ಗಂಗಾವತಿ: ಸುಪ್ರೀಂ ಕೋರ್ಟಿಗೆ ತಪ್ಪು ಮಾಹಿತಿ ನೀಡಿ ಛೀಮಾರಿ ಹಾಕಿಸಿಕೊಂಡು 20 ಲಕ್ಷ ರೂ.ಗಳ ದಂಡ ಪಾವತಿಸಿದ್ದ ಸಾಮಾಜಿಕ ಕಾರ್ಯಕರ್ತನೆಂದು ಹೇಳಿಕೊಳ್ಳುವ ಟಿ.ಜೆ.ಅಬ್ರಾಹಂ ಒಬ್ಬ ಬ್ಲಾಕ್ ಮೇಲರ್ ಆಗಿದ್ದು, ಜನರಿಂದ ಪೂರ್ಣ ಬಹುಮತ ಪಡೆದ ಸರಕಾರ ಅಸ್ಥಿರಗೊಳಿಸುವ ಬಿಜೆಪಿ-ಜೆಡಿಎಸ್ ಪಕ್ಷದ ಮುಖಂಡರ ಷಡ್ಯಂತ್ರ ಫಲ ನೀಡುವುದಿಲ್ಲ ಎಂದು ಕನ್ನಡ ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ಎಸ್. ತಂಗಡಗಿ ಹೇಳಿದರು.
ತಾಲೂಕಿನ ಚಿಕ್ಕಜಂತಗಲ್ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಟಿ.ಜೆ.ಅಬ್ರಾಹಂ ಕಳೆದ ಮೂರು ದಶಕಗಳಿಂದ ಬ್ಲಾಕ್ ಮೇಲ್ ವೃತ್ತಿ ಮಾಡುತ್ತಿದ್ದು ಅನೇಕ ಸಲ ವಿವಿಧ ಮುಖಂಡರು ಹಾಗೂ ಇತ್ತೀಚಿನ ವರ್ಷದಲ್ಲಿ ಪ್ರಕರಣ ಒಂದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟಿನಿಂದ ಛೀಮಾರಿ ಹಾಕಿಸಿಕೊಂಡು 20 ಲಕ್ಷ ರೂ.ಗಳ ದಂಡ ಕಟ್ಟಿದ ವ್ಯಕ್ತಿ ಸಿಎಂ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳುತ್ತಿರುವುದು ಹಾಸ್ಯಾಸ್ಪದ ಎಂದರು.
ರಾಜ್ಯಪಾಲರು ನೂರಾರು ಪುಟಗಳ ದೂರನ್ನು ಒಂದೇ ದಿನದಲ್ಲಿ ಓದಿ ಮುಖ್ಯಮಂತ್ರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದು ಬಿಜೆಪಿ-ಜೆಡಿಎಸ್ ಪಕ್ಷಗಳ ಷಡ್ಯಂತ್ರವಾಗಿದೆ. ರಾಜ್ಯದಲ್ಲಿ ಮಳೆ ಪ್ರವಾಹದಲ್ಲಿ ಜನತೆ ಸಂಕಷ್ಟಪಡುವ ಸಂದರ್ಭದಲ್ಲಿ ಬಿಜೆಪಿ ಜೆಡಿಎಸ್‌ನವರಿಗೆ ಪ್ರಚಾರಕ್ಕಾಗಿ ಪಾದಯಾತ್ರೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ದಮನಿತರು, ದಲಿತರು ಸೇರಿ ಅಹಿಂದ ವರ್ಗದವರ ಕಲ್ಯಾಣಕ್ಕೆ ಹಗಲು ರಾತ್ರಿ ಕೆಲಸ ಮಾಡುತ್ತಿದ್ದು ಇಂತಹ ವ್ಯಕ್ತಿಗೆ ಕಪ್ಪು ಮಸಿ ಬಳಿಯಲು ಬಿಜೆಪಿ ಜೆಡಿಎಸ್ ಸುಳ್ಳಿನ ಮೇಲೆ ಸುಳ್ಳು ಹೇಳುತ್ತಿದ್ದು ಸಿದ್ದರಾಮಯ್ಯರಿಗೆ ಮಾಡುವ ಅವಮಾನ ಅಹಿಂದ ಮತ್ತು ಬಡವರಿಗೆ ಮಾಡಿದಂತಾಗಿದೆ ಎಂದರು.
ಬಿಜೆಪಿ ಜೆಡಿಎಸ್ ಮುಖಂಡರು ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಸರಕಾರ ಬೀಳಲಿದೆ ಎಂದು ಪದೇ ಪದೇ ಹೇಳುತ್ತಿದ್ದು ನೋಡಿದರೆ ರಾಜ್ಯ ಸರಕಾರದ ಅಸ್ಥಿರತೆಯ ಹಿಂದೆ ಕೇಂದ್ರ ಸರಕಾರದ ಕೈವಾಡ ಇರುವ ಶಂಕೆಯಾಗುತ್ತಿದೆ. ಮುಡಾ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯನವರ ತಪ್ಪಿಲ್ಲ. ಬಿಜೆಪಿ ಜೆಡಿಎಸ್ ಬಹುತೇಕ ಮುಖಂಡರು ಅಥವಾ ಅವರ ಕುಟುಂಬದವರಿಗೆ ಹಾಗೂ ದೇವೇಗೌಡ, ಕುಮಾರಸ್ವಾಮಿ, ಯಡಿಯೂರಪ್ಪ, ಜಿ.ಟಿ.ದೇವೆಗೌಡ, ಸಾ.ರಾ,ಮಹೇಶ ಹೀಗೆ ಅನೇಕರು ನಿವೇಶನ ಹಂಚಿಕೆ ಮಾಡಿಸಿಕೊಂಡಿದ್ದಾರೆ. ಈಗ ಸತ್ಯಹರಿಶ್ಚಂದ್ರರಂತೆ ನಾಟಕವಾಡುತ್ತಿರುವುದು ಖಂಡನೀಯ ಎಂದು ಹೇಳಿದರು.
ಈಗಾಗಲೇ ಮುಡಾ ಹಗರಣ ಕುರಿತು ತನಿಖೆಯಾಗುತ್ತಿದ್ದು ಸೂಕ್ತ ದಾಖಲೆ ಸಮೇತ ಎಲ್ಲರ ಹರಗಣ ಬಿಚ್ಚಿಡಲಾಗುವುದು. ಸರಕಾರ ಈಗಾಗಲೇ ಗವರ್ನರ್ ಅವರ ನೋಟಿಸ್ ಗೆ ಉತ್ತರ ಬರೆದಿದ್ದು ಅವರು ಇಷ್ಟಕ್ಕೆ ಸುಮ್ಮನಾಗದಿದ್ದರೆ ನ್ಯಾಯಾಧೀಶರು, ರಾಜಕೀಯ ಪಂಡಿತರ ಅಭಿಪ್ರಾಯದಂತೆ ಸರಕಾರ ಮುಂದುವರಿಯಲಿದ್ದು ಮುಖ್ಯಮಂತ್ರಿಗಳಿಗೆ ಸಚಿವ ಸಂಪುಟ ಮತ್ತು ಪಕ್ಷ ಹಾಗೂ ಹೈಕಮಾಂಡ್ ಪೂರ್ಣ ಬೆಂಬಲ ನೀಡಿದೆ. ಬಿಜೆಪಿ-ಜೆಡಿಎಸ್ ಪಾದಯಾತ್ರೆಗೆ ಕಾಂಗ್ರೆಸ್ ಪಕ್ಷ ಸೂಕ್ತ ಉತ್ತರ ನೀಡಲಿದೆ ಎಂದರು.