ಗಂಗಾವತಿ : ಜನತೆಯ ಹಲವು ದಶಕಗಳ ರೈಲ್ವೆ ಕನಸು ಕಳೆದ ವರ್ಷ ನನಸಾಗಿದ್ದು ಪೂರ್ಣಪ್ರಮಾಣದ ರೈಲು ನಿಲ್ದಾಣವಿಲ್ಲದೇ ರೈಲು ಪ್ರಯಾಣಿಕರಿಗೆ ತೊಂದರೆಯಾಗಿದೆ. ರೈಲ್ವೇ ನಿಲ್ದಾಣದಲ್ಲಿ ಪೋಲಿಸ್ ಕಾವಲು ಇಲ್ಲದ ಕಾರಣ ಇಲ್ಲಿಯ ವಸ್ತುಗಳನ್ನು ದೋಚಲಾಗುತ್ತಿದೆ. ಪ್ರಯಾಣಿಕರಿಗೆ ಕುಡಿಯುವ ನೀರು ಸೇರಿ ಅಗತ್ಯ ಮೂಲಸೌಕರ್ಯಗಳು ಸಿಗುತ್ತಿಲ್ಲ. ರೈಲು ಸಂಚಾರ ಆರಂಭವಾಗಿ ಒಂದು ವರ್ಷ ಕಳೆದಿದ್ದರೂ ಗಂಗಾವತಿ, ಬೆಣಕಲ್, ಜಬ್ಬಲಗುಡ್ಡ ಸೇರಿ ನೂತನ ಕಾರಟಗಿ ರೈಲು ನಿಲ್ದಾಣಗಳಿಗೆ ಪೂರ್ಣ ಪ್ರಮಾಣದ ಸಿಬ್ಬಂದಿಗಳಿಲ್ಲದೇ ನಿಲ್ದಾಣದಲ್ಲಿ ರೈಲ್ವೆ ಮಾರ್ಗದ ಬಗ್ಗೆ ಮಾಹಿತಿ ಜನರಿಗಿಲ್ಲವಾಗಿದೆ.
ರೈಲ್ವೆ ಅಧಿಕಾರಿಗಳು ಪೋಲಿಸರು ಮತ್ತು ಸಿಬ್ಬಂದಿ ವರ್ಗದವರಿಗಾಗಿ ನಿರ್ಮಿಸಿದ ಕ್ವಾಟ್ರಸ್‌ಗಳು ಮತ್ತು ರೈಲ್ವೆ ನಿಲ್ದಾಣಗಳು ನಿರ್ವಾಹಣೆ ಇಲ್ಲದೇ ಹಾಳಾಗುತ್ತಿವೆ. ವಿದ್ಯುತ್ ಸಾಮಾನು, ನೀರಿನ ಟ್ಯಾಂಕಿ ಸೇರಿ ಕ್ವಾಟ್ರಸ್ ಹಾಗೂ ನಿಲ್ದಾಣದಲ್ಲಿ ಅಳವಡಿಸಿರುವ ಫ್ಯಾನ್, ಲೈಟ್, ಕುಡಿಯುವ ನೀರಿನ ನಳಗಳು ಪ್ರಯಾಣಿಕರು ಕುಳಿತುಕೊಳ್ಳುವ ಬೆಂಚ್ ಸೇರಿ ಇಲ್ಲಿ ಸಾಮಾನುಗಳನ್ನು ನಾಶ ಮುರಿದು ಹಾಕಲಾಗಿದೆ ಮತ್ತು ಕೆಲವನ್ನು ಕಳ್ಳರು ದೋಚಿದ್ದಾರೆ. ಸಿಬ್ಬಂದಿ ಇಲ್ಲದ ಕಾರಣ ಕ್ವಾಟ್ರಸ್ ಮತ್ತು ರೈಲ್ವೆ ನಿಲ್ದಾಣ ಹಾಗೂ ಹಳಿಯ ಮೇಲೆ ರಾತ್ರಿಯಲ್ಲಿ ಮದ್ಯ ವ್ಯಸನಿಗಳು ಮದ್ಯ ಸೇವನೆ ಮತ್ತು ಅನೈತಿಕ ಕಾರ್ಯ ಮಾಡುತ್ತಿದ್ದಾರೆ.
