Advertisement

ಮೀಸಲಾತಿ ಮೂಲ ಸ್ವರೂಪದ ತಿಳಿವಳಿಕೆ ಅಗತ್ಯ

04:01 PM Feb 15, 2021 | Team Udayavani |

ಬಾಗಲಕೋಟೆ: ಮೀಸಲಾತಿಗಾಗಿ ಇಂದು ಹೋರಾಟ ನಡೆಯುತ್ತಿವೆ. ಆಯಾ ಸಮಾಜ ಬಾಂಧವರು ತಮ್ಮ ಹಕ್ಕು ಕೇಳಲು ಹೋರಾಟ ನಡೆಸುವುದು ಪ್ರಜಾಪ್ರಭುತ್ವ. ಆದರೆ, ಹೋರಾಟದಿಂದಲೇ ಮೀಸಲಾತಿ ಸಿಗುತ್ತದೆ ಎಂಬ ವಿಶ್ವಾಸ ನನಗಿಲ್ಲ. ಮುಖ್ಯವಾಗಿ ಮೀಸಲಾತಿಯ ಮೂಲಸ್ವರೂಪವನ್ನು ಪ್ರತಿಯೊಬ್ಬರೂ ತಿಳಿಯಬೇಕಾದ ಅಗತ್ಯವಿದೆ ಎಂದು ಗಾಣಿಗ ಗುರು ಪೀಠದ ಜಗದ್ಗುರು ಡಾ|ಜಯಬಸವ ಕುಮಾರ ಸ್ವಾಮೀಜಿ ಹೇಳಿದರು.

Advertisement

ನವನಗರದ ಜ್ಯೋತಿ ಬ್ಯಾಂಕ್‌ ಸಭಾ ಭವನದಲ್ಲಿಬಾಗಲಕೋಟೆ ಜಿಲ್ಲಾ ಗಾಣಿಗ ಸಮಾಜದಿಂದ ರವಿವಾರ ಹಮ್ಮಿಕೊಂಡಿದ್ದ ಗಾಣಿಗ ಸಮಾಜದ ಚಿಂತನ-ಮಂಥನ ಸಭೆಯಲ್ಲಿ ಅವರು ಮಾತನಾಡಿದರು.

ದೇಶದಲ್ಲಿ ಪ್ರತಿಯೊಬ್ಬರಿಗೆ ಚರಿತ್ರೆ, ಚಾರಿತ್ರ್ಯ ಇರುತ್ತದೆ. ಗಾಣಿಗ ಸಮಾಜಕ್ಕೆ ಇವರೆಡೂ ಇವೆ.  ಚರಿತ್ರೆಯನ್ನು ನಾವು ಬರೆಸಬಹುದು. ಆದರೆ, ಚಾರಿತ್ರ್ಯ ಬರೆಸಲು ಸಾಧ್ಯವಿಲ್ಲ. ನಮ್ಮ ನಡೆ, ನುಡಿ-ಸಂಸ್ಕೃತಿಯಿಂದ ಚಾರಿತ್ರ್ಯ ದೊರೆಯುತ್ತದೆ. ಗಾಣಿಗ ಸಮಾಜ, ಬೇರೆ ಸಮಾಜಗಳೊಂದಿಗೆ ಅನ್ಯೋನ್ಯವಾಗಿದೆ. ಅವರ ಏಳ್ಗೆಯಲ್ಲಿ ಖುಷಿ ಕಾಣುವ ಸ್ವಭಾವ ನಮ್ಮ ಸಮಾಜ ಹೊಂದಿದೆ ಎಂದರು.

