ಡೆಹ್ರಾಡೂನ್: ಪುಣ್ಯ ನದಿ ಗಂಗಾ “ಸಜೀವಿ’! ಇದೇನಿದು ಮನುಷ್ಯರಿಗೆ ಹೇಳುವಂತೆ ನದಿಯನ್ನು ಸಜೀವಿ ಎಂದು ಹೇಳುತ್ತಿದ್ದೀರಲ್ಲ… ಅಂದುಕೊಂಡಿರಾ? ಉತ್ತರಾಖಂಡ ಹೈಕೋರ್ಟ್ ಹಿಂದುಗಳ ಪವಿತ್ರ ನದಿಯಾಗಿರುವ ಗಂಗಾ ನದಿಗೆ “ಸಜೀವಿ’ ಎಂದು ಮಾನ್ಯತೆ ನೀಡಿದೆ. “ಜೀವನದಿ’ ಅರ್ಥಾತ್ ಜೀವಂತ ವ್ಯಕ್ತಿ’ ಎಂಬರ್ಥದಲ್ಲಿ ಹೇಳಿದೆ.
ದೇಶದ ಇತಿಹಾಸದಲ್ಲಿ ನದಿಗೆ ಮನುಷ್ಯ ಜೀವಿಗೆ ನೀಡಲಾಗುವ ಮಾದರಿಯಲ್ಲಿ ಮಾನ್ಯಮಾಡಿರುವ ಅಪರೂಪದ ಮತ್ತು ಮೊದಲ ಪ್ರಕರಣವೇ ಇದಾಗಿದೆ. ಇದೇ ವೇಳೆ ಯಮುನಾ ಹಾಗೂ ಉಪನದಿಗಳನ್ನು ಸಜೀವಿ ಎಂದೇ ಪರಿಗಣಿಸಿದೆ.
ಪ್ರಧಾನಿ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸ್ವತ್ಛ ಭಾರತ ಯೋಜನೆಯಡಿಯಲ್ಲಿ ಗಂಗಾ ಶುದ್ಧೀಕರಣ ಕಾರ್ಯವೂ ನಡೆದಿದೆ. ಕ್ಲೀನ್ ಗಂಗಾ ರಾಷ್ಟ್ರೀಯ ಮಿಷನ್ ಸ್ವತ್ಛತೆ ಕಾಪಾಡಿಕೊಳ್ಳಲು ಸಾಕಷ್ಟು ಯೋಜನೆಗಳಿಗೆ ಸಮ್ಮತಿ ನೀಡಿ ಕಾರ್ಯಾರಂಭಗೊಂಡಿದೆ. ಇದಕ್ಕೆ ಉತ್ತರಾಖಂಡ ಕೈಜೋಡಿಸಿದೆ. 1,900 ಕೋಟಿ ರೂ. ಬಜೆಟ್‌ನಲ್ಲಿ 3 ರಾಜ್ಯಗಳು ನದಿ ಶುದ್ಧೀಕರಣದಲ್ಲಿ ತೊಡಗಿಸಿಕೊಂಡಿವೆ.
ಏನು ಪ್ರಯೋಜನ?
ಹೀಗೆಂದು ಹೇಳಿ ಮಾನ್ಯಗೊಳಿಸಿದರೆ ಶುದ್ಧತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆಯೇ? ಒಂದು ಲೆಕ್ಕದಲ್ಲಿ ಹೌದು. ಮನುಷ್ಯನಿಗಿರುವ ಹಕ್ಕುಗಳು ಗಂಗಾನದಿಯೂ ಹೊಂದಿರಲಿದೆ. ಒಂದೊಮ್ಮೆ, ಮಲೀನಗೊಳಿಸಿದಲ್ಲಿ ಒಬ್ಬ ಜೀವಂಥ ವ್ಯಕ್ತಿ ವಿರುದ್ಧ ಅಪರಾಧ ಎನ್ನುವಂತೆ ಪರಿಗಣಿಸಲಾಗುತ್ತದೆ. ಇಂಥದ್ದೇ ಪ್ರಕರಣ ನ್ಯೂಜಿಲೆಂಡ್‌ನಲ್ಲಿ ಹಿಂದೆ ನಡೆದಿದ್ದು, 145 ಕಿ.ಮೀ. ಉದ್ದದ ನದಿ ನಾಂಗ್‌ನೂಯ್‌ಗೆ ಸಂಸತ್‌ನಲ್ಲಿಯೇ ಮಸೂದೆ ಮಂಡಿಸಲಾಗಿತ್ತು.