Advertisement

ಗ್ಯಾಂಗ್‌ಮನ್‌ಗಳಿಗಿಲ್ಲ ಸೂಕ್ತ ಸವಲತ್ತು

12:00 PM Jul 28, 2022 | Team Udayavani |

ಉಡುಪಿ: ವಿದ್ಯುತ್‌ ಇಲ್ಲದೆ ದಿನ ಕಳೆಯುವುದೇ ಕಷ್ಟಕರ. ಮಳೆಗಾಲದಲ್ಲಿ ಒಂದು ಕ್ಷಣ ವಿದ್ಯುತ್‌ ಹೋದರೂ ಮೆಸ್ಕಾಂಗೆ ಹಿಡಿಶಾಪ ಹಾಕುವವರು ಹಲವಾರು ಮಂದಿ. ಆದರೆ ಮೆಸ್ಕಾಂ ಗ್ಯಾಂಗ್‌ಮನ್‌ ಆಗಿ ಕರ್ತವ್ಯ ನಿರ್ವಹಿಸುವ ಸಿಬಂದಿಗೆ ಯಾವುದೇ ಸವಲತ್ತುಗಳು ಇಲ್ಲದಂತಾಗಿದೆ. ತಾತ್ಕಾಲಿಕವಾಗಿ ಕೆಲಸ ನಿರ್ವಹಿಸುತ್ತಿರುವ ಇವರ ಸೇವೆ ಖಾಯಂ ಆಗಿಲ್ಲ. ಕನಿಷ್ಠ ಸುರಕ್ಷೆಯೇ ಇವರಿಗಿಲ್ಲದಂತಾಗಿದೆ.

Advertisement

ಗ್ಯಾಂಗ್‌ಮನ್‌ ಕರ್ತವ್ಯವೇನು? ಮೆಸ್ಕಾಂ ಇಲಾಖೆಯಲ್ಲಿ ಹಲವು ವರ್ಷ ಗಳಿಂದ ಮಾನ್ಸೂನ್‌ ಗ್ಯಾಂಗ್‌ಮನ್‌ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವಿದ್ಯುತ್‌ ತಂತಿ ಹಾದು ಹೋಗುವ ಕಂಬ ಹಾಗೂ ಪಕ್ಕದ ಮರಗಳನ್ನು ಹತ್ತಿ ಅಪಾಯಕಾರಿ ಸ್ಥಿತಿಯಲ್ಲಿ ಕೆಲಸ ಮಾಡುತ್ತಾರೆ. ವಿದ್ಯುತ್‌ ಪೂರೈಕೆಯಲ್ಲಿ ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಆಗದಂತೆ ಮತ್ತು ಜೀವಹಾನಿ ಸಂಭವಿಸದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಮೆಸ್ಕಾಂ ಈ ವಿಶೇಷ ಯೋಜನೆ ರೂಪಿಸಿದೆ. ತಾಂತ್ರಿಕ ಕೆಲಸ, ಬಾಕಿ ಬಿಲ್‌ ವಸೂಲಿ, ಕಂಬ ಹತ್ತಿ ಪರಿಶೀಲನೆಯನ್ನು ಮೆಸ್ಕಾಂ ಲೈನ್‌ಮನ್‌ಗಳು ನೋಡಿಕೊಂಡರೆ, ಕಂಬ, ಲೈನ್‌ಗಳ ಮೇಲೆ ಬೀಳುವ ಅಪಾಯಕಾರಿ ಮರ ತೆರವುಗೊಳಿಸುವ ಕೆಲಸ ಮತ್ತು ಕಂಬಗಳ ಬದಲಾವಣೆ, ಕೆಳಗೆ ಬಿದ್ದಿರುವ ತಂತಿಗಳ ನಿರ್ವಹಣೆ ಕೆಲಸಗಳನ್ನು ಮಾನ್ಸೂನ್‌ ಗ್ಯಾಂಗ್‌ ಪಡೆ ಮಾಡುತ್ತದೆ.

