ಬೆಂಗಳೂರು: ಮಹಾರಾಷ್ಟ್ರದಿಂದ ಬೆಂಗಳೂರಿಗೆ ಗಾಂಜಾ ಪೂರೈಕೆ ಹಾಗೂ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಕೈ ತುಂಬ ವೇತನ ಪಡೆಯುತ್ತಿದ್ದ ಎಂಜಿನಿಯರ್ ಸೇರಿದಂತೆ ಮೂವರನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಮೋಯಿನುದ್ದೀನ್ (25), ನಂದಿನಿ ಲೇಔಟ್‌ನ ನಿವಾಸಿ ಎಲೆಕ್ಟ್ರಿಕಲ್ ಎಂಜಿನಿಯರ್ ಉಸ್ಮಾನ್ (35) ಹಾಗೂ ಥವನೀಶ್ (40) ಬಂಧಿತರು. ಬಂಧಿತರಿಂದ 13 ಕೆ.ಜಿ. ಗಾಂಜಾ, 1 ಕೆ.ಜಿ. ಗಾಂಜಾ ಎಣ್ಣೆ, ಕೃತ್ಯಕ್ಕೆ ಬಳಸಿದ್ದ 2 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿ ಉಸ್ಮಾನ್ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿದ್ದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ತಿಂಗಳಿಗೆ 80 ಸಾವಿರ ರೂ. ವೇತನ ಪಡೆಯುತ್ತಿದ್ದ. ಉಸ್ಮಾನ್ ತಂದೆ ಸರ್ಕಾರದ ಉನ್ನತ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಉಸ್ಮಾನ್‌ಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಿ ಎಂಜಿನಿಯರಿಂಗ್ ಮಾಡಿಸಿದ್ದರು. ಕೆಲ ವರ್ಷಗಳ ಹಿಂದೆ ಕೋವಿಡ್‌ಗೆ ತುತ್ತಾಗಿ ಆತನ ಪಾಲಕರು ಹಾಗೂ ಸಹೋದರಿ ಮೃತಪಟ್ಟಿದ್ದರು. ಇತ್ತ ಉಸ್ಮಾನ್ ಒಂಟಿಯಾಗಿದ್ದ. ಮಾದಕ ವ್ಯಸನದ ದಾಸನಾಗಿದ್ದ ಉಸ್ಮಾನ್, ತಾನು ಸಂಪಾದಿಸಿದ ದುಡ್ಡನ್ನೆಲ್ಲ ಮಾದಕ ವ್ಯಸನ ಖರೀದಿ ಹಾಗೂ ಸೇವನೆಗಾಗಿ ದುಂದು ವೆಚ್ಚ ಮಾಡುತ್ತಿದ್ದ. ಈ ನಡುವೆ ಗಾಂಜಾ ಖರೀದಿಸುವಾಗ ಉಸ್ಮಾನ್‌ಗೆ ಆರೋಪಿ ಮಯುನುದ್ದೀನ್ ಹಾಗೂ ಥವನೀಶ್‌ನ ಪರಿಚಯವಾಗಿತ್ತು. ಮೊದಲೇ ಗಾಂಜಾ ದಂಧೆ ನಡೆಸು ತ್ತಿದ್ದ ಇವರೊಂದಿಗೆ ಉಸ್ಮಾನ್ ಸಹ ಕೈ ಜೋಡಿಸಿದ್ದ.
ಕೆ.ಜಿ. ಗಾಂಜಾ 2 ಸಾವಿರ ರೂ.ಗೆ ಖರೀದಿ: ಮಯುನುದ್ದೀನ್ ಮಹಾರಾಷ್ಟ್ರದ ಗಡಿ ಭಾಗದಲ್ಲಿ ಪೆಡ್ಲರ್‌ವೊಬ್ಬನಿಂದ ಗಾಂಜಾ ಖರೀದಿಸುತ್ತಿದ್ದ. ಕೆ.ಜಿ.ಗೆ ಕೇವಲ 2 ಸಾವಿರ ರೂ. ನಂತೆ 5 ರಿಂದ 10 ಕೆಜಿ ಖರೀದಿಸುತ್ತಿದ್ದ. ಬಳಿಕ ಮುಂಬೈನಿಂದ ಬೆಂಗಳೂರಿಗೆ ಬಸ್‌ನಲ್ಲಿ ಬಂದು ಉಸ್ಮಾನ್ ಹಾಗೂ ಥವನೀಶ್‌ಗೆ ಕೆ.ಜಿ.ಗೆ 8 ಸಾವಿರ ರೂ.ನಂತೆ ಮರಾಟ ಮಾಡುತ್ತಿದ್ದ. ಮಯುನುದ್ದೀನ್‌ನಿಂದ ಖರೀದಿಸಿದ ಗಾಂಜಾವನ್ನು ಒಂದೆಡೆ ಸಂಗ್ರಹಿಸುತ್ತಿದ್ದ ಇವರು ಸಣ್ಣ ಪ್ಯಾಕೇಟ್‌ಗಳಲ್ಲಿ 100 ಗ್ರಾಂ ಗಾಂಜಾ ತುಂಬುತ್ತಿ ದ್ದರು. ಒಂದು ಪ್ಯಾಕೆಟ್ ಅನ್ನು ಸಾವಿರ ರೂ.ಗೆ ಕಾಲೇಜು ವಿದ್ಯಾರ್ಥಿಗಳು, ಟೆಕ್ಕಿಗಳು ಸೇರಿದಂತೆ ತಮ್ಮ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದರು.
ಕಾರಿನಲ್ಲಿ ಗಾಂಜಾ ಮಾರಾಟ ಮಾಡಿ ಸಿಕ್ಕಿಬಿದ್ದರು: ನಂದಿನಿ ಲೇಔಟ್ ಠಾಣಾ ವ್ಯಾಪ್ತಿ ಬಿಎಚ್ ಇಎಲ್ ಪಾರ್ಕ್ ಬಳಿ ತಮ್ಮ ಕಾರಿನಲ್ಲೇ ಜೂ.21ರಂದು ಗಾಂಜಾ ಪ್ಯಾಕೆಟ್ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ನಂದಿನಿ ಲೇಔಟ್ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಕೂಡಲೇ ಕಾರ್ಯಾಚರಣೆಗಿಳಿದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಮಹಾರಾಷ್ಟ್ರದಿಂದ ಇವರಿಗೆ ಗಾಂಜಾ ಪೂರೈಸುತ್ತಿದ್ದ ಮಯುನುದ್ದೀನ್ ಬಗ್ಗೆ ಮಾಹಿತಿ ಕೊಟ್ಟಿದ್ದರು. ಈ ಮಾಹಿತಿ ಆಧರಿಸಿ ಆತನನ್ನೂ ಪೊಲೀಸರು ಬಂಧಿಸಿದ್ದಾರೆ.