ವಾಡಿ: ಸರಿಯಾದ ರಸ್ತೆ ಸಂಪರ್ಕವೇ ಇಲ್ಲದ ಗುಡ್ಡ ಬೆಟ್ಟಗಳಲ್ಲಿ ನಿರ್ಮಿಸಲಾಗಿದ್ದ ಗಾಂಜಾ ತೋಟದ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಗಾಂಜಾ ಬೆಳೆ ವಶಕ್ಕೆ ಪಡೆದುಕೊಳ್ಳುವ ಮೂಲಕ ಭರ್ಜರಿ ಭೇಟೆಯಾಡಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ಯಾಗಾಪುರ ಗ್ರಾಮದ ಅರಣ್ಯದ ತೋಟವೊಂದರಲ್ಲಿ ಕಾನೂನಿನ ಕಣ್ತಪ್ಪಿಸಿ ಗುಪ್ತವಾಗಿ ಗಾಂಜಾ ಬೆಳೆಯಲಾಗುತ್ತಿದೆ ಎನ್ನುವ ಖಚಿತ ಮಾಹಿತಿ ಮೇರೆಗೆ ರವಿವಾರ ಮಧ್ಯಾಹ್ನ 2ಕಿ.ಮೀ ಕಾಡು ದಾರಿಯಲ್ಲಿ ಸಾಗಿ ಚಿತ್ತಾಪುರ ಸಿಪಿಐ ಶಂಕರಗೌಡ ಪಾಟೀಲ ತೋಟದ ಮೇಲೆ ದಾಳಿ ನಡೆಸಿದರು.
ತರಕಾರಿ ಬೆಳೆಗಳ ಸಾಲಿನಲ್ಲಿ ಅಕ್ರಮವಾಗಿ ಏಳೆಂಟು ಅಡಿ ಎತ್ತರದ ಗಾಂಜಾ ಬೆಳೆ ಬೆಳೆದಿತ್ತು. ತೋಟದಲ್ಲಿಯೇ ಮನೆ ಮಾಡಿಕೊಂಡು ವಾಸವಾಗಿರುವ ಒಂದೇ ಕುಟುಂಬದ ಸಹೋದರರಾದ ಮೋನಪ್ಪ ಮಲ್ಲಪ್ಪ ಬೇವಿನಹಳ್ಳಿ, ನೀಲಕಂಠ ಮಲ್ಲಪ್ಪ ಬೇವಿನಹಳ್ಳಿ ಹಾಗೂ ಚಂದ್ರಪ್ಪ ಮಲ್ಲಪ್ಪ ಬೇವಿನಹಳ್ಳಿ ಎನ್ನುವರಿಗೆ ಇದು ಸೇರಿದ್ದಾಗಿದೆ. ಬೆಳೆಯಲಾಗಿದ್ದ ಎಲ್ಲಾ ಗಾಂಜಾ ಗಿಡಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಗಳಾದ ಮೋನಪ್ಪ, ನೀಲಕಂಠ ಎನ್ನುವರನ್ನು ಬಂಧಿ ಸಿರುವ ಪೊಲೀಸರು, ತಲೆ ಮರೆಸಿಕೊಂಡಿರುವ ಇನ್ನೊಬ್ಬ ಆರೋಪಿ ಚಂದ್ರಪ್ಪ ಮಲ್ಲಪ್ಪ ಬೇವಿನಹಳ್ಳಿ ಎನ್ನುವನ ಬಂಧನಕ್ಕೆ ಬಲೆ ಬೀಸಿದ್ದಾರೆ. 74 ಕೆ.ಜಿ ಹೂಬಿಟ್ಟ ಹಸಿ ಗಾಂಜಾ ತಪ್ಪಲು ಗಿಡಗಳು ಹಾಗೂ 3 ಕೆ.ಜಿ ಒಣಗಿದ ನಿಕ್ಕಿ ಗಾಂಜಾ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾಡಿ ಠಾಣೆಯ ಪ್ರಭಾರಿ ಪಿಎಸ್‌ಐ ಬಾನುದಾಸ ಕ್ಷೀರಸಾಗರ, ಸಿಬ್ಬಂದಿಗಳಾದ ಮೇಲಗಿರಿ, ವೀರಭದ್ರಪ್ಪ, ಚಂದ್ರಶೇಖರ, ಹೊನ್ನಪ್ಪ , ವಿನೋದ ದಾಳಿ ನಡೆಸಿದ ತಂಡದಲ್ಲಿದ್ದರು.