Advertisement

ಗಂಗನಪಳ್ಳ ಪುನಃಶ್ಚೇತನ ! 42 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ

12:32 PM Jan 14, 2023 | Team Udayavani |

ಮಹಾನಗರ: ನಗರದ ಏಕೈಕ ಬೃಹತ್‌ ಕದ್ರಿ ಪಾರ್ಕ್‌ ಒಳ -ಹೊರ ಭಾಗದಲ್ಲಿ ಅಭಿವೃದ್ಧಿ ಕಾಣುತ್ತಿದೆ. ಇದಕ್ಕೆ ಪೂರಕವಾಗಿ ಇದೀಗ ಕದ್ರಿ ಪಾರ್ಕ್‌ ಒಳಭಾಗದ ಗಂಗನಪಳ್ಳ ಪುನಃಶ್ಚೇತನಗೊಳ್ಳುತ್ತಿದೆ. ಭವಿಷ್ಯದಲ್ಲಿ ಪಾರ್ಕ್‌ನ ಗಿಡಗಳಿಗೆ ನೀರಿನ ಸಮಸ್ಯೆ ನಿವಾರಣೆಯ ಉದ್ದೇಶಕ್ಕೆ ಗಂಗನಪಳ್ಳವನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಈ ಪಳ್ಳದಲ್ಲಿ ಸುಮಾರು 30 ಲಕ್ಷ ಲೀಟರ್‌ ನೀರು ನಿಲ್ಲಿಸಲು ಯೋಜನೆ ರೂಪಿಸಲಾಗಿದೆ.

Advertisement

ಸುಮಾರು 42 ಲಕ್ಷ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳು ಆರಂಭಗೊಂಡಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಪಾಳು ಬಿದ್ದಿದ್ದ ಗಂಗನಪಳ್ಳ ಅಭಿವೃದ್ಧಿಯಾಬೇಕು ಎಂಬ ಕೂಗು ಹಲವು ವರ್ಷಗಳದ್ದು, ಈ ನಿಟ್ಟಿನಲ್ಲಿ ಸ್ಮಾರ್ಟ್‌ಸಿಟಿ ಮತ್ತು ಮಂಗಳೂರು ಪಾಲಿಕೆಯಿಂದ ಅಭಿವೃದ್ಧಿಯ ಬಗ್ಗೆ ಪ್ರಸ್ತಾವವಾಗಿತ್ತೇ ವಿನಾ ಯಾವುದೇ ಮುಂದುವರಿದ ಕಾಮಗಾರಿ ನಡೆದಿರಲಿಲ್ಲ. ಇದೀಗ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಗಂಗನಪಳ್ಳ ಅಭಿವೃದ್ಧಿಗೆ ಮುಂದೆ ಬಂದಿದೆ.

ಇಲ್ಲಿನ ಕದ್ರಿಯ ಮುಖ್ಯ ಪಾರ್ಕ್‌ ನ ನಿರ್ವಹಣೆಯನ್ನು ತೋಟಗಾರಿಕೆ ಇಲಾಖೆ ನಡೆಸುತ್ತಿದೆ. ಪಾರ್ಕ್‌ಗೆ ನೀರುಣಿಸಲು ಪ್ರತೀ ದಿನ ಸುಮಾರು 2 ಲಕ್ಷ ಲೀಟರ್‌ ನೀರು ಬೇಕಾಗುತ್ತದೆ. ಈ ನೀರು ಬೆಂದೂರ್‌ವೆಲ್‌ನಿಂದ ಸರಬರಾಜು ಆಗುತ್ತದೆ.

ಇದೀಗ ಮತ್ತಷ್ಟು ಹೆಚ್ಚುವರಿ ನೀರು ನೀಡುವಂತೆ ತೋಟಗಾರಿಕಾ ಇಲಾಖೆಗೆ ಮುಡಾ ಮನವಿ ಮಾಡಿದೆ. ಸುಮಾರು 4 ಲಕ್ಷ ಲೀಟರ್‌ ನೀರು ನೀಡಿದರೆ ಹೆಚ್ಚುವರಿ 2 ಲಕ್ಷ ಲೀ. ನೀರನ್ನು ಗಂಗನಪಳ್ಳದಲ್ಲಿ ಶೇಖರಿಸಲಾಗುತ್ತದೆ. ಮೂರು ವಾರದಲ್ಲಿ ಈ ಹಳ್ಳ ತುಂಬಿಸುವ ಯೋಜನೆ ರೂಪಿಸಲಾಗಿದೆ.

