ಗಂಗಾವತಿ: ಉತ್ತರ ಭಾರತದಿಂದ ನಿತ್ಯವೂ ಭಕ್ತರು ಹನುಮಂತನ ಜನ್ಮಸ್ಥಳ ಅಂಜನಾದ್ರಿಗೆ ಬರುತ್ತಾರೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆ ಗಂಗಾವತಿ ನಡುವೆ ರೈಲ್ವೇ ಸಂಚಾರ ಅತ್ಯಗತ್ಯವಾಗಿದೆ ಶೀಘ್ರವೇ ಗಂಗಾವತಿ ಯಿಂದ ನೇರವಾಗಿ ಅಯೋಧ್ಯೆ ಕ್ಷೇತ್ರಕ್ಕೆ ರೈಲು ಸಂಚಾರ ಆರಂಭಿಸಲು ಪತ್ರ ಬರೆಯಲಾಗಿದ್ದು ರೈಲ್ವೇ ಸಚಿವರು ಸ್ಪಂದಿಸಿದ್ದಾರೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು.
ಅವರು ನಗರದ ರೈಲ್ವೇ ನಿಲ್ದಾಣದಲ್ಲಿ ಟಿಕೆಟ್ ಬುಕ್ಕಿಂಗ್ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ಕಳೆದ 9 ವರ್ಷಗಳಿಂದ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ಧಿಯ ಪರ್ವ ಆರಂಭಿಸಿದ್ದಾರೆ. ಗಂಗಾವತಿ,ಕಾರಟಗಿ ವರೆಗೆ ರೈಲು ಸಂಚಾರ ಮುಕ್ತವಾಗಿದ್ದು ಜನವರಿ ಒಳಗೆ ಸಿಂಧನೂರು ವರೆಗೆ ರೈಲು ಸಂಚಾರ ಆರಂಭವಾಗಲಿದೆ. ಹುಲಿಗಿ, ಹಿಟ್ನಾಳ ಸೇರಿ ರೈಲ್ವೇ ಸೇತುವೆಗಳ ನಿರ್ಮಾಣಕ್ಕೆ ಕೇಂದ್ರ ಸರಕಾರ ಈಗಾಗಲೇ ಹಣ ಮಂಜೂರಾತಿ ನೀಡಿದ್ದು ಕೇಂದ್ರ ಸರಕಾರ ರೈಲ್ವೇ ಸೇರಿ ಮೂಲಸೌಕರ್ಯಕ್ಕೆ ಮೊದಲ ಆದ್ಯತೆ ನೀಡಿದೆ.
ದರೋಜಿ ಬಾಗಲಕೋಟೆ ರೈಲು ಮಾರ್ಗ ಸರ್ವೇ ಕಾರ್ಯ ಬೇಗ ಮುಗಿದು ರೈಲು ಸಂಚಾರವಾಗಲಿದೆ. ಗದಗ ವಾಡಿ ಮಾರ್ಗದಲ್ಲಿ ಕುಷ್ಟಗಿ ವರೆಗೆ ಜನವರಿ ವೇಳೆಗೆ ಸಂಚಾರ ಆರಂಭಿಸಲಿದೆ. ಅಲ್ಲಿಗೆ ಕೊಪ್ಪಳ ಜಿಲ್ಲೆಯ ಎಲ್ಲ ತಾಲೂಕಿಗೆ ರೈಲ್ವೇ ಮಾರ್ಗ ಕಲ್ಪಿಸಿದಂತೆ ಆಗುತ್ತದೆ. ಕಳೆದ 9 ವರ್ಷದಲ್ಲಿ ದಾಖಲೆ ಪ್ರಮಾಣದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ರೈಲ್ವೇ ಆರ್ ಒಬಿ ಮತ್ತು ಆರ್ ಯುಬಿ ಆಗಿವೆ.
ಚುನಾವಣೆ ಒಳಗಾಗಿ ಗಿಣಿಗೇರ ಆರ್ ಒಬಿ ಲೋಕಾರ್ಪಣೆ ಆಗಲಿದೆ. ಗಂಗಾವತಿಯಲ್ಲಿ ರೈಲ್ವೇ ನಿಲ್ದಾಣಕ್ಕೆ ಲಿಫ್ಟ್ ಮಂಜೂರು ಮಾಡುವ ಬೇಡಿಕೆ ಇದ್ದು, ಆದಷ್ಟು ಬೇಗ ಮಂಜೂರು ಆಗಲಿದೆ ಎಂದು ಭರವಸೆ ನೀಡಿದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ, ರೈಲ್ವೇ ಎಡಿಆರ್ ಎಂ ಸಂಜಯ ಕುಮಾರ ಸಿಂಗ್, ಎಸ್ ಡಿಇಇ ವಿಜಯ ಕುಮಾರ, ಪಿಆರ್ ಒ ಪ್ರಾಣೇಶ, ನಗರಸಭೆ ಸದಸ್ಯ ಉಮೇಶ ಸಿಂಗನಾಳ, ಬಿಜೆಪಿ ಮುಖಂಡರಾದ ರಾಘವೇಂದ್ರ ಶೆಟ್ಟಿ, ಸಿದ್ದರಾಮಯ್ಯ ಸ್ವಾಮಿ, ಜೋಗದ ಹನುಮಂತಪ್ಪ ನಾಯಕ, ಉಪ್ಪಾರ ಚಂದ್ರಪ್ಪ, ಮಲ್ಲಿಕಾರ್ಜುನ ದೇವರಮನಿ,ಅಕ್ಕಿ ಪ್ರಕಾಶ, ರಾಯಬಾಗಿ,ನಿಜಗುಣೆಪ್ಪ ಸೇರಿ ಇತರರು ಇದ್ದರು.