ಕೋಟ್ಯಾಂತರ ರೂ. ಆದಾಯ: ಕಳೆದ ವರ್ಷ ಫೆಬ್ರುವರಿಯಲ್ಲಿ ಗಂಗಾವತಿ ಯಿಂದ ರೈಲು ಸಂಚಾರ ಆರಂಭವಾಗಿದ್ದು ಗಂಗಾವತಿ ಯಿಂದ ದೇಶದ ವಿವಿಧ ನಗರಗಳಿಗೆ ಭತ್ತ ಸೇರಿ ಹಲವು ಸರಕುಗಳನ್ನು ಕಳುಹಿಸುವುದು ಮತ್ತು ತರಿಸಿಕೊಳ್ಳಲಾಗುತ್ತಿದ್ದು ಸುಮಾರು 8 ಕೋಟಿಯಷ್ಟು ಆದಾಯ ರೈಲ್ವೆ ಇಲಾಖೆಗೆ ಗಂಗಾವತಿ ಯಿಂದ ಬಂದಿದೆ. ಆದರೂ ಪೂರ್ಣ ಪ್ರಮಾಣದ ನಿಲ್ದಾಣ ಮಾಡುವಲ್ಲಿ ಹುಬ್ಬಳ್ಳಿ ರೈಲ್ವೆ ವಲಯದ ಹಿರಿಯ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ನಿಲ್ದಾಣದಲ್ಲಿ ಕೋಟ್ಯಾಂತರ ರೂ.ಖರ್ಚು ಮಾಡಿ ಕಟ್ಟಡ ನಿರ್ಮಿಸಿ ವಿದ್ಯುತ್ ಉಪಕರಣ ಬಾಗಿಲು, ಗೇಟ್, ಕಿಟಕಿ ಹೀಗೆ ಹಲವು ಅಮೂಲ್ಯ ವಸ್ತುಗಳು ರೈಲ್ವೆ ಪೊಲೀಸರು ಇಲ್ಲದ ಕಾರಣ ಮಾಯವಾಗಿವೆ. ರೈಲ್ವೆ ಪ್ರಮಾಣಕ್ಕೆ ಟಿಕೇಟ್ ಕೊಡಲು ಸಿಬ್ಬಂದಿ ಕಾವಲಿಗೆ ರೈಲ್ವೆ ಪೋಲಿಸ್ ಮತ್ತು ಸ್ವಚ್ಛ ಮಾಡಲು ಸಿಬ್ಬಂದಿ ಕೊರತೆ ಇದ್ದು ರೈಲ್ವೆ ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆಯುಂಟಾಗಿದೆ.
ನೆನಗುದಿಗೆ ಬಿದ್ದ ಗಂಗಾವತಿ-ದರೋಜಿ ರೈಲ್ವೆ ಮಾರ್ಗ ಸರ್ವೇ: ಸಂಸದ ಕರಡಿ ಸಂಗಣ್ಣ ಹಾಗೂ ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ ಅವರುಗಳ ಮನವಿ ಮೇರೆಗೆ ಈ ಹಿಂದೆ ರೈಲ್ವೆ ಮಂತ್ರಿಯಾಗಿದ್ದ ದಿವಂಗತ ಸುರೇಶ ಅಂಗಡಿ ಘೋಷಣೆ ಮಾಡಿದ್ದ ಗಂಗಾವತಿ- ದರೋಜಿ ನೂತನ ರೈಲ್ವೆ ಮಾರ್ಗದ ಸರ್ವೇ ಕಾರ್ಯ ರೈಲ್ವೆ ಇಲಾಖೆಯ ನೆನಗುದಿಗೆ ಬಿದ್ದಿದೆ. ಗಂಗಾವತಿ ದರೋಜಿ ಮಧ್ಯೆ ರೈಲ್ವೆ ಮಾರ್ಗ ನಿರ್ಮಾಣದಿಂದ ಬಳ್ಳಾರಿಯಿಂದ ಬಿಜಾಪೂರದ ವರೆಗೆ ರೈಲ್ವೆ ಮಾರ್ಗ ನಿರ್ಮಾಣ ಮಾಡಲು ಪ್ರಕ್ರಿಯೆ ಆರಂಭವಾಗುತ್ತದೆ. ಜತೆಗೆ ಗಂಗಾವತಿ ಯಿಂದ ದಕ್ಷಿಣ ಭಾರತದ ಪ್ರಮುಖ ನಗರಗಳಿಗೆ ರೈಲು ಸಂಚಾರ ಆರಂಭಕ್ಕೆ ಅನುಕೂಲವಾಗುತ್ತದೆ. ಇತ್ತೀಚೆಗೆ ಘೋಷಣೆ ಮಾಡಿರುವ ಅಯೋಧ್ಯೆ ಯಿಂದ ಕಿಷ್ಕಿಂದಾ ಅಂಜನಾದ್ರಿ(ಗಂಗಾವತಿ) ಮಾರ್ಗಕ್ಕೆ ಇದು ಪೂರಕವಾಗಿದೆ.
