ಗಂಗಾವತಿ: ಶಾಸಕ ಪರಣ್ಣ ಮುನವಳ್ಳಿ ಅವರಿಗೆ ಕೋವಿಡ್ 19 ಸೋಂಕು ತಾಗಿರುವುದು ದೃಢವಾಗಿದೆ.
ಶಾಸಕರಿಗೆ ಯಾವ ಮೂಲದಿಂದ ಕೋವಿಡ್ ಸೋಂಕು ತಾಗಿದೆ ಎಂದು ತಿಳಿದು ಬಂದಿಲ್ಲ. ಭಾನುವಾರ ಮಧ್ಯಾಹ್ನ ಬೆಂಗಳೂರಿಗೆ ತೆರಳುವ ಸಂದರ್ಭದಲ್ಲಿ ಮೊಬೈಲ್ ಸಂದೇಶದ ಮೂಲಕ ಸೋಂಕು ತಾಗಿರುವ ಮಾಹಿತಿಯನ್ನು ಶಾಸಕರಿಗೆ ನೀಡಲಾಗಿದೆ.
ಈ ಕುರಿತು ಉದಯವಾಣಿ ಜತೆ ಮಾತನಾಡಿದ ಶಾಸಕ ಪರಣ್ಣ ಮುನವಳ್ಳಿ, ಹಲವು ದಿನಗಳಿಂದ ಕೋವಿಡ್ ರೋಗದ ಮುನ್ನೆಚ್ಚರಿಕೆ ಪಾಲಿಸಲಾಗಿದೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಕೋವಿಡ್ ಪರೀಕ್ಷೆ ಒಳಗಾಗಿದ್ದು, ಇದೀಗ ಸೋಂಕು ದೃಢಪಟ್ಟಿದೆ. ಹೇಗೆ ಸೋಂಕು ತಗುಲಿದೆ ಗೊತ್ತಾಗುತ್ತಿಲ್ಲ. ಜನತೆ ಆತಂಕ ಪಡುವ ಅಗತ್ಯವಿಲ್ಲ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೇಗ ಗುಣಮುಖರಾಗಿ ಕ್ಷೇತ್ರ ಮರಳಲಿದ್ದೇನೆ. ಜನರು ಸಹ ನೆಗಡಿ, ಶೀತ ಸತತ ಜ್ವರ ಇತ್ಯಾದಿ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಕೋವಿಡ್ ಟೆಸ್ಟ್ ಮಾಡಿಕೊಂಡು ಚಿಕಿತ್ಸೆ ಪಡೆಯಬೇಕು. ಕೋವಿಡ್ ರೋಗಕ್ಕೆ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಗುಣಮುಖರಾಗಲು ಸಾಧ್ಯ ಎಂದರು.
ಶಾಸಕರ ಕಚೇರಿ ಸೀಲ್ ಡೌನ್ ಸಾಧ್ಯತೆ: ಶಾಸಕ ಪರಣ್ಣ ಮುನವಳ್ಳಿ ಗೆ ಕೋವಿಡ್ ಸೋಂಕು ತಾಗಿರುವ ಕಾರಣ ಶಾಸಕರ ಗನ್ ಮ್ಯಾನ್, ವಾಹನ ಚಾಲಕ ಸೇರಿ ಸಂಪರ್ಕಿತರ ಗಂಟಲು ದ್ರವ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ನಿಗದಿತ ಸಮಯದ ವರೆಗೆ ಶಾಸಕರ ನಿವಾಸದ ಕಚೇರಿ ಮತ್ತು ತಾ.ಪಂ.ನಲ್ಲಿರುವ ಕಚೇರಿಯನ್ನು ಸೀಲ್ ಡೌನ್ ಮಾಡಲು ಅಧಿಕಾರಿಗಳು ಸಿದ್ದತೆ ನಡೆಸಿದ್ದಾರೆ.