Advertisement

ಮುಂಬಯಿ: ಇಂದು ಗಣೇಶ ವಿಗ್ರಹಗಳ ವಿಸರ್ಜನೆ; ಬಿಗಿ ಭದ್ರತೆ

10:09 AM Sep 05, 2017 | |

ಮುಂಬಯಿ: ಅನಂತ ಚತುರ್ದಶಿ ದಿನ ಇಂದು (ಮಂಗಳವಾರ) ನಗರದ ಸಾರ್ವಜನಿಕ ಗಣೇಶೋತ್ಸವ ಮಂಡಳಗಳಲ್ಲಿ  ಮತ್ತು ಮನೆಗಳಲ್ಲಿ  ಸ್ಥಾಪಿಸಲಾಗಿರುವ ಗಣೇಶ ವಿಗ್ರಹಗಳ ಅಂತಿಮ ದಿನದ ವಿಸರ್ಜನೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ)ಯು ವಿಗ್ರಹಗಳ ವಿಸರ್ಜನೆಗಾಗಿ ನಗರದ ವಿವಿಧೆಡೆ ಭಾರೀ ಸಿದ್ಧತೆಗಳನ್ನು ಮಾಡಿದೆ.

Advertisement

ಇದಕ್ಕಾಗಿ ಬಿಎಂಸಿ 2,382 ಅಧಿಕಾರಿಗಳು ಮತ್ತು 5,173 ನೌಕರರನ್ನು ವಿವಿಧ ಚೌಪಾಟಿ ಮತ್ತು ವಿಸರ್ಜನೆ ಸ್ಥಳಗಳಲ್ಲಿ ನಿಯೋಜಿಸಿದೆ. ಭಕ್ತರ ಸುರಕ್ಷತೆ ದೃಷ್ಟಿಯಿಂದ ಮುಂಬಯಿ ಪೊಲೀಸ್‌ ವಿಭಾಗ ನಗರದ ಎಲ್ಲೆಡೆ ಬಿಗಿ ಭದ್ರತೆ ಇರಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮನೆಯಲ್ಲಿ ಪ್ರತಿಷ್ಠಾಪಿಸಿರುವ ಸಾವಿರಾರು ಗಣೇಶ ವಿಗ್ರಹಗಳು ಇಂದು ವಿಸರ್ಜನೆಗೊಳ್ಳಲಿದ್ದು ಇದಕ್ಕಾಗಿ ಗಿರಾYಂವ್‌, ಶಿವಾಜಿ ಪಾರ್ಕ್‌, ದಾದರ್‌, ವರ್ಲಿ, ಖಾರ್‌, ಸಾತಬಂಗಲಾ, ವೇಸಾವೆ, ಗೋರಾಯಿ, ಮಢ್‌, ಜೂಹೂ, ಮಾಲ್ವಣಿ, ಮಾಲ್ವೆ ಮತ್ತು ಆಕ್ಸಾ ಈ ಚೌಪಾಟಿಗಳಲ್ಲಿ ಮತ್ತು ನಗರದ ಸುಮಾರು 100 ಸ್ಥಳಗಳಲ್ಲಿ  ಬಿಎಂಸಿಯಿಂದ ವಿಗ್ರಹಗಳ ವಿಸರ್ಜನೆ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಸಂದರ್ಭ ವಿಸರ್ಜನಾ ಸ್ಥಳಗಳಲ್ಲಿ  ಭಾರೀ ಜನಸಾಗರ ಸೇರಲಿದ್ದು, ಡ್ರೋನ್‌ ಕೆಮರಾಗಳ  ಮೂಲಕ ಜನದಟ್ಟಣೆಯ ಮೇಲೆ ಕಣ್ಗಾವಲು ಇರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಗಣಪತಿ ವಿಗ್ರಹಗಳ ಸ್ವಾಗತಕ್ಕಾಗಿ ನಗರದ ಅಲ್ಲಲ್ಲಿ ಸ್ವಾಗತ ಕೇಂದ್ರಗಳನ್ನು ತೆರೆಯಲಾಗಿದೆ. ವಿಸರ್ಜನೆ ವೇಳೆ ಗಣೇಶ ವಿಗ್ರಹ ಹೊತ್ತ ವಾಹನಗಳು ಮತ್ತು ಟ್ರಾಲಿಗಳು ಸಮುದ್ರದ ಮರಳಿನಲ್ಲಿ ಸಿಕ್ಕಿಕೊಳ್ಳಬಾರದೆಂದು 840ಕ್ಕೂ ಅಧಿಕ ಸ್ಟೀಲ್‌ ಪ್ಲೇಟ್‌ಗಳನ್ನು ಸ್ಥಳಗಳಲ್ಲಿ ಹಾಸಲಾಗಿದೆ. 58 ನಿಯಂತ್ರಣ ಕಕ್ಷೆ ಮತ್ತು 607 ಜೀವ ರಕ್ಷಕರನ್ನು ನಿಯೋಜಿಸಲಾಗಿದ್ದು, ಗಣೇಶ  ಭಕ್ತರಿಗಾಗಿ ಬಿಎಂಸಿ 74 ಪ್ರಥಮ ಆರೋಗ್ಯ ಚಿಕಿತ್ಸೆ ಕೇಂದ್ರ ಮತ್ತು 60ಕ್ಕೂ ಹೆಚ್ಚು ಆ್ಯಂಬುಲೆನ್ಸ್‌ಗಳ ವ್ಯವಸ್ಥೆ ಕಲ್ಪಿಸಿದೆ. ಚೌಪಾಟಿಗಳಲ್ಲಿ ಗಣೇಶ್‌ ವಿಸರ್ಜನೆ ವೇಳೆ ದುರ್ಘ‌ಟನೆ ಸಂಭವಿಸಿದರೆ 71 ಮೋಟರ್‌ ಬೋಟ್‌ಗಳನ್ನು ಇರಿಸಲಾಗಿದೆ ಎಂದು ಪಾಲಿಕೆಯ ಮೂಲ ತಿಳಿಸಿದೆ.

