ಗಂಗಾವತಿ : ನಗರದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿ ಅಂಧ ಮುಸ್ಲಿಂ ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.
ನವೆಂಬರ್ 25ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಈ ಕುರಿತು ಎಸ್ ಡಿಪಿಐ ಪಕ್ಷದ ಕಾರ್ಯಕರ್ತರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಲ್ಲೆಗೊಳಗಾದ ವೃದ್ಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೋಟೋ ಹಾಕಿ ಘಟನೆಯನ್ನು ಖಂಡಿಸಿ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.
ಘಟನೆಯ ವಿವರ: ಗಂಗಾವತಿ ಮಹೆಬೂಬನಗರದ ನಿವಾಸಿ ಅಂಧ ವ್ಯಕ್ತಿಯಾಗಿರುವ ಹುಸೇನಸಾಬ ಹೊಸಪೇಟೆ ಯಿಂದ ನ.24 ರಂದು ಬೆಳಗಿನ ಜಾವ ಆಗಮಿಸಿ ಮನೆಗೆ ತೆರಳಲು ಆಟೋಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಕೆಲ ಯುವಕರ ಗುಂಪು ಸ್ಥಳಕ್ಕೆ ಆಗಮಿಸಿ ಮಾತನಾಡಿಸುವ ನೆಪದಲ್ಲಿ ಬೈಕ್ ಮೇಲೆ ಹತ್ತಿಸಿಕೊಂಡು ಆರೋಪಿಗಳು ಸಿದ್ದಿಕೇರಿಗೆ ಹೋಗುವ ರಸ್ತೆಯ ರೈಲ್ವೆ ಸೇತುವೆಯ ಕೆಳಗಡೆ ಕರೆದುಕೊಂಡು ಹೋಗಿ ಜೈ ಶ್ರೀರಾಮ್ ಹೇಳುವಂತೆ ಒತ್ತಾಯಿಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಅಲ್ಲದೆ ನನ್ನ ಗಡ್ಡಕ್ಕೆ ಬೆಂಕಿ ಹಚ್ಚಿದ್ದಾರೆ” “ಆರೋಪಿಗಳು ನನ್ನ ಬಳಿಯಿದ್ದ ಹಣ ದೋಚಿಕೊಂಡು ಹೋಗಿದ್ದಾರೆ. ಬೆಳಗಿನ ಜಾವ ಕುರಿ ಕಾಯುವ ಹುಡುಗರು ನನ್ನನ್ನು ನೋಡಿ ಮನೆಯ ವಿಳಾಸ ಕೇಳಿ ರಕ್ಷಣೆ ಮಾಡಿ, ಮನೆಗೆ ತಲುಪಿಸಿದ್ದಾರೆ” ಎಂದು ಹುಸೇನಸಾಬ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ಕುರಿತು ಗಂಗಾವತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Bomb Threat; ಶಾಲೆಗಳಿಗೆ ಬೆದರಿಕೆ ಹಾಕಿದವರನ್ನು ಬಿಡುವ ಪ್ರಶ್ನೆಯಿಲ್ಲ: ಮಧು ಬಂಗಾರಪ್ಪ