ಬಾಗಲಕೋಟೆ: ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಅತ್ಯಂತ ಹಿಂದುಳಿದ ಗಾಣಿಗ ಸಮಾಜವನ್ನು ಪರಿಶಿಷ್ಟ ಪಂಗಡ ಮೀಸಲಾತಿ ಪಟ್ಟಿಗೆ ಸೇರಿಸಬೇಕು. ಪ್ರಸಕ್ತ ಬಜೆಟ್‌ನಲ್ಲಿ ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ 1 ಸಾವಿರ ಕೋಟಿ ರೂ. ಅನುದಾನ ನೀಡಬೇಕು. ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕೊಲ್ಹಾರ ದಿಗಂಬರೇಶ್ವರ ಮಠದ ಜಗದ್ಗುರು ಯೋಗಿ ಶ್ರೀ ಕಲ್ಲಿನಾಥ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗಾಣಿಗ ಸಮಾಜ 85 ಲಕ್ಷಕ್ಕೂ ಅಧಿಕವಾಗಿದೆ. ಬಹುಸಂಖ್ಯಾತರಾದರೂ ಪ್ರತಿಯೊಂದು ರಂಗದಲ್ಲೂ ಹಿಂದುಳಿದಿದೆ. ಇಂದಿಗೂ ಎಷ್ಟೋ ಜನರು, ಬೇರೊಬ್ಬರ ಹೊಲಕ್ಕೆ ಕೃಷಿ ಕೂಲಿ ಕಾರ್ಮಿಕರಾಗಿ ದುಡಿದು ಬದುಕು ಸಾಗಿಸುತ್ತಿದ್ದಾರೆ ಎಂದರು.
ಸರ್ಕಾರದ ಗಮನಕ್ಕೆ: ರಾಜ್ಯದಲ್ಲಿ ಬಹುಸಂಖ್ಯಾತರಾಗಿರುವ ಗಾಣಿಗ ಸಮಾಜ ಬಾಂಧವರು, ಎಲ್ಲ ಸಮಾಜಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿವರು. ರಾಜ್ಯದ ಹಲವು ವಿಧಾನಸಭೆ ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿದ್ದಾರೆ. ಆದರೂ, ಸಮಾಜಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯುತ್ತಿಲ್ಲ. ಈಗಾಗಲೇ ಫೆ. 4ರಂದು ರಾಜ್ಯದ ಮುಖ್ಯಮಂತ್ರಿಯಡಿಯೂರಪ್ಪ, ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವ ಮುರುಗೇಶ ನಿರಾಣಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಪ್ರಸಕ್ತ ಬಜೆಟ್‌ನಲ್ಲಿ ನಮ್ಮ ಬೇಡಿಕೆ ಈಡೇರುವ ವಿಶ್ವಾಸವಿದೆ ಎಂದು ಹೇಳಿದರು.
ಆಧುನಿಕ ಯುಗಕ್ಕೆ ಕುಲಕಸಬು ಬಲಿ: ಹಿಂದೆ ಗಾಣದಿಂದಲೇ ನಮ್ಮ ಸಮಾಜದ ಎಷ್ಟೇ ಕುಟುಂಬಗಳು ಬದುಕು ನಡೆಸುತ್ತಿದ್ದವು. ಆದರೆ, ಇಂದಿನ ಆಧುನಿಕ ಯುಗ, ಆ ಕುಲಕಸಬನ್ನೂ ಬಲಿ ಪಡೆದಿದೆ. ಹಿಂದೆ ಗಾಣ ಹೊಂದಿದವರು, ಇಂದು ಕೃಷಿ ಕೂಲಿ ಕಾರ್ಮಿಕರಾಗಿ ದುಡಿಯಲು ಹೋಗುತ್ತಿದ್ದಾರೆ. ಸ್ವಂತ ಹೊಲ ಇಲ್ಲದೇ ಕೂಲಿ ಮಾಡಿ ಬದುಕುವುದು ಸಮಾಜಕ್ಕೆ ಅನಿವಾರ್ಯವಾಗಿದೆ. ಹೀಗಾಗಿ ಸಮಾಜವನ್ನು ಎಸ್.ಟಿ ವರ್ಗಕ್ಕೆ ಸೇರಿಸಿ, ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಹೋರಾಟದ ರೂಪರೇಷೆ: ಮುಖ್ಯಮಂತ್ರಿಗಳು ನಮ್ಮ ಬೇಡಿಕೆ ಈಡೇರಿಸುವ ವಿಶ್ವಾಸವಿದೆ. ಇಲ್ಲದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ, ಇಲ್ಲವೇ ಪಾದಯಾತ್ರೆ ನಡೆಸುವ ಕುರಿತು ಅಥವಾ ಬೇರೆ ರೂಪದ ಉಗ್ರ ಹೋರಾಟ ನಡೆಸುವ ಕುರಿತು ಸಮಾಜ ಬಾಂಧವರು ಹಾಗೂ ಸಮಾಜದ ಎಲ್ಲ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ :ಲಾರಿ-ಆಟೋ ರಿಕ್ಷಾ ಚಾಲಕರ ಸಂಘದಿಂದ ಪ್ರತಿಭಟನೆ
ಸಮಾಜದ ಎಲ್ಲ ಜನಪ್ರತಿನಿಧಿಗಳು ಈ ಹೋರಾಟಕ್ಕೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ. ಕಾರಣ, ನಾವು ಎಲ್ಲರನ್ನೂ ತಾಯಿ ಎಂದು ಕರೆಯಬಹುದು. ಆದರೆ, ಸ್ವಂತ ತಾಯಿಯಂತೆ ಎಲ್ಲರೂ ಆಗಲ್ಲ. ಜನಪ್ರತಿನಿಧಿಗಳು ಎಲ್ಲ ಸಮಾಜದಿಂದಲೇ ಬೆಳೆದಿರುತ್ತಾರೆ. ಎಲ್ಲ ಸಮಾಜವನ್ನು ಗೌರವಿಸಿ, ಅವರ ಕೆಲಸ ಕಾರ್ಯಗಳನ್ನೂ ಮಾಡಬೇಕು. ಆದರೆ, ಸ್ವಂತ ತಾಯಿಯ ವಿಷಯದಲ್ಲಿ ಅವರೂ ಹೋರಾಟಕ್ಕೆ ಬರಲಿದ್ದಾರೆ ಎಂದು ಹೇಳಿದರು.
ಬೀಳಗಿ ಎಪಿಎಂಸಿ ಮಾಜಿ ಅಧ್ಯಕ್ಷ ರಾಮಣ್ಣ ಕಾಳಪ್ಪಗೋಳ, ಗಾಣಿಗ ಸಮಾಜದ ಮುಖಂಡ ಮಲ್ಲೇಶ ಎಂ. ಜಾಲಿ ಉಪಸ್ಥಿತರಿದ್ದರು.