ಮೈಸೂರು: ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆ ಬಾವಿ ಕೊರೆಸಲು ಟೆಂಡರ್ ಪದ್ಧತಿ ಕೈಬಿಟ್ಟು, ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾವಣೆ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ನಗರದ ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ಸೋಮವಾರ ಸಮಾಜ ಕಲ್ಯಾಣ ಇಲಾಖೆ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ಸಹಯೋಗದಲ್ಲಿ ಆಯೋಜಿಸಿದ್ದ ವಿಭಾಗೀಯ ಮಟ್ಟದ ಫಲಾನುಭವಿಗಳಿಗೆ ಅರಿವು ಕಾರ್ಯಾಗಾರ, ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈವರೆಗೆ ಕೊಳವೆ ಬಾವಿ ಕೊರೆಸಲು, ವಿದ್ಯುತ್ ಸಂಪರ್ಕ, ಪಂಪ್‌ಸೆಟ್ ಇನ್ನಿತರ ಸೌಲಭ್ಯ ಕಲ್ಪಿಸಲು ಟೆಂಡರ್ ನೀಡಲಾಗುತ್ತಿತ್ತು. ಈ ಕುರಿತು ಅನೇಕ ದೂರುಗಳು ಬಂದಿವೆ. ಆದ್ದರಿಂದ ಟೆಂಡರ್ ಪದ್ಧತಿ ತೆಗೆದುಹಾಕಲಾಗಿದೆ. ಫಲಾನುಭವಿಗಳಿಗೆ ನೇರವಾಗಿ ಕೊಡುವ ಹಣದಲ್ಲಿ ಬೋರ್‌ವೆಲ್ ಕೊರೆಸುವುದು, ಪಂಪ್‌ಸೆಟ್ ಖರೀದಿ ಸೇರಿ ಎಲ್ಲ ಸೌಲಭ್ಯ ಪಡೆದುಕೊಳ್ಳಬೇಕು. ಇದರಿಂದ ಹಣ ದುರ್ಬಳಕೆ ತಡೆದು ವ್ಯವಸ್ಥೆಯಲ್ಲೂ ಪಾರದರ್ಶಕತೆ ಕಾಯ್ದುಕೊಳ್ಳಬಹುದಾಗಿದೆ ಎಂದರು.
ಕೊಳವೆ ಬಾವಿ ಸೌಲಭ್ಯ ಪಡೆದುಕೊಳ್ಳಲು ಅರ್ಜಿದಾರರ ವಯಸ್ಸು 60ರ ಮೇಲಿರಬೇಕೆಂಬ ನಿರ್ಬಂಧವನ್ನೂ ತೆಗೆದುಹಾಕಲಾಗಿದೆ. ಯಾವುದೇ ವಯಸ್ಸಿನ ಮಿತಿವಿಲ್ಲದೆ ಎಲ್ಲರೂ ಸಹ ಅರ್ಜಿ ಸಲ್ಲಿಸಬಹುದು. ಪ್ರಸಕ್ತ ವರ್ಷದಲ್ಲಿ 1,700 ಕೊಳವೆಬಾವಿ ಕೊರೆಸಲು ತೀರ್ಮಾನಿಸಲಾಗಿದೆ ಎಂದರು.
ಬಿಜೆಪಿ ವತಿಯಿಂದ ಜ.2ರಿಂದ 12ರವರೆಗೆ ರಾಜ್ಯ ದಲ್ಲಿ ಬೂತ್ ವಿಜಯ್ ಅಭಿಯಾನ ಆರಭಿಸ ಲಾಗಿದ್ದು, ಈಗಾಗಲೇ ಶೇ.60ರಷ್ಟು ಯಶ ಸ್ವಿಯಾಗಿ ನಡೆದಿದೆ. ರಾಜ್ಯದ ಎಲ್ಲಾ 58,186 ಬೂತ್‌ಗಳಲ್ಲಿಯೂ ಪಕ್ಷದ ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ.
-ಕೋಟ ಶ್ರೀನಿವಾಸ ಪೂಜಾರಿ, ಸಚಿವ