗನಿರೋಧಕ ವಿಭಾಗ ಮತ್ತು ರಾಷ್ಟ್ರೀಯ ತಾಂತ್ರಿಕ ಸಲಹಾ ಗುಂಪು (ಎನ್‌ಟಿಜಿಐ) ಈ ಮಾರ್ಗಗಳಲ್ಲಿ ಚರ್ಚಿಸುತ್ತಿದೆ” ಎಂದು ವರದಿ ತಿಳಿಸಿದೆ.