ಗಂಗಾವತಿ: ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಪಕ್ಷ ಸ್ಥಾಪಿಸಿ ಗಂಗಾವತಿಯನ್ನು ಕೇಂದ್ರವಾಗಿಸಿಕೊಂಡು ಇಡೀ ರಾಜ್ಯದಾದ್ಯಂತ ಪಕ್ಷ ಸಂಘಟನೆ ಮಾಡುತ್ತ ಗಂಗಾವತಿಯ ಬಿಜೆಪಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರನ್ನು ಸೆಳೆದು, ಹೋದಲ್ಲಿ ಬಂದಲ್ಲಿ ಸಾವಿರಾರು ಜನ ಅಭಿಮಾನಿಗಳನ್ನು ಸೇರಿಸುತ್ತಿರುವ ಗಾಲಿ ಜನಾರ್ದನ ರೆಡ್ಡಿ.
ರೆಡ್ಡಿ ಬಲ ಪ್ರದರ್ಶನದ ಮಧ್ಯೆ ಬಿಜೆಪಿ ಪಕ್ಷ ಗಂಗಾವತಿಯಲ್ಲಿ ಪೇಜ್ ಪ್ರಮುಖ ಸಂಕಲ್ಪ ಸಮಾವೇಶದ ಮೂಲಕ ಪಕ್ಷ ಸಂಘಟನೆಗೆ ಮುಂದಾಗಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಹೇಶ ತೆಂಗಿನಕಾಯಿ, ಸಚಿವರಾದ ಬಿ. ಶ್ರೀರಾಮುಲು, ಆನಂದ ಸಿಂಗ್, ಸಂಸದ ಕರಡಿ ಸಂಗಣ್ಣ ಸೇರಿ ಜಿಲ್ಲೆಯ ಬಿಜೆಪಿ ಶಾಸಕರು, ಪಕ್ಷದ ಪ್ರಮುಖ ಮುಖಂಡರು, 235 ಬೂತ್ ಕೇಂದ್ರಗಳ ಮುಖಂಡರು ಸೇರಿ ಸುಮಾರು 20 ಸಾವಿರ ಕಾರ್ಯಕರ್ತರನ್ನು ಸೇರಿಸಿ ಶಕ್ತಿ ಪ್ರದರ್ಶನ ನಡೆಸಲು ಬಿಜೆಪಿ ಭರ್ಜರಿ ಸಿದ್ದತೆ ನಡೆಸಿದ್ದಾರೆ.
ಇದಕ್ಕಾಗಿ ನಗರದ ಜೂನಿಯರ್ ಕಾಲೇಜ್ ಮೈದಾನದಲ್ಲಿ ಬೃಹತ್ ವೇದಿಕೆ ಹಾಕಿದ್ದು, ವೇದಿಕೆಯ ಎಡ ಹಾಗೂ ಬಲ ಭಾಗದಲ್ಲಿ ಪಕ್ಷದ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಪೇಜ್ ಮತ್ತು ಬೂತ್ ಮಟ್ಟದ ಅಧ್ಯಕ್ಷ ಉಪಾಧ್ಯಕ್ಷರಿಗೆ ರಾಜ್ಯಾಧ್ಯಕ್ಷರ ಜತೆ ವೇದಿಕೆಯ ಮೇಲೆ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಸಮಾವೇಶಕ್ಕೆ ಆಗಮಿಸುವ ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಸುಮಾರು 7-8 ಸಾವಿರ ಕುರ್ಚಿ ಹಾಕಿಸಲಾಗುತ್ತಿದೆ.
ಫೆ.14 ರಂದು ಸಂಜೆ 4 ಗಂಟೆಗೆ ವೇದಿಕೆ ಕಾರ್ಯಕ್ರಮಕ್ಕೂ ಮುಂಚೆ ಕೊಪ್ಪಳ ರಸ್ತೆಯ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ವೃತ್ತದಿಂದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಸುಮಾರು 2 ಸಾವಿರ ಬೈಕ್ ಮೆರವಣಿಗೆ ಮೂಲಕ ವೇದಿಕೆ ಕರೆತರುವ ಯೋಜನೆಯನ್ನು ಬಿಜೆಪಿ ಯುವ ಮೋರ್ಚಾ ಯೋಜಿಸಿದೆ.
ಪಕ್ಷ ಸೇರ್ಪಡೆ: ಶಿಕ್ಷಣ ಪ್ರೇಮಿ ನೆಕ್ಕಂಟಿ ಸೂರಿಬಾಬು, ಹಡಪದ ಸಮಾಜದ ಮುಖಂಡ ಸರಿಗಮ ಹನುಮಂತಪ್ಪ, ಶಿವಪ್ಪ ಸೇರಿ 10ಕ್ಕೂ ಹೆಚ್ಚು ಮುಖಂಡರು ಕಟೀಲ್ ಸಮ್ಮುಖದಲ್ಲಿ ಬಿಜೆಪಿ ಪಕ್ಷ ಸೇರ್ಪಡೆಯಾಗಲಿದ್ದಾರೆ.