ಹುಬ್ಬಳ್ಳಿ: ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರನ್ನು ಭೇಟಿಯಾಗಿ ಕೆಲ ಸಮಯ ಮಾತುಕತೆ ನಡೆಸಿದರು.
ಭಾನುವಾರ ಇಲ್ಲಿನ ಭವಾನಿ ನಗರದಲ್ಲಿರುವ ಕೇಂದ್ರ ಸಚಿವರ ನಿವಾಸಕ್ಕೆ ಆಗಮಿಸಿದ ಅವರು ಭೇಟಿಯಾಗಿ ಮಾತಕತೆ ನಡೆಸಿದರು. ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಗಂಗಾವತಿಯಲ್ಲಿ ಮನೆ ಮಾಡಿರುವುದು ಹಾಗೂ ಮುಂದೆ ಚುನಾವಣೆ ನಡೆಯುವ ಹಿನ್ನಲೆಯಲ್ಲಿ ಈ ಭೇಟಿ ಮಹತ್ವ ಪಡೆದುಕೊಂಡಿದೆ. ಸಹೋದರ ಹಾಗೂ ಕೆಎಲ್ಇ ಸಂಸ್ಥೆ ನಿರ್ದೇಶಕ ಶಂಕರಣ್ಣ ಮುನವಳ್ಳಿ ಈ ಸಂದರ್ಭದಲ್ಲಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ ಪರಣ್ಣ ಮುನವಳ್ಳಿ, ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದು, ಕೇಂದ್ರ ಸಚಿವರು ನಗರದಲ್ಲಿರುವ ಬಗ್ಗೆ ಮಾಹಿತಿಯಿದ್ದ ಕಾರಣ ಅವರನ್ನು ಭೇಟಿಯಾಗಲು ಬಂದಿದ್ದೆ. ಚುನಾವಣೆ, ಟಿಕೆಟ್ ವಿಚಾರದ ಭೇಟಿಯಲ್ಲ. ತಾವು ಗಂಗಾವತಿ ಕ್ಷೇತ್ರದ ಆಪೇಕ್ಷಿತ ಅಭ್ಯರ್ಥಿಯಾಗಿದ್ದೇನೆ. ಪಕ್ಷದ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳಲಿದೆಯೋ ಅದಕ್ಕೆ ಬದ್ದನಾಗಿದ್ದೇನೆ. ಜನಾರ್ಧನ ರೆಡ್ಡಿ ಅವರು ಗಂಗಾವತಿಯಲ್ಲಿ ಮನೆ ಮಾಡಿರುವುದಕ್ಕೂ ಚುನಾವಣೆಗೂ ಸಂಬಂಧ ಕಲ್ಪಿಸುವುದರಲ್ಲಿ ಅರ್ಥವಿಲ್ಲ ಎಂದರು.
ಇದನ್ನೂ ಓದಿ:ಹರಿದಾಡುತ್ತಿರುವ ಸಿಬಿಎಸ್‌ಇ 10 ,12 ನೇ ತರಗತಿಯ ಪರೀಕ್ಷೆಗಳ ವೇಳಾಪಟ್ಟಿ ನಕಲಿ
ಇದೇ ಸಂದರ್ಭದಲ್ಲಿ ಕಲಬುರಗಿ ಜಿಲ್ಲೆ ಗುರುಮಿಠಕಲ್ಲ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ನಾಗರತ್ನಾ ಕುಪ್ಪಿ ಹಾಗೂ ಬಸವಕಲ್ಯಾಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಪ್ರದೀಪ ವಾತಡೆ ಸಚಿವರನ್ನು ಭೇಟಿ ಟಿಕೆಟ್ ನೀಡುವಂತೆ ಮನವಿ ಮಾಡಿದರು.