ಗಂಗಾವತಿ: ಕೊರೊನಾ ಮಹಾಮಾರಿ ಪರಿಣಾಮದಿಂದ ತತ್ತರಿಸಿ, ಯಶಸ್ವಿಯಾಗಿ ಅರ್ಧ ಶೈಕ್ಷಣಿಕ ವರ್ಷದ ನಂತರ ಇದೀಗ ಪುನಃ ಶಾಲೆಗಳು ಮೇ 16ರಿಂದ ಆರಂಭವಾಗುತ್ತಿದ್ದು, ತಾಲೂಕಿನಾದ್ಯಂತ ಶಿಕ್ಷಣ ಇಲಾಖೆ ಶಾಲಾರಂಭವನ್ನು ವೈಶಿಷ್ಟ್ಯದಿಂದ ಮಾಡಲು ಯೋಜನೆ ರೂಪಿಸಿದೆ. ಈಗಾಗಲೇ ಶಾಲೆಯ ಮುಖ್ಯಗುರುಗಳಿಗೆ ಸೂಚನೆ ನೀಡಿದೆ.
ಗಂಗಾವತಿ ನಗರದ ಮಧ್ಯೆ ಭಾಗದಲ್ಲಿರುವ ಸರಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲೂ ಸಕಲ ಸಿದ್ಧತೆ ಮಾಡಲಾಗುತ್ತಿದೆ. ಈ ಶಾಲೆಗೆ 72 ವಸಂತಗಳು ತುಂಬಿದ್ದು, ಇಲ್ಲಿ ಓದಿದ ಸಾವಿರಾರು ವಿದ್ಯಾರ್ಥಿನಿಯರು ಅಮೋಘ ಸಾಧನೆ ಮಾಡಿದ್ದಾರೆ.
ಶಾಲೆಗೆ ಸ್ವಂತ ಮೈದಾನವಿದ್ದು, 26 ಕೊಠಡಿಗಳಿವೆ. ಮಕ್ಕಳಿಗೆ ಶೌಚಾಲಯ, ಗ್ರಂಥಾಲಯ, ಕಂಪ್ಯೂಟರ್ ಕಲಿಕೆ ಸೇರಿ ಕನ್ನಡ ಮತ್ತು ಆಂಗ್ಲ ಮಾಧ್ಯಮಗಳನ್ನು ಬೋಧಿಸಲಾಗುತ್ತಿದೆ. 1-8 ಕನ್ನಡ ಮತ್ತು 6-8 ಆಂಗ್ಲ ಮಾಧ್ಯಮ ವಿಭಾಗ 7 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಶಾಲೆಯಲ್ಲಿ ಸದ್ಯ 460 ವಿದ್ಯಾರ್ಥಿನಿಯರಿದ್ದು, 15 ಶಿಕಕ್ಷ-ಶಿಕ್ಷಕಿಯರಿದ್ದಾರೆ. ಚಿತ್ರಕಲಾ ಶಿಕ್ಷಕರ ಹುದ್ದೆ ಖಾಲಿ ಇದೆ. ಶಾಲೆಯಲ್ಲಿ ಸರಕಾರದ ಯೋಜನೆಗಳಾದ ಸೈಕಲ್ ವಿತರಣೆ, ಬಿಸಿಯೂಟ, ಸಮವಸ್ತ್ರ, ಪ್ರವಾಸ, ಉಚಿತ ಪಠ್ಯಪುಸ್ತಕ ವಿತರಣೆ ಮಾಡಲಾಗುತ್ತದೆ. ಎಲ್ಲ ಕಂಪ್ಯೂಟರ್‌ಗಳು ದುರಸ್ತಿ ಇರುವ ಕಾರಣ ಪ್ರಾಯೋಗಿಕ ತರಗತಿ ನಡೆಯುತ್ತಿಲ್ಲ. ತರಬೇತಿ ಪಡೆದ ಶಿಕ್ಷಕ-ಶಿಕ್ಷಕಿಯರು ಇರುವುದರಿಂದ ಉತ್ತಮ ಬೋಧನೆಯಿಂದ ಈ ಶಾಲೆ ವಿದ್ಯಾರ್ಥಿನಿಯರ ಮತ್ತು ಪಾಲಕರ ಮನಗೆದ್ದಿದೆ.