ಮೀಸಲಾತಿ ಮೂಲ ಸ್ವರೂಪದ ತಿಳಿವಳಿಕೆ ನಮಗೆಲ್ಲ ಅಗತ್ಯವಾಗಿದೆ. ಎಲ್ಲವೂ ಹೋರಾಟದಿಂದ ಸಾಧ್ಯವಿಲ್ಲ. ಗಾಣಿಗ ಸಮಾಜದ ಸ್ಥಿತಿಗತಿ ಅಧ್ಯಯನ ಮಾಡಿದ ಬಳಿಕವೇ ನಮಗೆ 2ಎ ಮೀಸಲಾತಿ ದೊರೆತಿದೆ. ಇದಕ್ಕಾಗಿ ಹಲವರ ಶ್ರಮವೂ ಇದೆ. ಮೀಸಲಾತಿ ಕೊಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಕೇಂದ್ರಕ್ಕೆ ಶಿಫಾರಸ್ಸು ಮಾಡುವ ಅಧಿಕಾರ ಮಾತ್ರ ರಾಜ್ಯ ಹೊಂದಿದೆ. ಈ ವರೆಗೆ ರಾಜ್ಯದಿಂದ ಶಿಫಾರಸುಗೊಂಡ ಸಮಾಜಗಳಿಗೆ ಮೀಸಲಾತಿ ವರ್ಗೀಕರಣ ಆಗಿದೆಯೇ ? ಹೋರಾಟಕ್ಕೆ ಫಲ ಸಿಕ್ಕಿದೆಯೇ ಎಂಬುದನ್ನೂ ನಾವು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಗಾಣಿಗ ಸಮಾಜ ಯಾರಿಗೂ ನೋವುಂಟು ಮಾಡುವ ಸಮಾಜವಲ್ಲ. ಬೇರೆಯವರನ್ನು ಬೆಳೆಸುವ ಉದಾರ ಗುಣ ಹೊಂದಿರುವ ಸಮಾಜ. ಸಾತ್ವಿಕ ಸಂಘಟನೆ ನಮ್ಮಲ್ಲಿ ಆಗಬೇಕಿದೆ. ಪಂಚಮಸಾಲಿ ಸಮಾಜ, ಕುರುಬ  ಸಮಾಜ ಪಾದಯಾತ್ರೆ-ಹೋರಾಟ ನಡೆಸಿವೆ. ಅದು ಆ ಸಮಾಜದ ಹಕ್ಕೋತ್ತಾಯ. ಅವರಿಗೆ ಯಶಸ್ಸು ಸಿಗಲಿ. ಆದರೆ, ನಾವೂ ಹೋರಾಟ ಮಾಡಬೇಕೆಂಬ ನಿರ್ಧಾರ ಬೇಡ. ನಮ್ಮ ಹೋರಾಟದ ಗುರಿ ಏನು ? ನಮ್ಮ ಬೇಡಿಕೆ ಹೇಗಿರಬೇಕು ಎಂಬುದು ಅರ್ಥ ಮಾಡಿಕೊಳ್ಳಬೇಕು. ಈಗಿರುವ 2ಎ ಮೀಸಲಾತಿ ಪ್ರಮಾಣ ಪತ್ರವನ್ನೇ ಕೆಲವು ಜಿಲ್ಲೆಗಳಲ್ಲಿ ನಮ್ಮ ಸಮಾಜಕ್ಕೆ ಕೊಡುತ್ತಿಲ್ಲ. ಈ ಕುರಿತು ಹೋರಾಟ ಮಾಡಬೇಕಿದೆ. ಎಸ್‌ಟಿ ವರ್ಗಕ್ಕೆ ಸೇರಿಸಿ ಎಂಬ ಬೇಡಿಕೆ ಇಟ್ಟರೆ ಅದು ಸಾಧ್ಯವೇ ? ನಮ್ಮ ಸಮಾಜದ ಚರಿತ್ರೆ ಏನು ಎಂಬುದು ತಿಳಿದುಕೊಳ್ಳಬೇಕು ಎಂದು ಹೇಳಿದರು.

Advertisement

ಸಿದ್ದೇಶ್ವರ ಶ್ರೀ; ಜಯದೇವ ಶ್ರೀಗಳ ಚಿತ್ರವಿಡಿ: ವಿಜಯಪುರ ಜ್ಞಾನ ಯೋಗಾಶ್ರಮದ ನಡೆದಾಡುವ ದೇವರು ಶ್ರೀ ಸಿದ್ದೇಶ್ವರ ಸ್ವಾಮೀಜಿ, ಸಮಾಜದ ಜಗದ್ಗುರು ಲಿಂ| ಜಯದೇವ ಜಗದ್ಗುರು ನಮ್ಮ ಹೆಮ್ಮೆ. ಅವರನ್ನು ಕೇವಲ ನಮ್ಮ ಸಮಾಜದವರು ಎಂದು ಹೇಳುವುದು ಬೇಡ. ಅವರು ಇಡೀ ದೇಶದ ಎಲ್ಲ ಸಮಾಜದವರಿಗೆ ದೇವರ ಸಮಾನ. ನಾವೆಲ್ಲ ಅವರಿಬ್ಬರ ಫೋಟೋ ಇಟ್ಟು ಪೂಜೆ ಮಾಡೋಣ. ಸಂಸ್ಕಾರಯುತವಾಗಿ ಸಂಘಟನೆ ಮಾಡೋಣ ಎಂದು ತಿಳಿಸಿದರು.

