ಗಂಗಾವತಿ: ಕಡೆಬಾಗಿಲು ವೃತ್ತಕ್ಕೆ ರಾಜಮನೆತನದ ಮಾಜಿ ಸಚಿವ ರಾಜಾ ಶ್ರೀರಂಗದೇವರಾಯಲು ಎಂದು ನಾಮಕರಣ ಮಾಡುವ ಮೂಲಕ ಆನೆಗೊಂದಿ ಗ್ರಾ.ಪಂ. ಆಡಳಿತ ಮಂಡಳಿ ಅತ್ಯುತ್ತಮ ಕಾರ್ಯ ಮಾಡಿದೆ. ಮುಂಬರುವ ದಿನಗಳಲ್ಲಿ ಶ್ರೀರಂಗದೇವರಾಯಲು ಆಳೆತ್ತರದ ಪುತ್ಥಳಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ಶಾಸಕ ಗಾಳಿ ಜನಾರ್ದನರೆಡ್ಡಿ ಹೇಳಿದರು.
ಅವರು ತಾಲೂಕಿನ ಕಡೆಬಾಗಿಲು ಕ್ರಾಸ್ ನಲ್ಲಿ ವೃತ್ತದಲ್ಲಿ ಶ್ರೀರಂಗದೇವರಾಯಲು ವೃತ್ತದ ನೂತನ ನಾಮಫಲಕ ಅನಾವರಣಗೊಳಿಸಿ ಮಾತನಾಡಿದರು.
ಶ್ರೀರಂಗದೇವರಾಯಲು ಐದು ಭಾರಿ ಶಾಸಕರಾಗಿ ಸಚಿವರಾಗಿ ಮತ್ತು ರಾಜಮನೆತನದವರಾಗಿ ಯಾವುದೇ ಆಹಂಕಾರ ಇರದ ಸರಳ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದ ಮಹಾನ್ ವ್ಯಕ್ತಿಯಾಗಿದ್ದರು. ಕಡೆಬಾಗಿಲು ವೃತ್ತಕ್ಕೆ ಅವರ ಹೆಸರು ನಾಮಕರಣ ಮಾಡಿದ್ದು ಅತ್ಯುತ್ತಮವಾಗಿದೆ. ಶೀಘ್ರವೇ ಪುತ್ಥಳಿ ನಿರ್ಮಿಸುವ ಕಾರ್ಯ ನಡೆಯಲಿದೆ ಎಂದರು.
ಈ ಭಾರಿಯ ಆನೆಗೊಂದಿ ಉತ್ಸವದಲ್ಲಿ ಶ್ರೀರಂಗದೇವರಾಯಲು ಜೀವನ ಚರಿತ್ರೆಯ ಪುಸ್ತಕವನ್ನು ಪ್ರಕಟಿಸುವ ಕುರಿತು ಅವರ ಕುಟುಂಬ ಹಾಗೂ ಬರಹಗಾರರ ಜತೆ ಮಾತನಾಡನಾಡಲಾಗುವುದು. ಆನೆಗೊಂದಿ ಭಾಗದ ರಸ್ತೆ ಸೇರಿ ಮೂಲ ಸೌಕರ್ಯಕ್ಕೆ 200 ಕೋಟಿ ಯೋಜನೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಲ್ಲಿ 70 ಕೋಟಿ ರೂ.ಗಳಲ್ಲಿ ರಸ್ತೆ ನಿರ್ಮಿಸಲಾಗುತ್ತದೆ. ಇನ್ನೂ ವಿಶ್ವ ವಿಖ್ಯಾತ ಕಿಷ್ಕಿಂಧಾ ಅಂಜನಾದ್ರಿ ಅಭಿವೃದ್ಧಿಯ ಮೂಲಕ ಪ್ರವಾಸೋದ್ಯಮ ಬೆಳೆಸಲಾಗುತ್ತದೆ. ಇದರಿಂದ ನೇರ ಪರೋಕ್ಷ ಉದ್ಯೋಗ ಸೃಷ್ಠಿಯಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಜಮನೆತನದ ಲಲಿತಾರಾಣಿ ಶ್ರೀರಂದೇವರಾಯಲು, ನರಸಿಂಗ ದೇವರಾಯಲು,ಕುಪ್ಪರಾಜು, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಗ್ರಾ.ಪಂ.ಅಧ್ಯಕ್ಷೆ ಕೆ.ಮಹಾದೇವಿ ತಿಮ್ಮಪ್ಪ ಬಾಳೆಕಾಯಿ, ಉಪಾಧ್ಯಕ್ಷೆ ಸುಶೀಲಾಬಾಯಿ, ಜಿ.ಪಂ. ಮಾಜಿ ಸದಸ್ಯ ಎಚ್.ಎಂ.ಸಿದ್ದರಾಮಯ್ಯಸ್ವಾಮಿ, ಮುಖಂಡರಾದ ರಾಜೇಶ್ವರಿ ಸುರೇಶ, ತಿಪ್ಪೇರುದ್ರಸ್ವಾಮಿ, ಮನೋಹರಗೌಡ, ಅಮರಜ್ಯೋತಿ ನರಸಪ್ಪ, ಯಮನೂರ ಚೌಡ್ಕಿ, ಟಿ.ಜಿ.ಬಾಬು, ನರಸಿಂಹಲು, ಟಿ.ಸತ್ಯನಾರಾಯಣ, ಸಿ.ರಾಮಕೃಷ್ಣ, ಜಾನಕೀ ರಾಮ, ತಿರುಕಪ್ಪ, ಗೂಗಿಬಂಡಿ ಸುಬ್ಬಾರಾವ್, ವೀರಭದ್ರಪ್ಪ ನಾಯಕ, ಜೋಗದ ನಾರಾಯಣಪ್ಪ ನಾಯಕ, ಹನುಮಂತಪ್ಪ ನಾಯಕ, ಸಂಕ್ರಾಂತಿ ವೆಂಕಟೇಶ್ವರ ರಾವ್, ಕೋಡಿ ನಾಗೇಶ, ರಾಘವೇಂದ್ರಶೆಟ್ಟಿ, ಸುಂಕದ ಚಂದ್ರಶೇಖರ, ಫಕೀರಯ್ಯ, ಅಯ್ಯಪ್ಪ, ಡಾ.ಸೋಮರಾಜು, ಪಿಡಿಒ ಕೆ.ಕೃಷ್ಣಪ್ಪ ಸೇರಿ ಆನೆಗೊಂದಿ, ಸಂಗಾಪೂರ, ಸಾಣಾಪೂರ, ಮಲ್ಲಾಪೂರ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರಿದ್ದರು.