ನಿರ್ಲಕ್ಷ್ಯ ಸಲ್ಲದು :
ನಾಮಕಾವಸ್ಥೆಗಾಗಿ ಗಂಗಾವತಿ, ಕಾರಟಗಿ ಭಾಗದಲ್ಲಿ ರೈಲ್ವೆ ನಿಲ್ದಾಣಗಳನ್ನು ಉದ್ಘಾಟಿಸಲಾಗಿದೆ. ಒಂದು ವರ್ಷ ಕಳೆದರೂ ಗಂಗಾವತಿ ನಿಲ್ದಾಣಕ್ಕೆ ಪೂರ್ಣ ಪ್ರಮಾಣದ ಸ್ಥಾನಮಾನ ನೀಡಿಲ್ಲ. ಸ್ಟೇಶನ್ ಮಾಸ್ಟರ್ ಸೇರಿ ಅಗತ್ಯ ಸಿಬ್ಬಂದಿ ರೈಲ್ವೆ ಪೊಲೀಸರು ಹಾಗೂ ಸ್ವಚ್ಛ ಮಾಡುವ ಡಿ ಗ್ರುಪ್ ನೌಕರರನ್ನು ಬೇರೆಡೆಯಿಂದ ಗಂಗಾವತಿಗೆ ವರ್ಗ ಮಾಡಿಲ್ಲ. ಒಂದು ವರ್ಷದಲ್ಲಿ 8 ಕೋಟಿಗೂ ಅಧಿಕ ಬಾಡಿಗೆ ರೂಪದಲ್ಲಿ ಗಂಗಾವತಿ ಯಿಂದ ರೈಲ್ವೆ ಇಲಾಖೆಗೆ ಆದಾಯ ಬಂದಿದೆ. ಕೂಡಲೇ ಗಂಗಾವತಿ ದರೋಜಿ ರೈಲು ಮಾರ್ಗ ನಿರ್ಮಾಣಕ್ಕೆ ರೈಲ್ವೆ ಇಲಾಖೆ ಸರ್ವೇ ಕಾರ್ಯ ಆರಂಭಿಸಬೇಕು. ಇದರಿಂದ ಈಗಾಗಲೇ ಘೋಷಣೆಯಾಗಿರುವ ಅಯೋಧ್ಯೆ ಯಿಂದ ಕಿಷ್ಕಿಂದಾ ಅಂಜನಾದ್ರಿ(ಗಂಗಾವತಿ ) ರೈಲ್ವೆ ಮಾರ್ಗಕ್ಕೆ ಪೂರಕವಾಗಲಿದೆ. ಸಂಸದರು, ಸಚಿವರು ಶಾಸಕರು ಕೂಡಲೇ ಕೇಂದ್ರ ಸರಕಾರಕ್ಕೆ ಪತ್ರ ಬರೆದು ಒತ್ತಾಯಿಸ ಬೇಕೆಂದು ಜಿಲ್ಲಾ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಜಿಲ್ಲಾಧ್ಯಕ್ಷ ಅಶೋಕಸ್ವಾಮಿ ಹೇರೂರು ಒತ್ತಾಯಿಸಿದ್ದಾರೆ .
– ಕೆ. ನಿಂಗಜ್ಜ ಗಂಗಾವತಿ