ಗುರುಪೀಠಕ್ಕೆ ಒಂದು ರೂಪಾಯಿ ಬಂದಿಲ್ಲ: ಪ್ರಸ್ತುತ ಹಾಗೂ ಹಿಂದಿನ ಬಹುತೇಕ ಸರ್ಕಾರಗಳು, ಎಲ್ಲ ಗುರುಪೀಠಗಳಿಗೆ ಅನುದಾನ ನೀಡುತ್ತ ಬಂದಿವೆ. ಗಾಣಿಗ ಸಮಾಜದ ಪೀಠಕ್ಕೆ ಈ ವರೆಗೆ ಸರ್ಕಾರದಿಂದ ಒಂದು ರೂಪಾಯಿ ಬಂದಿಲ್ಲ. ಎಲ್ಲವನ್ನೂ ಸಮಾಜದಿಂದ ದೇಣಿಗೆ ಪಡೆದು ಮಾಡಲು ಆಗಲ್ಲ. ಸಮಾಜದ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಆರೋಗ್ಯ ದೊರೆಯಬೇಕು. ಇದಕ್ಕೆ ಸರ್ಕಾರದ ನೆರವು ಅಗತ್ಯವಾಗಿ ಬೇಕಾಗುತ್ತದೆ. ನಮ್ಮ ಪೀಠಕ್ಕೂ ನೆರವು ಪಡೆಯಲು ಚಿಂತಿಸೋಣ ಎಂದರು.

ಬಿಟಿಡಿಎದಿಂದ 10 ಎಕರೆ ಬೇಡಿಕೆ: ಅಧ್ಯಕ್ಷತೆ ವಹಿಸಿದ್ದ ಗಾಣಿಗ ಸಮಾಜದ ಜಿಲ್ಲಾ ಅಧ್ಯಕ್ಷ ಅಶೋಕ ಲಾಗಲೋಟಿ ಮಾತನಾಡಿ, ನಗರದ ಸಂತ್ರಸ್ತರಿಗೆ ಪುನರ್‌ವಸತಿ ಕಲ್ಪಿಸಲು ನವನಗರ ಯೂನಿಟ್‌ 1ರಿಂದ 3ರ ವರೆಗೆ ನಿರ್ಮಾಣಕ್ಕೆ ನಮ್ಮ ಸಮಾಜ ಬಾಂಧವರು ಸುಮಾರು 3 ಸಾವಿರ ಎಕರೆ ಭೂಮಿ ಕಳೆದುಕೊಂಡಿದ್ದಾರೆ. ಕೋಟಿ ಕೊಟ್ಟರೂ ಅಂತಹ ಭೂಮಿ ಸಿಗುವುದಿಲ್ಲ. ಆದರೆ, ಸಮಾಜಕ್ಕೆ 2 ಎಕರೆ ಭೂಮಿಯೂ ನವನಗರದಲ್ಲಿ ಇಲ್ಲ. ಬಿಟಿಡಿಎದಿಂದ 10 ಎಕರೆ ಭೂಮಿ ನೀಡಬೇಕು. ಈ ನಿಟ್ಟಿನಲ್ಲಿ ಪ್ರಯತ್ನಿಸೋಣ. ಎಸ್‌.ಟಿ ಮೀಸಲಾತಿ ಹೋರಾಟ ನಮಗೆ ಬೇಡ. ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕು. ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ ಶಾಲೆ, ವಸತಿ ನಿಲಯ ಸ್ಥಾಪಿಸಲು ಚಿಂತನೆ ಮಾಡೋಣ ಎಂದು ಹೇಳಿದರು.

