ಗಂಗಾವತಿ: ಪ್ರಸಕ್ತ ಶಾಲಿನ ಶೈಕ್ಷಣಿಕ ವರ್ಷ ಆರಂಭದ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಬಿಸಿಯೂಟ ಯೋಜನೆಗೆ ಸರಕಾರ ಅಕ್ಕಿ ಮತ್ತು ಗೋಧಿಯನ್ನು ಪೂರೈಕೆ ಮಾಡಿದ್ದರೂ ಗಂಗಾವತಿ ಅಖಂಡ ತಾಲೂಕಿನಲ್ಲಿ ಬಿಸಿಯೂಟದ ಅಧಿಕಾರಿಯ ಆದೇಶದ ಹಿನ್ನೆಲೆಯಲ್ಲಿ ಅಕ್ಕಿಯನ್ನು ಮಾತ್ರ ಕೆಲ ಶಾಲೆಗಳಿಗೆ ಪೂರೈಕೆ ಮಾಡಿ ಗೋಧಿಯನ್ನು ಕೆಎಫ್‌ಸಿ ಗೋಡೌನ್‌ನಲ್ಲಿ ಸಂಗ್ರಹಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ವಾರದಲ್ಲಿ 5 ದಿನ ರೈಸ್ ಹಾಗೂ ಒಂದು ದಿನ ಗೋಧಿಯಿಂದ ತಯಾರಿಸಿದ ಆಹಾರವನ್ನು ಮಕ್ಕಳಿಗೆ ವಿತರಣೆ ಮಾಡುವ ಕುರಿತು ಸರಕಾರದ ಆದೇಶವಿದ್ದು ಪ್ರತಿ ತಿಂಗಳು ಕೊನೆಯ ವಾದಲ್ಲೇ ಶಾಲಾ ಮುಖ್ಯಗುರುಗಳ ಬೇಡಿಕೆ ಅನುಸಾರ ಅಕ್ಕಿ, ಗೋಧಿ, ಎಣ್ಣೆ ಮತ್ತು ಬೇಳೆಯನ್ನು ಒಂದೇ ಸಲಕ್ಕೆ ಟೆಂಡರ್ ಪಡೆದ ಶಾಲೆಗಳಿಗೆ ಸರಬರಾಜು ಮಾಡಿ ಶಾಲೆಗಳಿಂದ ತಲುಪಿರುವ ಕುರಿತು ಸಹಿಯೊಂದಿಗೆ ದಾಖಲೆ ಪಡೆಯಲಾಗುತ್ತಿದೆ. ಜೂನ್ ತಿಂಗಳ ಪಡಿತರದಲ್ಲಿ ಸರಕಾರ ಅಕ್ಕಿ, ಗೋಧಿಯನ್ನು ಪೂರೈಕೆ ಮಾಡಿದ್ದರೂ ತಾಲೂಕು ಬಿಸಿಯೂಟದ ಅಧಿಕಾರಿ ಅಕ್ಕಿಯನ್ನು ಮಾತ್ರ ಶಾಲೆಗಳಿಗೆ ಕಳಿಸುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆAದು ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರೊಬ್ಬರು ತಿಳಿಸಿದ್ದಾರೆ.
ತಾಲೂಕಿನಲ್ಲಿ 1-5ನೇ ತರಗತಿ ಮಕ್ಕಳಿಗೆ 1156.90 ಕ್ವಿಂಟಲ್, 6-8 ನೇ ತರಗತಿ ಮಕ್ಕಳಿಗೆ 1025 ಕ್ವಿಂಟಲ್ ಮತ್ತು 9-10 ನೇ ತರಗತಿ ಮಕ್ಕಳಿಗೆ 456 ಕ್ವಿಂಟಲ್ ಅಕ್ಕಿಯನ್ನು ಹಾಗೂ 1-5 ನೇ ತರಗತಿ ಮಕ್ಕಳಿಗೆ 244 ಕ್ವಿಂಟಲ್ ಗೋಧಿ, 6-8 ನೇ ತರಗತಿ ಮಕ್ಕಳಿಗೆ 218 ಕ್ವಿಂಟಲ್ ಗೋಧಿಯನ್ನು ಸರಕಾರ ಪೂರೈಕೆ ಮಾಡಿದೆ. ಇವುಗಳ ಪೈಕಿ ಸಂಗಾಪೂರ,ಆನೆಗೊಂದಿ, ಮಲ್ಲಾಪೂರ, ಚಿಕ್ಕಂತಗಲ್, ಮರಳಿ, ಢಣಾಪೂರ, ಮುಸ್ಟೂರು, ಸಿದ್ಧಾಪೂರ, ಹೊಸ್ಕೇರಾ, ಶ್ರೀರಾಮನಗರ, ಉಳೇನೂರು, ಬೆನ್ನೂರು, ಗುಂಡೂರು ಮತ್ತು ಹುಳ್ಕಿಹಾಳ ಗ್ರಾ.ಪಂ. ವ್ಯಾಪ್ತಿಯ ಶಾಲೆಗಳು ಸೇರಿ ಗಂಗಾವತಿ ನಗರದ ಕೆಲ ಶಾಲೆಗಳಿಗೆ ಒಟ್ಟು 1569 ಕ್ವಿಂಟಲ್ ಅಕ್ಕಿಯನ್ನು ಮಾತ್ರ ಪೂರೈಕೆ ಮಾಡಲಾಗಿದೆ.
