ಗಂಗಾವತಿ: ಗ್ರಾಮೀಣ ಭಾಗದಲ್ಲಿ ವಸತಿಯ ಮಾಲೀಕತ್ವದ ದಾಖಲೆ ಪಡೆಯಲು ಅನುಕೂಲವಾಗಲು ಕೇಂದ್ರ ಸರಕಾರ ಅನುಷ್ಠಾನ ಮಾಡಿರುವ ಸ್ವಾಮೀತ್ವ ಯೋಜನೆಗೆ ಪೂರಕವಾಗಿರುವ ಸರ್ವೇ ಕಾರ್ಯ ಮತ್ತು ಉಳುವೆ ಭೂಮಿ ಸರ್ವೇ ಕಾರ್ಯಗಳು ಮತ್ತು ತಾಲೂಕಿನಾದ್ಯಂತ ಸ್ವಾಮೀತ್ವ ಯೋಜನೆ ಬೇಗನೆ ಅನುಷ್ಠಾನ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡುವುದಾಗಿ ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಳ್ಕರ್ ಹೇಳಿದರು.
ಅವರು ಸರಕಾರದ ಸುತ್ತೋಲೆಯ ಹಿನ್ನೆಲೆಯಲ್ಲಿ ಮಂಗಳವಾರ ತಹಸೀಲ್ದಾರ್ ಕಚೇರಿಯಲ್ಲಿ ಕಾರ್ಯನಿರ್ವಹಿಸಿ ಅಧಿಕಾರಿಗಳ ಸಭೆ ಮತ್ತು ಸಾರ್ವಜನಿಕರಿಂದ ಆಹ್ವಾಲು ಸ್ವೀಕಾರ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರಕಾರ ಪ್ರತಿ ಮಂಗಳವಾರ ಜಿಲ್ಲೆಯ ಪ್ರತಿ ತಹಸೀಲ್ದಾರ್ ಕಚೇರಿಯಲ್ಲಿ ಇಡೀ ದಿನ ಕಾರ್ಯ ನಿರ್ವಹಿಸಿ ಕಚೇರಿಯ ಕಾರ್ಯಗಳು, ಸರಕಾರದ ಯೋಜನೆಗಳ ಅನುಷ್ಠಾನ, ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿರುವ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಮನವಿ ಆಲಿಸಬೇಕು. ಇದರಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಸಾಧ್ಯವಾಗುತ್ತದೆ. ಸಾರ್ವಜನಿಕರ ಬಳಿ ಆಡಳಿತ ಹೋಗಿ ಅವರ ಸಮಸ್ಯೆ ಈಡೇರಿಸಲು ಅನುಕೂಲವಾಗುತ್ತದೆ. ಗಂಗಾವತಿಯಲ್ಲಿ ಗ್ರಾಮೀಣ ಮತ್ತು ನಗರದ ಸಮಸ್ಯೆಗಳ ಕುರಿತು ಅಧಿಕಾರಿಗಳ ಸಭೆ ನಡೆಸಿ ಕಚೇರಿಯ ಆಂತರೀಕ ಸಮಸ್ಯೆಗಳು, ಪಡಶಾಲಿ, ಭೂಮಿ ಕೇಂದ್ರ, ಆಹಾರ ನಾಗರೀಕ ಸರಬರಾಜು ಇಲಾಖೆ, ನೋಂದಣಿ ಕಚೇರಿ ಸೇರಿ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನದ ಕುರಿತು ಗಮನ ಹರಿಸಲಾಗುತ್ತದೆ. ಭೂಮಿ ಸರ್ವೇ ಬಗ್ಗೆ ಹಲವು ಪ್ರಕರಣಗಳು ಬಾಕಿ ಇದ್ದು ಇದಕ್ಕೆ ಸಿಬ್ಬಂದಿ ಕೊರತೆ ಮತ್ತು ಆನ್‌ಲೈನ್ ಸರ್ವರ್ ತಾಂತ್ರಿಕ ತೊಂದರೆ ಕಾರಣವಾಗಿದ್ದು ಇದನ್ನು ಸರಕಾರದ ಮಟ್ಟದಲ್ಲಿ ಸರಿಪಡಿಸಲಾಗುತ್ತದೆ ಎಂದರು.
ಈ ಸಂದರ್ಭಧಲ್ಲಿ ತಹಸೀಲ್ದಾರ್ ಯು.ನಾಗರಾಜ, ಪೌರಾಯುಕ್ತ ವಿರೂಪಾಕ್ಷಮೂರ್ತಿ ಸೇರಿ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.