ಸಮಾಜದ ಪ್ರಮುಖ, ಬಿಟಿಡಿಎ ಸದಸ್ಯ ಕುಮಾರ ಯಳ್ಳಿಗುತ್ತಿ ಮಾತನಾಡಿ, ಸಮಾಜದ ಯಾವುದೇ ಕಾರ್ಯಗಳಿಗೆ ಸದಾ ಜತೆಗಿರುತ್ತೇವೆ. ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸುವ ವೇಳೆ 1989ರಲ್ಲಿ ನಮ್ಮ ತಂದೆ ದಿ. ಜಿ.ಜಿ. ಯಳ್ಳಿಗುತ್ತಿ ಕೂಡ ಶಾಸಕರಾಗಿದ್ದರು.

ಅವರೊಂದಿಗೆ ಈಗಿನ ಸಂಸದರಾದ ಪಿ.ಸಿ. ಗದ್ದಿಗೌಡರ ಕೂಡ ಆಗ ವಿಧಾನಪರಿಷತ್‌ ಸದಸ್ಯರಾಗಿದ್ದರು. ಅವರೆಲ್ಲರ ಪ್ರಯತ್ನದಿಂದ 2ಎ ಮೀಸಲಾತಿಯಡಿ ಬಂದಿದ್ದೇವೆ ಎಂದರು.

ಬಾಗಲಕೋಟೆಯ ನವನಗರದಲ್ಲಿ ವಿವಿಧ ಸಮಾಜಗಳಿಗೆ 5ರಿಂದ 10 ಎಕರೆ ಭೂಮಿ ಹಂಚಿಕೆ ಮಾಡಲಾಗಿದೆ. ಇದರಿಂದ ಆ ಸಮಾಜಗಳ ಕಾರ್ಯಕ್ರಮಕ್ಕೆ, ಸಂಘಟನೆಗೆ ಅನುಕೂಲವಾಗಿದೆ. ನಮ್ಮ ಸಮಾಜಕ್ಕೂ ಗರಿಷ್ಠ ಭೂಮಿ ನೀಡಬೇಕು ಎಂದು ನಾವೆಲ್ಲ ಮನವಿ ಮಾಡೋಣ. ಈ ನಿಟ್ಟಿನಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಅಖೀಲ ಭಾರತ ಗಾಣಿಗ ಸಮಾಜದ ಅಧ್ಯಕ್ಷ ಗುರಣ್ಣ ಗೋಡಿ, ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಸಮಾಜದ ಮುಖಂಡರಾದ ಬಸವಪ್ರಭು ಸರನಾಡಗೌಡ, ಪ್ರಕಾಶ ಅಂತರಗೊಂಡ, ಶ್ರೀಶೈಲ ತೆಗ್ಗಿ, ನೀಲಪ್ಪ ಗಾಣಗೇರ ಮಾತನಾಡಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗಣ್ಣ ಗೋಡಿ, ಸಮಾಜ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ಕವಿತಾ ಏಳೆಮ್ಮಿ, ಬಾಗಲಕೋಟೆ ತಾಲೂಕು ಅಧ್ಯಕ್ಷೆ ನೀಲಮ್ಮ ಇಟಗಿ, ವಿವಿಧ ತಾಲೂಕು ಅಧ್ಯಕ್ಷರಾದ ಹುನಗುಂದದ ನಿಂಗಪ್ಪ ಅಮರಾವತಿ, ಬೀಳಗಿಯ ಪ್ರಕಾಶ ಅಂತರಗೊಂಡ, ಮುಧೋಳದ ಲಕ್ಷ್ಮಣ ಚಿನ್ನನ್ನವರ, ಜಮಖಂಡಿಯ ಕೆ.ಕೆ. ತುಪ್ಪದ, ಬಾಗಲಕೋಟೆಯ ಮಂಜು ಕಾಜೂರ, ನೌಕರರ ಸಂಘದ  ಅಧ್ಯಕ್ಷ ಶಿವಾನಂದ ಗಾಣಗೇರ, ಪ್ರಮುಖರಾದ ಸಂತೋಷ ಹೊಕ್ರಾಣಿ, ದುಂಡಪ್ರ ಏಳೆಮ್ಮಿ, ಪರಶುರಾಮ ಛಬ್ಬಿ, ವಿಠ್ಠಲ ಬಾಗೇವಾಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next