ಜಗಳೂರು: ಬಾರದ ಮುಂಗಾರು ಮಳೆಯಿಂದಾಗಿ ಕಂಗೆಟ್ಟಿರುವ ತಾಲೂಕಿನ ಖೀಲಾಕಣಕುಪ್ಪೆ ಗ್ರಾಮಸ್ಥರು ದೇವರಿಗೆ ಮೊರೆಯಿಟ್ಟಿದ್ದಾರೆ. ಕಣ್ವಕುಪ್ಪೆ ಕೋಟೆಯ ಉಚ್ಚಂಗಿ ಹೊಂಡದಲ್ಲಿ ಮಂಗಳವಾರ ಗಂಗಾಪೂಜೆ ನೆರವೇರಿಸಿದ ಗ್ರಾಮಸ್ಥರು ಗ್ರಾಮದೇವತೆ ಮಾರಿಕಾಂಭ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರು.
ಗ್ರಾಮಕ್ಕೆ ಹೊಂದಿಕೊಂಡಿರುವ ಕಣ್ವಕುಪ್ಪೆ ಐತಿಹಾಸಿಕ ಕೋಟೆಯಲ್ಲಿನ ಉಚ್ಚಂಗಿ ಹೊಂಡಕ್ಕೆ ಮಾರಿಕಾಂಭ ದೇವಿಯ ಉತ್ಸವ ಮೂರ್ತಿಯೊಂದಿಗೆ ತೆರಳಿದ ಗ್ರಾಮಸ್ಥರು ವಿವಿಧ ರೀತಿಯ ಪೂಜೆ ಕೈಂಕರ್ಯಗಳನ್ನು ನೆರವೇರಿಸಿದರು. ಗಂಗಾಪೂಜೆಯ ನಂತರ ಅರೆ ಬೆತ್ತಲೆಯಲ್ಲಿ ಜಲ ಗಂಗೆಯನ್ನು ಹೊತ್ತ ಮಕ್ಕಳನ್ನು ಗ್ರಾಮದ ದೇವಸ್ಥಾನದವರೆಗೆ ವಾದ್ಯ ಮೇಳದೊಂದಿಗೆ ಉತ್ಸವ ನಡೆಸಿದರು.
ಜಲಗಂಗೆಯ ಪುರ ಪ್ರವೇಶಿಸುತ್ತಿದ್ದಂತೆ ಹೆಂಗಳೆಯರು ನೀರು ಹಾಕಿ ಭಕ್ತಿಯಿಂದ ಗಂಗೆಯನ್ನು ಸ್ವಾಗತಿಸಿದರು. ದೇವಸ್ಥಾನದ ಆವರಣದಲ್ಲಿ ವಿಶೇಷ ಪೂಜೆ ನೆರವೇರುತ್ತಿದ್ದಂತೆ ಅರಬೆತ್ತಲೆಯಲ್ಲಿ ಮಕ್ಕಳು ಹೊತ್ತು ತಂದ ಗಂಗೆಯನ್ನು ದೇವಸ್ಥಾನದ ಅಭಿಮುಖದಲ್ಲಿನ ಬಲಿ ಕೊಡುವ ಸ್ಥಳದಲ್ಲಿ ಗಂಗೆ ಸುರಿದು ಮಳೆಗಾಗಿ ಪ್ರಾರ್ಥಿಸಿದರು.
ಒಂಬತ್ತು ಬಾಲಕರ ತಲೆಯ ಮೇಲೆ ಗಂಗೆ ತಂದು ಗ್ರಾಮ ದೇವತೆಯ ಅಭಿಮುಖದ ಪ್ರಾಣಿ ಬಲಿ ಕೊಡುವ ಜಾಗದಲ್ಲಿ ಸುರಿದರೆ ಮಳೆಯಾಗುತ್ತದೆ ಎಂಬುದು ಈ ಗ್ರಾಮಸ್ಥರು ನಂಬಿಕೆ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಮಳೆಯಾಗಿಲ್ಲ. ಅನಾದಿ ಕಾಲದಿಂದ ಹಿರಿಯರು ನಡೆಸಿಕೊಂಡು ಬಂದ ಈ ಧಾರ್ಮಿಕ ಕಾರ್ಯ ನೆರವೇರಿಸಿದ್ದೇವೆ.
ಮಳೆ ಬರುತ್ತದೆ. ಉತ್ತಮ ಬೆಳೆಯಾಗುತ್ತದೆ ನಮ್ಮ ಕಷ್ಟ ಕಾಲಗಳು ದೂರವಾಗುತ್ತವೆ ಎನ್ನುತ್ತಾರೆ ಮಾರಿಕಾಂಭ ದೇವಿ ಪೂಜಾರಿ ತಿಪ್ಪೇಸ್ವಾಮಿ. ಉತ್ಸವ ಹಿನ್ನಲೆಯಲ್ಲಿ ದೇವಸ್ಥಾನ ಝಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡಿತ್ತು. ದೇವಿಯನ್ನು ಅಲಂಕೃತ ಹೂವುಗಳಿಂದ ವಿಶೇಷವಾಗಿ ಶೃಂಗರಿಸಲಾಗಿತ್ತು.
ಗ್ರಾಮದ ಮುಖಂಡರಾದ ಬಂಗಾರಪ್ಪ, ಗಾದ್ರಪ್ಪ, ಗುಡೇಕೋಟೆ ಮಾರಪ್ಪ, ತಿಮ್ಮಣ್ಣ, ಬೊಮ್ಮಲಿಂಗಪ್ಪ, ಕೆ.ಟಿ. ತಿಪ್ಪೇಸ್ವಾಮಿ, ಸಣ್ಣ ಓಬಯ್ಯ, ರಾಜನಹಟ್ಟಿ ಸಿದ್ದಪ್ಪ, ದಾಸರು ಗುರುಸ್ವಾಮಿ, ಕೆಳಗೆರೆ ಬಸಪ್ಪ, ಚೌಡಪ್ಪ, ಜಗದೀಶ್, ಗ್ರಾಪಂ ಸದಸ್ಯರಾದ ಬಂಗಾರಪ್ಪ, ಗಾದ್ರಪ್ಪ, ಎಸ್‌ಡಿಎಂಸಿ ಅಧ್ಯಕ್ಷ ರಾಮಣ್ಣ ಸೇರಿದಂತೆ ಮಹಿಳೆಯರು ಮಕ್ಕಳು ಭಾಗವಹಿಸಿದ್ದರು.