ಭಕ್ತರು ಸಮುದ್ರದಲ್ಲಿಳಿಯುವಾಗ 4 ಮೀಟರ್‌ಗಿಂತ ಹೆಚ್ಚು ಎತ್ತರದ ಹೈಟೆಡ್‌ಗಳಿಂದ ಜಾಗೃತರಾಗಿರಬೇಕು ಎಂದು ಪಾಲಿಕೆ ಮೂನ್ಸೂಚನೆ ನೀಡಿದೆ.

Advertisement

ಸಾರ್ವಜನಿಕರ ಗಣೇಶ ವಿಗ್ರಹಗಳ ವಿಸರ್ಜನೆಗಾಗಿ ಇತ್ತ ಥಾಣೆ ಮಹಾನಗರ ಪಾಲಿಕೆ ಕೂಡ ವಿವಿಧ ಸಿದ್ಧತೆಗಳನ್ನು ಮಾಡಿದ್ದು ಪಾಲಿಕೆಯ ಅಧಿಕಾರಿ, ನೌಕರರು, ಸುರಕ್ಷಾ ರಕ್ಷಕರು ಮತ್ತು ಸ್ವಯಂ ಸೇವಕರು ಒಳಗೊಂಡ 1,450 ಜನರ ತಂಡವೊಂದನ್ನು ನಿಯೋಜನೆ ಮಾಡಿದೆ. ಪಾರ್ಕಿಂಗ್‌ ವ್ಯವಸ್ಥೆ, ಅಗ್ನಿಶಾಮಕ ದಳ, ಪ್ರಖರ ವಿದ್ಯುತ್‌ 

ವ್ಯವಸ್ಥೆ, ವೈದ್ಯಕೀಯ ತಂಡ, ಸಂಚಾರಿ ಶೌಚಾಲಯ ಗೃಹಗಳ ವ್ಯವಸ್ಥೆ ಮಾಡಲಾಗಿದೆ.

ಹರಿಯುವ ನೀರಿನಲ್ಲೇ ಗಣೇಶ ವಿಗ್ರಹದ ವಿಸರ್ಜನೆ ನಡೆಯಬೇಕು ಎಂಬ ಹಿಂದೂ ಸಂಸ್ಕೃತಿಯ ಹಿನ್ನೆಲೆಯಲ್ಲಿ ಪಾಲಿಕೆ ವತಿಯಿಂದ ಪಾರ್ಸಿಕ್‌ ರೇತಿಬಂದರ್‌, ಕೋಲಶೆತ್‌ ರೇತಿಬಂದರ್‌ ಮತ್ತು ಕೋಪ್ರಿಯಲ್ಲಿ ವಿಸರ್ಜನೆ ಮಹಾಘಾಟ್‌ ನಿರ್ಮಿಸಲಾಗಿದೆ. ಇದಲ್ಲದೆ, ವಿವಿಧ ಕೃತಕ ಹೊಂಡಗಳನ್ನು ಪಾಲಿಕೆ ನಿರ್ಮಿಸಿದೆ.

ಅದೇ, ಲಾಲ್‌ಬಾಗ್‌ ರಾಜಾ ಗಣಪತಿಯ ವಿಸರ್ಜನೆಗೆ ವಿಶೇಷ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ವಿಸರ್ಜನೆಗೆ ಬಳಸಲಾಗುವ ಮುಖ್ಯರಸ್ತೆಗಳಲ್ಲಿ ಭಾರೀ ವಾಹನಗಳ ಸಂಚಾರದ ಮೇಲೆ ತಡೆ ಹೇರಲಾಗಿದೆ. 