ಹಳೆಯ ಸಂಗ್ರಹ ನೆಪ: ಸರಕಾರ ಜೂನ್ ತಿಂಗಳಿನ ಶಾಲೆಗಳ ಬಿಸಿಯೂಟದ ಪಡಿತರವನ್ನು ಪೂರೈಕೆ ಮಾಡಿದ್ದರೂ ಬಿಸಿಯೂಟದ ಅಧಿಕಾರಿಗಳು ಅಕ್ಕಿ ಹೊರತುಪಡಿಸಿ ಉಳಿದ ಗೋಧಿ ಹಾಗೂ ಬೇಳೆ ಶಾಲೆಗಳಿಗೆ ಸರಬರಾಜು ಮಾಡದೇ ಇರುವ ಕುರಿತು ಕೇಳಿದರೆ ಕಳೆದ ಜನೇವರಿಯಲ್ಲಿ ಅಕ್ಕಿ ಮತ್ತು ಗೋಧಿಯನ್ನು ತಡವಾಗಿ ಶಾಲೆಗಳಿಗೆ ಪೂರೈಕೆ ಮಾಡಿದ್ದರಿಂದ ಶಾಲೆಗಳಲ್ಲಿ ಇನ್ನೂ 700 ಕ್ವಿಂಟಲ್ ಅಕ್ಕಿ, 245 ಕ್ವಿಂಟಲ್ ಗೋಧಿ ಶಾಲೆಗಳಲ್ಲಿ ಸಂಗ್ರಹವಿರುವ ದಾಸ್ತಾನು ಖಾಲಿಯಾದ ಬಳಿಕೆ ಗೋಡೌನ್‌ನಲ್ಲಿ ಸಂಗ್ರಹಿಸಿರುವ ಜೂನ್ ತಿಂಗಳ ಗೋಧಿಯನ್ನು ಶಾಲೆಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಪ್ರತಿ ಸಲವೂ ಅಕ್ಕಿ ಮತ್ತು ಗೋಧಿ ಇತರೆ ಪಡಿತರವನ್ನು ಒಂದೇ ಲಾರಿಯಲ್ಲಿ ಸರಬರಾಜು ಮಾಡುವ ನಿಯಮ ಉಲ್ಲಂಘನೆಯಾಗಿರುವ ಕುರಿತು ಸಂಶಯ ಮೂಡಿದೆ.
ಜೂನ್ ತಿಂಗಳ ಬಿಸಿಯೂಟ ತಯಾರಿಸಲು ಅಕ್ಕಿ, ಗೋಧಿ ಇತರೆ ಪಡಿತರ ಪೂರೈಕೆಯಾಗಿದ್ದು ಎಲ್ಲಾ ಪಡಿತರವನ್ನು ಒಂದೇ ಸಲಕ್ಕೆ ಸರಬರಾಜು ಮಾಡಬೇಕು. ಗಂಗಾವತಿಯಲ್ಲಿ ಗೋಧಿಯನ್ನು ಗೋಡೌನ್ನಲ್ಲಿರಿಸಿ ಬರೀ ಅಕ್ಕಿಯನ್ನು ಸರಬರಾಜು ಮಾಡಿರುವ ಕುರಿತು ಮಾಹಿತಿ ಪಡೆಯಲಾಗುತ್ತದೆ. ಈ ಹಿಂದೆ ಪೂರೈಕೆ ಮಾಡಿದ್ದ 700 ಕ್ವಿಂಟಲ್ ಅಕ್ಕಿ, 245 ಕ್ವಿಂಟಲ್ ಗೋಧಿ ಶಾಲೆಗಳಲ್ಲಿ ಸಂಗ್ರಹವಿರುವ ಕುರಿತು ತಾಲೂಕು ಬಿಸಿಯೂಟದ ಅಧಿಕಾರಿ ಮಾಹಿತಿ ನೀಡಿದ್ದು ಜೂನ್ ತಿಂಗಳ ಗೋಧಿಯನ್ನು ಶಾಲೆಗಳಿಗೆ ಪೂರೈಸದೇ ಇರುವ ಕುರಿತು ಮಾಹಿತಿ ಪಡೆಯಲಾಗುತ್ತದೆ.
-ಅನಿತಾ ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ.
ಬಿಸಿಯೂಟಕ್ಕೆ ಪೂರೈಕೆಯಾಗುವ ಅಕ್ಕಿ, ಗೋಧಿ ಮತ್ತು ಇತರೆ ಪಡಿತರ ಮತ್ತು ಸಿಲಿಂಡರ್‌ಗಳನ್ನು ಸರಿಯಾಗಿ ಸರಬರಾಜು ಮಾಡುತ್ತಿಲ್ಲ. ಜೂನ್ ತಿಂಗಳ ಪಡಿತರಗಳಲ್ಲಿ ಅಕ್ಕಿಯನ್ನು ಮಾತ್ರ ಪೂರೈಕೆ ಮಾಡಿ ಗೋಧಿಯನ್ನು ಗೋಡೌನಲ್ಲಿ ಇರಿಸಲಾಗಿದೆ. ಕೇಳಿದರೆ ನಂತರ ಕಳಿಸಲಾಗುತ್ತದೆ ಎಂದು ಹಾರಿಕೆ ಉತ್ತರವನ್ನು ತಾಲೂಕು ಬಿಸಿಯೂಟದ ಅಧಿಕಾರಿಗಳು ತಿಳಿಸುತ್ತಿದ್ದಾರೆ. ಕೂಡಲೇ ತಾಲೂಕು ಆಡಳಿತ ಕ್ರಮಕೈಗೊಂಡು ಮಕ್ಕಳ ಊಟದ ವಿಷಯದಲ್ಲಿ ಅಕ್ರಮವೆಸಗಿವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
-ಹೆಸರೇಳಲಿಚ್ಛಿಸದ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು
*ಕೆ.ನಿಂಗಜ್ಜ