ಈ ಶಾಲೆಯ ಕೆಲ ಕೊಠಡಿಗಳು 50 ವರ್ಷಗಳ ಹಿಂದೆ ನಿರ್ಮಿಸಿರುವುದರಿಂದ ಶಿಥಿಲಾವಸ್ಥೆ ತಲುಪಿವೆ. ಸುಮಾರು 10 ಕೊಠಡಿಗಳ ಮೇಲ್ಛಾವಣಿ ಕಾಂಕ್ರೀಟ್ ಉದುರಿ ಬೀಳುತ್ತಿದೆ. ಹಲವು ವರ್ಷಗಳಿಂದ ಶಾಲೆಯ ಗೋಡೆಗಳು ಸುಣ್ಣ, ಬಣ್ಣ ಕಾಣದೇ ಮಾಸಿ ಹೋಗಿವೆ. ಶಾಲಾ ಆವರಣದಲ್ಲಿರುವ ಕೈ ತೋಟದ ಸಣ್ಣಪುಟ್ಟ ಗಿಡ ಮರಗಳು ಒಣಗುತ್ತಿವೆ. ಸುತ್ತಲಿನ ತಂತಿ ಬೇಲಿಯನ್ನು ದುಷ್ಕರ್ಮಿಗಳು ನಾಶ ಮಾಡಿದ್ದಾರೆ.
ಶಾಲೆಯಲ್ಲಿ ದಾನಿಗಳ ನೆರವಿನಿಂದ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಾದರೂ 460 ವಿದ್ಯಾರ್ಥಿನಿಯರಿಗೆ ಇದು ಸಾಲುತ್ತಿಲ್ಲ. ಪ್ರತಿ ವರ್ಷ ಮಳೆಗಾಲದಲ್ಲಿ ಈ ಶಾಲಾವರಣ ಕೆರೆಯಂತೆ ಕಂಡು ಬರುತ್ತಿದೆ. ಇಡೀ ಆವರಣ ಗುಂಡಿ ಪ್ರದೇಶವಾಗಿರುವುದರಿಂದ ಮಳೆ ನೀರು ವಾರಗಟ್ಟಲೇ ನಿಲ್ಲುತ್ತದೆ. ವಿದ್ಯಾರ್ಥಿನಿಯರು, ಬೋಧಕರು ಇದರಲ್ಲಿಯೇ ಓಡಾಡುವ ಸ್ಥಿತಿ ಇದೆ. ಈ ಶಾಲೆಯಲ್ಲಿ ಕೆಲ ಮೂಲಸೌಕರ್ಯ ಕೊರತೆ ಹೊರತು ಪಡಿಸಿದರೆ ಉಳಿದಂತೆ ಮಾದರಿಯಾಗಿದೆ.
ಈಗಾಗಲೇ ಸರಕಾರದ ಸೂಚನೆಯಂತೆ ಮೇ 16ರಿಂದ ಶಾಲಾರಂಭ ಮಾಡಲಾಗುತ್ತದೆ. ತಳೀರು, ತೋರಣ ಕಟ್ಟಿ ಇಡೀ ಶಾಲಾ ಮೇಲುಸ್ತುವಾರಿ ಸಮಿತಿ ಮತ್ತು ನಗರಸಭೆಯ ಸದಸ್ಯರ ನೇತೃತ್ವದಲ್ಲಿ ಸುತ್ತಲಿನ ವಾರ್ಡ್‌ಗಳಲ್ಲಿ ಜಾಥಾ ನಡೆಸಲಾಗುತ್ತದೆ. ಗುಲಾಬಿ ಹೂವು ನೀಡಿ ವಿದ್ಯಾರ್ಥಿನಿಯರನ್ನು ಸ್ವಾಗತಿಸಲಾಗುತ್ತದೆ. ನಮ್ಮ ಶಾಲೆಯಲ್ಲಿ ಆಂಗ್ಲ-ಕನ್ನಡ ಮಾಧ್ಯಮಗಳಿದ್ದು, ಎರಡಕ್ಕೂ ಬೇಡಿಕೆ ಇದೆ. ಬಿಇಒ ಸೇರಿ ಇಲಾಖೆ ಅಧಿಕಾರಿಗಳು ನಮ್ಮ ಶಾಲೆಯ ಬಗ್ಗೆ ಕಾಳಜಿ ಹೊಂದಿದ್ದಾರೆ. 6 ಕೊಠಡಿಗಳು ಶಿಥಿಲಾವಸ್ಥೆಯಲ್ಲಿದ್ದು, ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ
. –ಬಲಭೀಮಾಚಾರ್ಯ ಜೋಶಿ ಮುಖ್ಯ ಶಿಕ್ಷಕ –ಕೆ. ನಿಂಗಜ್ಜ