ಕೊಪ್ಪಳ: ನಾಲ್ಕು ತಿಂಗಳ ಹಿಂದಷ್ಟೇ ಉದ್ಯೋಗ ಅರಸಿ ಆಫ್ರಿಕಾದ ಲಿಬೇರಿಯಾಗೆ ತೆರಳಿದ್ದ ಗಂಗಾವತಿಯ ಹೆಡ್ರಾಲಿಕ್ ಮೆಕ್ಯಾನಿಕ್ ತೊಂದರೆಗೆ ಸಿಲುಕಿದ್ದಾನೆ. ನನಗೆ ಊಟ ಸರಿಯಾಗಿ ಸಿಗುತ್ತಿಲ್ಲ, ಗುಡ್ಡಗಾಡಿನಲ್ಲಿ ಕಂಪನಿ ಕೆಲಸ ನೀಡಿದೆ. ವೇತನವೂ ಸಿಗುತ್ತಿಲ್ಲ. ಕೂಡಲೇ ನನ್ನ ದೇಶಕ್ಕೆ ಕಳುಹಿಸಿಕೊಡಿ, ನನಗೆ ನೆರವಾಗಿ ಎಂದು ಏಮ್ಸ್ ಇಂಡಿಯಾ ಸಂಸ್ಥೆಗೆ ಮೊರೆ ಇಟ್ಟಿದ್ದಾನೆ.
ಏಮ್ಸ್ ಸಂಸ್ಥೆಯೂ ಈತನ ನೆರವಿಗೆ ಧಾವಿಸಿದ್ದು, ಭಾರತ ಸರ್ಕಾರಕ್ಕೂ, ಸಿಎಂ ಬೊಮ್ಮಾಯಿ ಅವರಿಗೂ ಪತ್ರ ಬರೆದು ನೆರವಾಗುವಂತೆ ಕೇಳಿಕೊಂಡಿದೆ. ಗಂಗಾವತಿಯ ಯುವಕ ಮೆಹಬೂಬಸಾಬ್ ಹೆಡ್ರಾಲಿಕ್ ಮೆಕ್ಯಾನಿಕ್ ಆಗಿದ್ದು, ಕೋವಿಡ್ ಬಳಿಕ ಕೆಲಸಕ್ಕೆ ಹುಡುಕಾಟ ನಡೆಸಿದ್ದ ವೇಳೆ ಆಫ್ರಿಕಾದಲ್ಲಿನ ಸೆನೋ ಎನ್ನುವ ಕಂಪನಿಯಲ್ಲಿ ಕೆಲಸ ದೊರೆತಿದೆ. ಕಂಪನಿಯೂ ಈತನಿಗೆ ವೀಸಾ ವ್ಯವಸ್ಥೆ ಮಾಡಿ ತನ್ನ ಕೆಲಸಕ್ಕೆ ಕರೆಸಿಕೊಂಡು ಜೆಸಿಬಿ, ಇಟಾಚಿ ನೋಡಿಕೊಳ್ಳುವ ಮೇಲುಸ್ತುವಾರಿ ನೀಡಿದೆ. ಆದರೆ ಈತನಿಗೆ ಕಂಪನಿ ಯಾವುದೋ ಗುಡ್ಡಗಾಡು ಪ್ರದೇಶದಲ್ಲಿ ಕೆಲಸ ನೀಡಿದೆ. ಮೊದಲ ತಿಂಗಳು ಹೊಸ ಅನುಭವ ಎನ್ನುತ್ತ ಕೆಲಸಕ್ಕೆ ಸೇರಿಕೊಂಡಿರುವ ಮಹೆಬೂಬಸಾಬ್‌ಗ 4 ತಿಂಗಳಿಂದಲೂ ಕಂಪನಿ ವೇತನವನ್ನೇ ಕೊಟ್ಟಿಲ್ಲವಂತೆ. ಸರಿಯಾದ ಊಟವನ್ನೂ ಪೂರೈಸಿಲ್ಲವಂತೆ. ಇದರಿಂದ ಕಂಗಾಲಾದ ಈತ ತನಗೆ ಆಗುತ್ತಿರುವ ಸಂಕಷ್ಟ ಕುರಿತು ಆಡಿಯೋ ಮಾಡಿ ವಿದೇಶದಲ್ಲಿಯೇ ಕನ್ನಡಿಗರು ಸ್ಥಾಪಿಸಿರುವ ಏಮ್ ಇಂಡಿಯಾ ಸಂಸ್ಥೆಗೆ ತಲುಪಿಸಿದ್ದಾನೆ.
