Advertisement
ಬಸ್‌ಗಳಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಕಿರಿಯ ಸಹಾಯಕ ವಿಠಲ್ ಭಜಂತ್ರಿ ಹಾಗೂ ಚಾಲಕ ಕಂ ನಿರ್ವಾಹಕ ಶರಣ ಬಸಪ್ಪ ಕ್ಷತ್ರೀಯ ಎಂಬುವರು ಲಗೇಜುಗಳ ರೂಪದಲ್ಲಿ ಗಾಂಜಾವನ್ನು ವಿಜಯಪುರ ಮತ್ತು ಕಲಬುರಗಿಯಿಂದ ಬೆಂಗಳೂರಿಗೆ ಸಾಗಣೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಹೀಗೆ ಬಸ್‌ಗಳಲ್ಲಿ ಮಾದಕ ವಸ್ತುಗಳ ಸಾಗಣೆ ಹಿಂದೆ ಇನ್ನೂ ಕೆಲವರ ಕೈವಾಡ ಇರುವ ಶಂಕೆಯೂ ವ್ಯಕ್ತವಾಗಿದೆ.
Related Articles
Advertisement
“ಗಾಂಜಾ ಸಾಗಣೆ ಹಿಂದೆ ಯಾರ್ಯಾರು ಇದ್ದಾರೆ ಎಂಬುದನ್ನು ಪೊಲೀಸರು ಪತ್ತೆ ಮಾಡುತ್ತಾರೆ. ನಾವು ತಪ್ಪಿತಸ್ಥರ ವಿರುದ್ಧ ಇಲಾಖಾ ತನಿಖೆ ನಡೆಸುತ್ತೇವೆ. ಆದರೆ, ಇದೇ ರೀತಿ ಗಾಂಜಾ ಸಾಗಣೆ ಎಲ್ಲೆಲ್ಲಿ ನಡೆಯುತ್ತಿದೆ ಎಂಬುದನ್ನು “ಟ್ರ್ಯಾಕ್’ ಮಾಡುವುದು ಸದ್ಯಕ್ಕೆ ಕಷ್ಟ.ಯಾಕೆಂದರೆ, ನಿತ್ಯ ಸಾಕಷ್ಟು ಜನ ಬಸ್‌ಗಳಲ್ಲಿ ಪ್ರಯಾಣಿಸುತ್ತಾರೆ. ಬಹುತೇಕರು ಲಗೇಜುಗಳನ್ನು ಹೊಂದಿರುತ್ತಾರೆ. ಪ್ರತಿ ಲಗೇಜುಗಳ ತಪಾಸಣೆ ಅಸಾಧ್ಯ. ಆದರೆ, ಯಾವೊಂದು ವ್ಯವಸ್ಥೆಯಲ್ಲಿ ಹೀಗೆ ನ್ಯೂನ್ಯತೆಗಳಿರುವುದು ಸಹಜ. ಯಾರೋ ಒಬ್ಬಿಬ್ಬರು ಇಂತಹ ಕೃತ್ಯದಲ್ಲಿ ತೊಡಗಿದ್ದಾರೆ ಎಂದಾಕ್ಷಣ ಎಲ್ಲರನ್ನೂ ಅದೇ ಅನುಮಾನದಿಂದ ನೋಡಲು ಸಾಧ್ಯವೂಇಲ್ಲ’ ಎಂದು ಕೆಎಸ್ ಆರ್‌ಟಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ಏನು ಮಾಡಬಹುದು?: ಟಿಕೆಟ್ ರಹಿತ ಪ್ರಯಾಣಕ್ಕೆ ಕಡಿವಾಣ ಹಾಕಲು ನಿಗಮಗಳಲ್ಲಿ ಪ್ರತ್ಯೇಕ ವಿಭಾಗ ಇದೆ.ಅದೇ ಮಾದರಿಯಲ್ಲಿ ರ್‍ಯಾಂಡಮ್ ಆಗಿ ತಪಾಸಣೆ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು. ಸೀಮಿತ ಮಾರ್ಗಗಳಲ್ಲಿ ನಿಯಮಿತವಾಗಿ ಅಥವಾ ಪದೇ ಪದೆ ಪ್ರಯಾಣಿಸುವ ಸಿಬ್ಬಂದಿ ಮೇಲೆ ನಿಗಾ ಇಡಬೇಕು. ಅನುಮಾನ ಬಂದರೆ ತಕ್ಷಣ ಮೇಲಧಿಕಾರಿಗಳಿಗೆ ಮಾಹಿತಿ ನೀಡಬೇಕು. ಗಾಂಜಾ ಸಾಗಣೆ ಮತ್ತು ಮಾರಾಟ ಜಾಲದ “ಹಾಟ್‌ಸ್ಪಾಟ್’ಗಳನ್ನು ಗುರುತಿಸಿ, ಕಣ್ಗಾವಲು ಇಡಬೇಕು. ಮಾದಕವಸ್ತುಗಳ ನಿಯಂತ್ರಣ ಬ್ಯೂರೋದೊಂದಿಗೆ ಸಂಪರ್ಕ ಸಾಧಿಸಿ, ಆ ತಂಡದ ಸಹಯೋಗದಲ್ಲಿ ತಪಾಸಣೆ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ.
ನೌಕರರು ಅಮಾನತು: ಬಿಎಂಟಿಸಿ ಘಟಕ-17ರ ಚಾಲಕ ಕಂ ನಿರ್ವಾಹಕ ಶರಣಬಸಪ್ಪ ಕ್ಷತ್ರೀಯ ಹಾಗೂ ಘಟಕ-21ರ ಕಿರಿಯ ಸಹಾಯಕ ವಿಠಲ್ ಭಜಂತ್ರಿ ಗಾಂಜಾ ಮಾರಾಟ ಜಾಲದಲ್ಲಿ ಕೆಂಗೇರಿ ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಬೆನ್ನಲ್ಲೇ ಅಮಾನತುಗೊಳಿಸಿ ಶುಕ್ರವಾರ ಬಿಎಂಟಿಸಿ ಆದೇಶ ಹೊರಡಿಸಿದೆ. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ (ನಡತೆ ಮತ್ತು ಶಿಸ್ತು) ನಿಯಮಾವಳಿಗಳು1971ರ ನಿಯಮ19 (2)ರ ಪ್ರಕಾರ ಆಗಸ್ಟ್ 11ರಿಂದ ಪೂರ್ವಾನ್ವಯ ವಾಗುವಂತೆ ಅಮಾನತಿನಲ್ಲಿಡಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.