ಹೆಚ್ಚುವರಿ ಲೋಕಲ್‌ ರೈಲು, ಬಸ್‌: ಕೆಲವೆಡೆ ಮಾರ್ಗಗಳನ್ನು ಬದಲಾಯಿಸಲಾಗಿದೆ. ಪ್ರಯಾಣಿಕರ ಅನುಕೂಲಕ್ಕಾಗಿ  ತಡರಾತ್ರಿಯಿಂದ  ಹೆಚ್ಚುವರಿ ವಿಶೇಷ ಲೋಕಲ್‌ ರೈಲುಗಳ  ವ್ಯವಸ್ಥೆಯನ್ನು ಮಾಡಲಾಗಿದ್ದು, 
ಬೆಸ್ಟ್‌ ಆಡಳಿತದ ವತಿಯಿಂದ ಕೆಲವೆಡೆ ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಸೆ.5ರಂದು ಗಿರಾYಂವ್‌ ಚೌಪಾಟಿ, ಶಿವಾಜಿ ಪಾರ್ಕ್‌, ಜೂಹು ಚೌಪಾಟಿ ಸೇರಿದಂತೆ ವಿವಿಧ ಗಣೇಶ್‌ ವಿಗ್ರಹಗಳ ವಿಸರ್ಜನೆ ಸ್ಥಳಗಳಲ್ಲಿ ಪೊಲೀಸ್‌ ವಾಚ್‌ ಟವರ್‌ ಮತ್ತು ಡ್ರೋನ್‌ ಕೆಮರಾಗಳ ಮೂಲಕ ಬೃಹತ್‌ ಜನ ಸಮೂಹದ ಮೇಲೆ ಕಣ್ಗಾವಲು ಇರಿಸಲಾಗುವುದು. ಪೊಲೀಸ್‌ ವಿಭಾಗದಿಂದ ನಗರದ 80 ಸ್ಥಳಗಳಲ್ಲಿ ವಿಸರ್ಜನೆ ವ್ಯವಸ್ಥೆ ಮಾಡಲಾಗಿದೆ ಎಂದು ಪೊಲೀಸ್‌ ಅಧಿಕಾರಿ ರಶ್ಮಿ ಕರಂದಿಕರ್‌ ಅವರು ತಿಳಿಸಿದ್ದಾರೆ.

ವಾಹನ ಸಂಚಾರ ವ್ಯವಸ್ಥೆಯಲ್ಲಿ  ಬದಲಾವಣೆ

ಅಂತಿಮ ದಿನದ (ಸೆ.5) ಗಣಪತಿ ವಿಗ್ರಹಗಳ ವಿಸರ್ಜನೆ ಹಿನ್ನೆಲೆಯಲ್ಲಿ ನಗರದಲ್ಲಿನ ವಾಹನ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿವರೆಗೆ ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ ರಸ್ತೆ ಮಾರ್ಗದಲ್ಲಿನ ಭಾರತ್‌ ಮಾತಾ ಜಂಕ್ಷನ್‌ನಿಂದ ಬಾವ್ಲಾ ಕಂಪೌಂಡ್‌ವರೆಗೆ ಭಾರೀ ವಾಹನಗಳ ಸಂಚಾರಕ್ಕೆ ತಡೆ ಹೇರಲಾಗಿದೆ.
ಸಾನ್‌ ಗುರೂಜಿ ಮಾರ್ಗ ಮೂಲಕ ಗ್ಯಾಸ್‌ ಕಂಪೆನಿ ಜಂಕ್ಷನ್‌ನಿಂದ ಹಾದು ಹೋಗುವ ಡಾ| ಬಾಬಾ ಸಾಹೇಬ್‌ ಅಂಬೇಡ್ಕರ್‌ ರಸ್ತೆ ಮಾರ್ಗವನ್ನು ಎಲ್ಲ ವಾಹನಗಳಿಗೆ ಬಂದ್‌ ಮಾಡಲಾಗಿದೆ. ಇದಲ್ಲದೆ, ಕೆಲವು ರಸ್ತೆಗಳು ಬಂದ್‌ ಇರಲಿದ್ದು 55 ರಸ್ತೆಗಳಲ್ಲಿ ವನ್‌-ವೇ ವ್ಯವಸ್ಥೆ ಇರಲಿದೆ. 99 ರಸ್ತೆಗಳ ವಿವಿಧ ಭಾಗಗಳಲ್ಲಿ ವಾಹನಗಳ ಪಾರ್ಕಿಂಗ್‌ಗೆ ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next