ಪಳ್ಳದಲ್ಲಿ ಬಾತುಕೋಳಿ
ಗಂಗನಪಳ್ಳವನ್ನು ಸಾರ್ವಜನಿಕರಿಗೆ ಆಕರ್ಷಣೆಯಿಂದ ಕಾಣುವಂತೆ ಮಾಡುವ ಉದ್ದೇಶ ಮುಡಾದ್ದಾಗಿದೆ. ಈ ನಿಟ್ಟಿನಲ್ಲಿ ಪಳ್ಳದಲ್ಲಿ ಬಾತುಕೋಳಿಯನ್ನು ಬಿಡಲಾಗುತ್ತದೆ. ಅದೇ ರೀತಿ, ನೀರಿನಲ್ಲಿ ಬದುಕುವ ಸಸ್ಯಗಳು, ವೈವಿದ್ಯಮಯ ಮೀನುಗಳನ್ನು ಹಾಕಲಾಗುತ್ತದೆ. ಪಳ್ಳದಲ್ಲಿದ್ದ ಹೂಳು ತೆಗೆಯಲಾಗಿದ್ದು, ಮಣ್ಣು ಹಾಕಿ ಹದಗೊಳಿಸಲಾಗಿದೆ. ಕಾಂಕ್ರೀಟ್‌ ಅಳವಡಿಸುವ ಬದಲು ಆವೆ ಮಣ್ಣು ಹಾಕಲಾಗಿದೆ. ಸುತ್ತಲೂ ಪಾಟ್‌ ಅಳವಡಿಸಿ ಸುಂದರಗೊಳಿಸಲಾಗುತ್ತದೆ.

Advertisement

ಅಭಿವೃದ್ಧಿ ಕಾರ್ಯ ಆರಂಭ
ಹಲವು ವರ್ಷಗಳಿಂದ ಬೇಡಿಕೆಯಾಗಿದ್ದ ಗಂಗನಪಳ್ಳವನ್ನು ಮುಡಾ ಅಭಿವೃದ್ಧಿಪಡಿಸುತ್ತಿದೆ. ಈಗಾಗಲೇ ಕಾಮಗಾರಿಗಳು ಆರಂಭಗೊಂಡಿದೆ. ಗಂಗನಪಳ್ಳದಲ್ಲಿ ಸುಮಾರು 30 ಲಕ್ಷ ಲೀಟರ್‌ ನೀರು ಶೇಖರಣೆ ಮಾಡುವ ಯೋಜನೆ ಇದಾಗಿದ್ದು ಸುಮಾರು 42 ಲಕ್ಷ ರೂ.ನಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಮುಖ್ಯ ಪಾರ್ಕ್‌ನಲ್ಲಿರುವ ಕಾರಂಜಿ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಈ ಎರಡೂ ಕಾಮಗಾರಿಗಳು ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.
– ರವಿಶಂಕರ ಮಿಜಾರು, ಮುಡಾ ಅಧ್ಯಕ್ಷ

16 ಲಕ್ಷ ರೂ.ನಲ್ಲಿ ಕಾರಂಜಿಗೆ ಹೊಸ ರೂಪ
ಕದ್ರಿ ಪಾರ್ಕ್‌ ಮುಖ್ಯಧ್ವಾರದ ಬಳಿ ಇರುವ ಕಾರಂಜಿಗೆ ಹೊಸ ಸ್ವರೂಪ ನೀಡಲಾಗುತ್ತಿದೆ. ಈಗಾಗಲೇ ಸುಮಾರು 16 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕೆಲಸಗಳು ಆರಂಭಗೊಂಡಿದೆ. ಈ ಕಾರಂಜಿಯನ್ನು ವೃತ್ತಾಕರದಲ್ಲಿ ರಚನೆ ಮಾಡಲಾಗಿದ್ದು, ಪಾರ್ಕ್‌ ಪ್ರವೇಶಿಸುವಾಗ ಆಕರ್ಷಕವಾಗಿ ಕಾಣಲಿದೆ. ಸುಮಾರು 1.50 ಮೀಟರ್‌ ಇಳಿಜಾರು ವ್ಯವಸ್ಥೆ ಇರಲಿದೆ.

*ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next