ಗುತ್ತಿಗೆ ಆಧಾರದಲ್ಲಿ ನೇಮಕ

ಮೆಸ್ಕಾಂ ಮಾನ್ಸೂನ್‌ ಪ್ರಾರಂಭವಾಗುವ ಜೂನ್‌ ತಿಂಗಳಲ್ಲಿ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕ ಅವಧಿಗೆ ಈ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತದೆ. ಮಳೆಗಾಲ ಮುಗಿದ ಬಳಿಕ ಇವರಿಗೆ ಕೆಲಸವಿಲ್ಲ. ಮತ್ತೇನಿದ್ದರೂ ಮುಂದಿನ ಮಳೆಗಾಲಕ್ಕೆ. ಹೀಗಾಗಿ ವರ್ಷದ ಸೀಮಿತ ಅವಧಿಯಲ್ಲಿ ಮಾತ್ರ ಅವರಿಗೆ ಉದ್ಯೋಗ ಸಿಗುತ್ತಿದೆ.

ಉದ್ಯೋಗ ಭದ್ರತೆಯಿಲ್ಲ

Advertisement

ನೇಮಕಗೊಳ್ಳುವ ಗ್ಯಾಂಗ್‌ಮನ್‌ಗಳಲ್ಲಿ ಹೆಚ್ಚಿನವರು ಸ್ಥಳೀಯರು. ಆದರೆ ಇವರ ಉದ್ಯೋಗಕ್ಕೆ ಯಾವುದೇ ಭದ್ರತೆ ಇಲ್ಲ. ಗುತ್ತಿಗೆದಾರ ನಿಗದಿಪಡಿಸಿದ ವೇತನ ಹೊರತುಪಡಿಸಿ ಇನ್ನಾವುದೇ ಸವಲತ್ತು ಸಿಗುತ್ತಿಲ್ಲ. ಸುರಕ್ಷತೆಗೆ ವ್ಯವಸ್ಥೆಗಳಿಲ್ಲ.

ಜಿಲ್ಲೆಯಲ್ಲಿ 138 ಮಂದಿ: ಜಿಲ್ಲೆಯಲ್ಲಿ ಈ ಬಾರಿ ಸಾರ್ವಜನಿಕ ದೂರು ಸೇರಿದಂತೆ ವಿವಿಧ ತುರ್ತು ಕೆಲಸಗಳಿಗೆ ಮೆಸ್ಕಾಂ ಮಾನ್ಸೂನ್‌ ಗ್ಯಾಂಗ್‌ನಲ್ಲಿ ಕಾರ್ಯ ನಿರ್ವಹಿ ಸಲು 138 ಮಂದಿ ತಾತ್ಕಾಲಿಕ ಕಾರ್ಮಿಕರನ್ನು ನಿಯೋಜಿಸಲಾಗಿದೆ. ಉಡುಪಿ ವಿಭಾಗದಲ್ಲಿ 52, ಕುಂದಾಪುರದಲ್ಲಿ 56, ಕಾರ್ಕಳದಲ್ಲಿ 30 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ.

ತಾತ್ಕಾಲಿಕ ಅವಧಿಗೆ ನೇಮಕ: ರಾಜ್ಯಾದ್ಯಂತ ಗ್ಯಾಂಗ್‌ಮನ್‌ಗಳನ್ನು ತಾತ್ಕಾಲಿಕ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ವಿವಿಧ ಸೌಲಭ್ಯಗಳಿಗೆ ಸಂಬಂಧಿಸಿ ಉನ್ನತ ಮಟ್ಟದಲ್ಲಿ ತೀರ್ಮಾನ ತೆಗೆದುಕೊಂಡರೆ ಮಾತ್ರ ಸಾಧ್ಯವಿದೆ. –ನರಸಿಂಹ ಪಂಡಿತ್‌, ಅಧೀಕ್ಷಕ ಎಂಜಿನಿಯರ್‌, ಮೆಸ್ಕಾಂ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next