ದಯವಿಟ್ಟು ನನ್ನನ್ನು ಭಾರತಕ್ಕೆ ಕಳುಹಿಸಿಕೊಡಿ. ಇಲ್ಲಿ ನನಗಾಗುತ್ತಿರುವ ತೊಂದರೆ ತಪ್ಪಿಸಿ ಎಂದು ಅಳಲು ತೋಡಿಕೊಂಡಿದ್ದಾನೆ. ಸಂಸ್ಥೆಯು ಈತನ ಸಮಸ್ಯೆ ಅರಿತು ತಕ್ಷಣ ಸ್ಪಂದಿಸಿದ್ದು, ಲಿಬೇರಿಯಾದಲ್ಲಿನ ಭಾರತೀಯ ರಾಯಭಾರಿ ಕಚೇರಿಗೆ ಮಾಹಿತಿ ರವಾನಿಸಿದೆ.
ಕೇಂದ್ರ ಸರ್ಕಾರಕ್ಕೂ ಪತ್ರ: ಏಮ್ಸ್ ಇಂಡಿಯಾ ಸಂಸ್ಥೆಯು ಲೆಬಿರಿಯಾದಲ್ಲಿನ ಭಾರತೀಯ ಕಚೇರಿ, ಭಾರತ ಸರ್ಕಾರದ ವಿದೇಶಾಂಗ ಸಚಿವ ಜೈಶಂಕರ್, ವಿ. ಮುರಳೀಧರನ್, ಮೀನಾಕ್ಷಿ ಅವರು ಸೇರಿದಂತೆ ರಾಜ್ಯದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಆ.7ರಂದು ಯುವಕನ ಪಾಸ್‌ಪೋರ್ಟ್ ವಿವರದೊಂದಿಗೆ ಪತ್ರ ಬರೆದಿದೆ. ಯುವಕನ ನೆರವಿಗೆ ಬರಲು ಕೋರಿದೆ.
ನನ್ನ ಸಹೋದರ ಇತ್ತೀಚೆಗಷ್ಟೇ ಆಫ್ರಿಕಾದ ಲಿಬೇರಿಯಾಗೆ ತೆರಳಿದ್ದಾನೆ. ಅಲ್ಲಿ ವೇತನ ಸರಿಯಾಗಿ ಸಿಗುತ್ತಿಲ್ಲ ಎಂದು ಹೇಳಿಕೊಂಡಿದ್ದು, ಭಾರತಕ್ಕೆ ವಾಪಸ್ ಬರುವುದಾಗಿ ತಿಳಿಸಿದ್ದಾನೆ. ಟಿಕೆಟ್ ಮಾಡಲು ಪ್ರಯತ್ನಿಸುತ್ತಿದ್ದಾನೆ. ಆದರೆ ಆತನಿಗೆ ಟಿಕೆಟ್ ಲಭ್ಯವಾಗುತ್ತಿಲ್ಲ ಎಂದಷ್ಟೇ ನಮ್ಮ ಮುಂದೆ ಹೇಳಿಕೊಂಡಿದ್ದಾನೆ. (ಆಯೂಬ್ ಶೇಕ್, ಮೆಹಬೂಬಸಾಬ್ ಸಹೋದರ)