Advertisement

ರಾಜ್ಯ ಕಾಂಗ್ರೆಸ್‌ ಭ್ರಷ್ಟಾಚಾರದ ಗಂಗೋತ್ರಿ: ಸಿಎಂ ಬೊಮ್ಮಾಯಿ

11:30 PM Dec 07, 2022 | Team Udayavani |

ಕುಣಿಗಲ್‌: ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್‌ ಪಕ್ಷವಾಗಿದೆ ಎಂದು ಗಂಭೀರ ಆರೋಪ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಲೋಕಾಯುಕ್ತ ಸಂಸ್ಥೆ ಮುಚ್ಚಿ ಎಸಿಬಿ ರಚನೆ ಮಾಡಿರುವುದೇ ಇದಕ್ಕೆ ಸಾಕ್ಷಿ ಎಂದು ಕಾಂಗ್ರೆಸ್‌ ನಾಯಕರ ವಿರುದ್ದ ತೀವ್ರ ವಾಗ್ಧಾಳಿ ನಡೆಸಿದರು.

Advertisement

ಪಟ್ಟಣದ ಜಿಕೆಬಿಎಂಎಸ್‌ ಶಾಲಾ ಅವರಣದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಜನ ಸಂಕಲ್ಪ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಸಚಿವರ ಮೇಲೆ ಸಣ್ಣ ನೀರಾವರಿ ಇಲಾಖೆ, ಬಿಡಿಎ, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನ ಹಾಸಿಗೆ ದಿಂಬು ಖರೀದಿ ಸೇರಿದಂತೆ 50ಕ್ಕೂ ಹೆಚ್ಚು ಭ್ರಷ್ಟಾಚಾರ ಪ್ರಕರಣಗಳ ದೂರು ಇತ್ತು. ಅದನ್ನು ಮುಚ್ಚಿ ಹಾಕಲು ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಿ ಎಸಿಬಿ ರಚನೆ ಮಾಡಿದರು. ಎಲ್ಲ ಪ್ರಕರಣಗಳಿಗೆ ಬಿ ರಿಪೋರ್ಟ್‌ ಹಾಕಿಸಿ ನಾವು ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂದು ಹೇಳುತ್ತಿದ್ದಾರೆ.ಲೋಕಾಯುಕ್ತ ಮುಚ್ಚಿದ್ದೇ ಭ್ರಷ್ಟಾಚಾರ ನಡೆದಿರುವುದಕ್ಕೆ ಸಾಕ್ಷಿಯಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಏಳು ಲಕ್ಷ ಎಕರೆಗೆ ನೀರಾವರಿ
ಬಿಜೆಪಿ ಐದು ವರ್ಷದ ಆಡಳಿತ ಅವಧಿಯಲ್ಲಿ 32 ಸಾವಿರ ಕೋಟಿ ಖರ್ಚು ಮಾಡಿ 7 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದೆ. ಆದರೆ ಕಾಂಗ್ರೆಸ್‌ನ ಐದು ವರ್ಷದ ಆಡಳಿತ ಅವಧಿಯಲ್ಲಿ 54 ಸಾವಿರ ಕೋಟಿ ಖರ್ಚು ಮಾಡಿ ಕೇವಲ 2 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಮಾಡಿದೆ. ಉಳಿದ ಹಣ ಎಲ್ಲಿಗೆ, ಯಾರ ಕಿಸಿಗೆ ಹೋಯಿತು ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ನೆಲಕಚ್ಚುವುದು ಖಚಿತ
ಕಾಂಗ್ರೆಸ್‌ ರಾಜ್ಯದಲ್ಲಿ ಅತಿ ಹೆಚ್ಚು ಆಡಳಿತ ನಡೆಸಿದ ಪಕ್ಷ. ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಜನರನ್ನು ದಾರಿ ತಪ್ಪಿಸುವಂತ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ಬಿಜೆಪಿಗೆ ಶಕ್ತಿ ಬಂದ ಮೇಲೆ ಇಡೀ ದೇಶದಲ್ಲಿ ಕಾಂಗ್ರೆಸ್‌ ನೆಲೆ ಕಳೆದುಕೊಂಡಿದೆ, ಅದೇ ರೀತಿ ಈ ಬಾರಿ ಕರ್ನಾಟಕದಲ್ಲಿ ಸಂಪೂರ್ಣವಾಗಿ ನೆಲ ಕಚ್ಚುವುದು ನೂರಕ್ಕೆ ನೂರು ಸತ್ಯ ಎಂದು ಹೇಳಿದರು.

ತಪ್ಪಿದ ಅನಾಹುತ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹಾಕಲು ಸಿದ್ಧಪಡಿಸಲಾಗಿದ್ದ ಬೃಹತ್‌ ಸೇಬಿನ ಹಾರವನ್ನು ಜೆಸಿಬಿಗೆ ನೇತು ಹಾಕಲಾಗಿತ್ತು, ಮುಖ್ಯಮಂತ್ರಿಗಳು ವೇದಿಕೆಗೆ ಬರುತ್ತಿದಂತೆ ಸೇಬಿನ ಹಾರ ತುಂಡಾಗಿ ಕೆಳಗೆ ಬಿದ್ದ ಕಾರಣ ಅನಾಹುತವೊಂದು ತಪ್ಪಿದಂತಾಯಿತು.

Advertisement

ಕಾರ್ಯಕ್ರಮದಲ್ಲಿ ಸಚಿವರಾದ ಆರಗ ಜ್ಞಾನೇಂದ್ರ, ಗೋವಿಂದ ಕಾರಜೋಳ, ಬಿ.ಸಿ.ನಾಗೇಶ್‌, ಗೋಪಾಲಯ್ಯ, ಮಾಜಿ ಸಚಿವ ಸಿ.ಪಿ. ಯೋಗೇಶ್ವರ್‌, ಶಾಸಕ ಜ್ಯೋತಿ ಗಣೇಶ್‌ ಸೇರಿ ಹಲವರಿದ್ದರು.

ಹೈದರಾಬಾದ್‌ ಕರ್ನಾಟಕ, ಉತ್ತರ ಕರ್ನಾಟಕ, ಬೆಳಗಾವಿ ಜಿಲ್ಲೆಗಳಲ್ಲಿ ಜನಸಂಕಲ್ಪ ಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಜನತೆ ಬೆಂಬಲ ಕೊಡುತ್ತಿರುವುದನ್ನು ನೋಡಿದರೆ ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ನಮ್ಮ ಸರಕಾರ ಮತ್ತೆ ಅಧಿಕಾರಕ್ಕೆ ಬರುವ ಸಂಪೂರ್ಣ ವಿಶ್ವಾಸ ಇದೆ.
– ಬಸವರಾಜ ಬೊಮ್ಮಾಯಿ, ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next