ಪುಣೆ: ಪುಣೆಯಲ್ಲಿ ದರೋಡೆಕೋರ ಶರದ್ ಮೊಹೋಲ್ ಅವರನ್ನು ಅವರದೇ ಗ್ಯಾಂಗ್‌ನ ಕೆಲವು ಸದಸ್ಯರು ಶುಕ್ರವಾರ ಮಧ್ಯಾಹ್ನ ಗುಂಡಿಟ್ಟು ಕೊಂದಿದ್ದಾರೆ.
ಘಟನೆಗೆ ಸಂಬಂಧಿಸಿ ಪುಣೆ-ಸತಾರಾ ರಸ್ತೆಯಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿದೆ ಮತ್ತು ಅವರಿಂದ ಮೂರು ಪಿಸ್ತೂಲ್‌ಗಳು, ಸೇರಿದಂತೆ ಹಲವು ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ 1:30 ರ ಸುಮಾರಿಗೆ ಕೊತ್ರುಡ್‌ನ ಸುತಾರ್‌ದಾರ ಪ್ರದೇಶದಲ್ಲಿ ಪಾಯಿಂಟ್-ಬ್ಲಾಂಕ್ ರೇಂಜ್‌ನಲ್ಲಿ ಮೂರರಿಂದ ನಾಲ್ಕು ದುಷ್ಕರ್ಮಿಗಳು 40 ವರ್ಷದ ಮೊಹೋಲ್ ಮೇಲೆ ಗುಂಡಿನ ದಾಳಿ ನಡೆಸಿದ್ದರು, ಒಂದು ಗುಂಡು ಅವರ ಎದೆಯನ್ನು ಚುಚ್ಚಿತು ಮತ್ತು ಎರಡು ಗುಂಡುಗಳು ಬಲ ಭುಜವನ್ನು ಪ್ರವೇಶಿಸಿದವು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕೊತ್ರೂಡ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದರು.
ಮೊಹೋಲ್ ಅವರ ವಿರುದ್ಧ ಕೊಲೆ ಮತ್ತು ಡಕಾಯಿತಿ ಸೇರಿದಂತೆ ಹಲವಾರು ಪ್ರಕರಣಗಳು ದಾಖಲಾಗಿವೆ. ಇಲ್ಲಿನ ಯರವಾಡ ಜೈಲಿನಲ್ಲಿ ಶಂಕಿತ ಇಂಡಿಯನ್ ಮುಜಾಹಿದ್ದೀನ್ ಕಾರ್ಯಕರ್ತ ಮೊಹಮ್ಮದ್ ಖತೀಲ್ ಸಿದ್ದಿಕಿ ಹತ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಅವರು ಆರೋಪಿಯಾಗಿದ್ದರು, ಬಳಿಕ ಆರೋಪದಿಂದ ಖುಲಾಸೆಗೊಂಡಿದ್ದರು.
ಆತನ ಬಳಿಯಿದ್ದ ಜಮೀನು ಮತ್ತು ಹಣದ ವಿವಾದ ಆತನ ಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಮತ್ತು ಗೃಹ ಸಚಿವ ದೇವೇಂದ್ರ ಫಡ್ನವೀಸ್, ಇದು ಗ್ಯಾಂಗ್ ವಾರ್ ಅಲ್ಲ, ಮೊಹೋಲ್ ಅವರನ್ನು ಅವರ ಸಹಚರರೇ ಕೊಂದಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Ration Scam: ತೃಣಮೂಲ ಕಾಂಗ್ರೆಸ್ ನಾಯಕ ಶಂಕರ್ ಆಧ್ಯಾ ಬಂಧನ, ಸ್ಥಳೀಯರಿಂದ ಪ್ರತಿಭಟನೆ